Advertisement

ಬಿಳಿನೆಲೆ: ನಕ್ಸಲ್‌ ಬಾಧಿತ ಪ್ರದೇಶಗಳಿಗೆ ಡಿಸಿ, ಎಸ್ಪಿ ಭೇಟಿ

09:45 AM Apr 14, 2018 | Team Udayavani |

ಕಡಬ: ನಕ್ಸಲ್ ಬಾಧಿತ ಪ್ರದೇಶವಾದ ಕಡಬ ತಾಲೂಕಿನ ಬಿಳಿನೆಲೆ ಹಾಗೂ ಪರಿಸರದ ಮತಗಟ್ಟೆಗಳಿಗೆ ದ.ಕ. ಡಿಸಿ ಹಾಗೂ ಎಸ್‌ಪಿ ಶುಕ್ರವಾರ ಭೇಟಿ ನೀಡಿ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಲಾದ ಕಾರ್ಯಕ್ರಮದಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಿದರು.

Advertisement

ಸಂವಾದದ ವೇಳೆ ಮಾತನಾಡಿದ ಡಿಸಿ ಶಶಿಕಾಂತ ಸೆಂಥಿಲ್‌ ಅವರು, ವಿಧಾನಸಭಾ ಚುನಾವಣೆಯು ಸುಗಮ ರೀತಿಯಲ್ಲಿ ನಡೆಯಲು ಸರ್ವಸಿದ್ಧತೆಗಳನ್ನು ಏರ್ಪಡಿಸಲಾಗಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ. ಮುಕ್ತವಾಗಿ ಮತ್ತು ಧೈರ್ಯವಾಗಿ ಮತದಾನ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು. ಎಸ್‌ಪಿ ಡಾ| ಬಿ.ಆರ್‌. ರವಿಕಾಂತೇಗೌಡ ಅವರು ಮಾತನಾಡಿ ಕೆಲವು ವರ್ಷಗಳ ಹಿಂದೆ ಈ ಪರಿಸರಕ್ಕೆ ನಕ್ಸಲರು ಭೇಟಿ ನೀಡಿದ್ದರು ಎನ್ನುವ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ನಕ್ಸಲ್ ಬಾಧಿತ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಏನೇ ತೊಂದರೆ ಎದುರಾದರೂ ಎದುರಿಸಲು ಪೊಲೀಸ್‌ ಇಲಾಖೆಯು ಸನ್ನದ್ಧವಾಗಿದೆ. ಸಾರ್ವಜನಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದರು.

ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್‌ ಹಾಗೂ ಕಡಬ ಎಸ್‌ಐ ಪ್ರಕಾಶ್‌ ದೇವಾಡಿಗ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ನಕ್ಸಲ್ ಬಾಧಿತ ಪ್ರದೇಶ ಗಳಾದ ಕೊಣಾಜೆ, ಕೊಂಬಾರು, ಬಿಳಿನೆಲೆ ಹಾಗೂ ಕೈಕಂಬ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಹಾಲುಮಡ್ಡಿ ಮರಗಳಿಂದ ಅಪಾಯ; ದೂರು
ಬಿಳಿನೆಲೆ ಪರಿಸರದಲ್ಲಿ ರಸ್ತೆ ಪಕ್ಕದ ಹಾಲುಮಡ್ಡಿ ಮರಗಳು ಮಳೆಗಾಲದಲ್ಲಿ ರಸ್ತೆಗಡ್ಡ ಮುರಿದು ಬೀಳುವುದರಿಂದ ತೀವ್ರ ತೊಂದರೆಯಾಗುತ್ತಿದೆ. ವಿದ್ಯುತ್‌ ಲೈನ್‌ನ ಮೇಲೆ ಮರಗಳು ಬಿದ್ದು ವಿದ್ಯುತ್‌ ವ್ಯತ್ಯಯದೊಂದಿಗೆ ಪ್ರಾಣಾಪಾಯವೂ ಸಂಭವಿಸಿದೆ. ಈ ಕುರಿತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಡಿಸಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next