ರಾಯಚೂರು: ಮುನಿರಾಬಾದ್- ಮಹೆಬೂಬ್‌ನಗರ ರೈಲು ಮಾರ್ಗ ನಿರ್ಮಾಣಕ್ಕೆ ಸಿಂಧನೂರು ತಾಲೂಕಿನ 196 ಎಕರೆ ಜಮೀನನ್ನು ಈಗಾಗಲೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಮಿ ನೀಡಿದ ರೈತರಿಗೆ ಪರಿಹಾರ ವಿತರಿಸಲು ಪ್ರತಿ ಎಕರೆಗೆ ದರ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸಿಂಧನೂರಿನ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಕುರಿತು ಶನಿವಾರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುನಿರಾಬಾದ್-ಮಹೆಬೂಬ್‌ನಗರ ರೈಲು ಮಾರ್ಗ ನಿರ್ಮಾಣಕ್ಕಾಗಿ ಸಿಂಧನೂರು ತಾಲೂಕಿನ 196 ಎಕರೆ ಭೂಮಿಯನ್ನು ರೈತರು ಈಗಾಗಲೇ ಹಸ್ತಾಂತರಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಅವರಿಗೆ ಪರಿಹಾರ ಮೊತ್ತ ಪಾವತಿಸಬೇಕು. ಈ ದಿಸೆಯಲ್ಲಿ ಪ್ರತಿ ಎಕರೆಗೆ ದರ ನಿಗದಿ ಪಡಿಯುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಸಿಂಧನೂರು ತಾಲೂಕಿನ ಸಿಂಧನೂರು ನಗರದಿಂದ ರಾಗಲಪರ್ವಿವರೆಗೆ ಇದೇ ರೈಲು ಮಾರ್ಗಕ್ಕಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದೇ ರೀತಿ ಪೋತ್ನಾಳ-ಕಲ್ಲೂರು ಈ ಮಾರ್ಗ ಸೇರಿದಂತೆ ಒಟ್ಟಾರೆ 877 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಜಂಟಿ ಮೋಜಣಿ ಪ್ರಮಾಣಪತ್ರ(ಜೆಂಎಸಿ) ತಯಾರಿಸಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ವಿವಿಧ ಕಾಮಗಾರಿ ಹಾಗೂ
ವಿವಿಧ ಉದ್ದೇಶಗಳಿಗಾಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಭೂಸ್ವಾಧಿನ ಪಡಿಸಿಕೊಳ್ಳಬೇಕಿರುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಹಾಗೂ ನಿವೇಶನ ರಹಿತರಿಗೆ ಗೃಹ ನಿರ್ಮಾಣಕ್ಕೆ ಭೂಮಿ ಖರೀದಿಸುವ ಕಾರ್ಯವನ್ನು ನಿಯಮಾನುಸಾರ ಆದಷ್ಟು ಬೇಗನೆ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೊಹಮ್ಮದ್ ಇರ್ಫಾನ್, ಜಿಪಂ ಯೋಜನಾಧಿಕಾರಿ ಡಾ| ರೋಣಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುಬ್ರಮಣ್ಯಂ, ಸಿಂಧನೂರು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಪ್ರೇಮಕುಮಾರ ಹಾಗೂ ಮತ್ತಿತರರು ಸಭೆಯಲ್ಲಿದ್ದರು.