Advertisement

ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ರಾಕೇಶ್ ಕುಮಾರ್

02:37 PM Mar 19, 2022 | Team Udayavani |

ಕುದೂರು: ಸಾರ್ವಜನಿಕ ಸಮಸ್ಯೆ ಪರಿಹರಿಸಲು‌ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಶನಿವಾರ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ತಿಳಿಸಿದರು.

Advertisement

ಸೋಲೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಿಸಿದರೆ, ಸಾರ್ವಜನಿಕ ಸಮಸ್ಯೆ ಪೂಣ೯ ಪ್ರಮಾಣದಲ್ಲಿ‌ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಂದು ನಾನು ಮತ್ತು ಅಧಿಕಾರಿಗಳ ತಂಡ ಸೋಲೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಅರ್ಜಿ ಸಲ್ಲಿಸುವ ಪ್ರತಿಯೊಬ್ಬರ ಸಮಸ್ಯೆಯನ್ನು ಖುದ್ದು ಆಲಿಸಿ, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು ಎಂದರು.

ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ 54 ಕ್ಕೂ ಹೆಚ್ಚಿನ ಸೇವೆ ನೀಡಲಾಗುತ್ತಿದೆ. ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಹಲವಾರು ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ನಡೆಸಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ‌ ಎಂದರು.

ಗ್ರಾಮೀಣ ಭಾಗದ ಜನರು ಸೇವೆ ಪಡೆಯಲು ಅಲೆದಾಡುವುದನ್ನು ತಪ್ಪಿಸಲು ಅಧಿಕಾರಿಗಳ ತಂಡ ಪ್ರತಿ ತಿಂಗಳು ಮೂರನೇ ಶನಿವಾರ ಆಯ್ದ ಗ್ರಾಮಗಳಿಗೆ ಭೇಟಿ ನೀಡುತ್ತಿದೆ. ಗ್ರಾಮಸ್ಥರು ಸಕ್ರಿಯವಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

Advertisement

2500 ಅರ್ಜಿ ವಿಲೇವಾರಿ

ಇಲ್ಲಿಯವರೆಗೆ ಜಿಲ್ಲೆಯಲ್ಲಿ  ನಡೆದಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾಗಿರುವ ಅರ್ಜಿಯಲ್ಲಿ 2500 ಅರ್ಜಿ ವಿಲೇವಾರಿ ಮಾಡಲಾಗಿದೆ. ಬಹಳಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ ಎಂದರು.

ಪೋಷಣ್ ಪಕ್ವಾಡ್

ಮಾಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ‌ ವತಿಯಿಂದ ಮಕ್ಕಳಲ್ಲಿ‌ ಪೋಷಕಾಂಶ ಹೆಚ್ಚಿಸಲು ಸೇವಿಸುವ ಆಹಾರ ಪದಾರ್ಥಗಳನ್ನು ಅನಾವರಣಗೊಳಿಸಲಾಗಿತ್ತು. ಅಂಗನವಾಡಿಯಿಂದ ನೀಡಲಾಗುವ ಆಹಾರ ಧಾನ್ಯಗಳಿಂದ ಮಕ್ಕಳಿಗೆ ರುಚಿಕರ ತಿನಸು ಮಾಡಬಹುದು‌ ಎಂದು ತಿಳಿಸುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿತ್ತು.

ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ, ಮಧುಮೇಹ ಹಾಗೂ ರಕ್ತದ ಒತ್ತಡ ಪರೀಕ್ಷೆ, ಅರ್ಹ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಇಕ್ರಮ್, ಉಪಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, ಡಿ. ಡಿ.ಎಲ್.ಆರ್ ಸಂತೋಷ್, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್, , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next