Advertisement

ದಾವೋಸ್‌: ರಾಜ್ಯ ನಿಯೋಗಕ್ಕೆ ಕಿರಿಮಂಜೇಶ್ವರ ಯುವತಿ ಸಾಥ್‌

10:08 AM Jan 24, 2020 | mahesh |

ಕುಂದಾಪುರ: ಸ್ವಿಟ್ಸರ್ಲಂಡ್‌ನ‌ ದಾವೋಸ್‌ನಲ್ಲಿ ಜರಗುತ್ತಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ತಂಡಕ್ಕೆ ಕಿರಿಮಂಜೇಶ್ವರ ರಥಬೀದಿಯ ಅಪರ್ಣಾ ಮಾರ್ಗ ದರ್ಶಕರಾಗಿ ಜತೆಯಾಗಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾದ ಸಮುದಾಯದ ತಜ್ಞರಾದ ಅವರನ್ನು ರಾಜ್ಯ ತಂಡದ ಜತೆ ಮಾರ್ಗದರ್ಶನ ಮತ್ತು ಆತಿಥ್ಯದ ಜವಾಬ್ದಾರಿಗಾಗಿ ಜಾಗತಿಕ ಆರ್ಥಿಕ ವೇದಿಕೆ ನಿಯುಕ್ತಿ ಗೊಳಿಸಿದೆ.

Advertisement

ಮೂಲತಃ ಕಿರಿಮಂಜೇಶ್ವರದ, ಪ್ರಸ್ತುತ ಮುಂಬಯಿಯಲ್ಲಿ ಇರುವ ಸುಧಾಕರ ಶ್ಯಾನುಭಾಗರ ಪುತ್ರಿಯಾದ ಅಪರ್ಣಾ 4 ತಿಂಗಳಿಂದ ಜಿನೆವಾದಲ್ಲಿ ಪ್ರಧಾನ ಕಚೇರಿ ಹೊಂದಿದ ಜಾಗತಿಕ ಆರ್ಥಿಕ ವೇದಿಕೆಯ ಕಾರ್ಯ ಚಟುವಟಿಕೆಗೆ ನಿಯುಕ್ತರಾಗಿದ್ದಾರೆ.

ನಿಯೋಜನೆ
ಮುಂಬಯಿಯ ಸಿಐಐಯಲ್ಲಿ (ಕಾನ್ಫಡರೇಶನ್‌ ಆಫ್ ಇಂಡಿಯನ್‌ ಇಂಡಸ್ಟ್ರಿ) ಸಮುದಾಯ ವಿಶೇಷ ವಿಭಾಗದಲ್ಲಿ ಉದ್ಯೋಗದಲ್ಲಿ ಇರುವ ಅಪರ್ಣಾ ಅವರು ಎರಡು ವರ್ಷಗಳ ಅವಧಿಗೆ ಡಬ್ಲ್ಯು ಎಫ‌…ಎಫ್ (ವಿಶ್ವ ಆರ್ಥಿಕ ಒಕ್ಕೂಟ) ಗೆ ನಿಯುಕ್ತರಾಗಿದ್ದಾರೆ. 11 ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ, ಸಾಧ್ಯತೆಗಳು, ಅವಕಾಶಗಳು, ಅಲ್ಲಿನ ಜನರಿಗೆ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಕುರಿತು ಅಧ್ಯಯನ ಮಾಡಿ ವರದಿ ಮಂಡಿಸಬೇಕಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ದಾವೊಸ್ನಲ್ಲಿ ಇದರ ಕುರಿತಾಗಿ ವಿವಿಧ ರಾಷ್ಟ್ರಗಳ , ರಾಜ್ಯಗಳ ಮುಖ್ಯಸ್ಥರು, ವಿವಿಧ ಆರ್ಥಿಕ ಒಕ್ಕೂಟಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಪರಿಸರ ಸಂರಕ್ಷಣೆ, ಇಂಗಾಲದ ನಿಯಂತ್ರಣ ಕುರಿತಾಗಿ ಚರ್ಚೆ ನಡೆಯುತ್ತಿದೆ. ಸಮ್ಮೇಳನ ಜ.21 ರಂದು ಆರಂಭವಾಗಿದ್ದು ಜ.24ರಂದು ಸಮಾರೋಪಗೊಳ್ಳಲಿದೆ. ಜಗತ್ತಿನ ನಾನಾ ರಾಷ್ಟ್ರಗಳ ಗಣ್ಯರು ಇದರಲ್ಲಿ ಭಾಗಿಯಾಗಿದ್ದಾರೆ.

ಕುಟುಂಬ
ಮುಂಬಯಿ ವಿ.ವಿ.ಯಲ್ಲಿ ಎಂಬಿಎ ಪದವಿ ಪಡೆದ ಅಪರ್ಣಾ ಜನಿಸಿದ್ದು ಮುಂಬಯಿಯಲ್ಲಿಯೇ. ಅವರ ಪತಿ ಲಂಡನ್‌ನಲ್ಲಿ ಸಾಫ್ಟ್ವೇರ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆ ಕೆಲಸದಲ್ಲಿ ನಿಷ್ಠೆ ಉಳ್ಳವಳು. ಹೊಸದನ್ನು ಕಲಿಯಿವ ಹಂಬಲ ಉಳ್ಳವಳು.ಕಠಿನ ಪರಿಶ್ರಮಿ. ತುಂಬಾ ಚುರುಕು, ಹಿಡಿದ ಕೆಲಸವನ್ನು ಬಿಡದೇ ಸಾಧಿಸುವ ಛಲಗಾರ್ತಿ ಎಂದು ಉದಯವಾಣಿಗೆ ಪ್ರತಿಕ್ರಿಯಿಸಿದರು ತಂದೆ ಸುಧಾಕರ ಶ್ಯಾನುಭಾಗ್‌. ಅವರು ಕಿರಿಮಂಜೇಶ್ವರದ ರಥಬೀದಿಯ ನಮ್ಮನೆ ನಿವಾಸಿಯಾಗಿದ್ದವರು ವಿವಿಧೆಡೆ ಉದ್ಯೋಗ ನಿರ್ವಹಿಸಿದ್ದರು. ನ್ಯಾಶನಲ್‌ ಫೆಡರೇಶನ್‌ ಆಫ್ ಸ್ಟೇಟ್‌ ಕೋ ಆಪ್‌ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ಮುಂಬಯಿಯಲ್ಲಿ ನೆಲೆಸಿದ್ದಾರೆ.

ಹೆಮ್ಮೆ ಎನಿಸುತ್ತಿದೆ
ಕರ್ನಾಟಕ ಮೂಲದವರಾಗಿದ್ದು ವಿದೇಶೀ ನೆಲದಲ್ಲಿ ಇಲ್ಲಿನ ಗಣ್ಯರ ತಂಡದ ಜತೆ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಹೆಮ್ಮೆ ಎನಿಸುತ್ತದೆ.
– ಸುಧಾಕರ ಶ್ಯಾನುಭಾಗ್‌, ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next