ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್, “ಕಿಲ್ಲರ್ ಮಿಲ್ಲರ್’ ಎಂದೇ ಖ್ಯಾತರಾಗಿರುವ ಡೇವಿಡ್ ಮಿಲ್ಲರ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿ ಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸೋಮವಾರ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶ್ವಕಪ್ ಸೋಲಿಗೆ ಸಂಬಂಧಿಸಿದಂತೆ ಒಂದು ಭಾವನಾತ್ಮಕ ಪೋಸ್ಟ್ ಹಂಚಿ ಕೊಂಡಿದ್ದು, ಇದು ನಿವೃತ್ತಿ ಅನುಮಾನಗಳಿಗೆ ಎಡೆ ಮಾಡಿದೆ.
“ಬಹಳಷ್ಟು ನೊಂದಿದ್ದೇನೆ’
“ನಾನು ಹತಾಶನಾಗಿದ್ದೇನೆ. ಎರಡು ದಿನಗಳ ಹಿಂದೆ ಏನು ನಡೆಯಿತೋ ಅದು, ನುಂಗಲಾರದ ತುತ್ತಾಗಿದೆ. ನಾನೆಷ್ಟು ನೊಂದಿದ್ದೇನೆ ಎನ್ನುವುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆದರೆ ನನಗೆ ಅನ್ನಿಸಿದ ಒಂದು ವಿಚಾರವೆಂದರೆ, ಈ ತಂಡದಲ್ಲಿರಲು ನಾನು ಬಹಳ ಹೆಮ್ಮೆಪಡಬೇಕು. ಈ ಪಯಣ ಅದ್ಭುತವಾಗಿತ್ತು. ಒಂದಿಡೀ ತಿಂಗಳು ಏರಿಳಿತಗಳಿದ್ದವು. ನಾವು ನೋವು ಸಹಿಸಿಕೊಂಡಿ ದ್ದೇವೆ. ಆದರೆ ಮತ್ತೆ ಉದಯಿಸಲಿದ್ದೇವೆ’ ಎಂದು ಮಿಲ್ಲರ್ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮಿಲ್ಲರ್ ಔಟಾಗದಿದ್ದರೆ…
ಟಿ20 ವಿಶ್ವಕಪ್ ಫೈನಲ್‌ನ ಕೊನೆಯ ಓವರ್‌ನಲ್ಲಿ ಮಿಲ್ಲರ್ ಔಟಾಗಿ ಆಘಾತಕ್ಕೀಡಾಗಿದ್ದರು. ಹಾರ್ದಿಕ್ ಪಾಂಡ್ಯ ಅವರ ಓವರ್‌ನಲ್ಲಿ ಸಿಕ್ಸ್‌ಗೆ ಯತ್ನಿಸಿದ ಮಿಲ್ಲರ್‌ಗೆ, ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್ ದಾರಿ ತೋರಿದ್ದರು. ಮಿಲ್ಲರ್ ಔಟಾಗದಿದ್ದರೆ ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಅವಕಾಶವಿತ್ತು.