Advertisement

ಯುಗಾದಿಯಂದು ಹೊಸ ವರ್ಷ ಆಚರಣೆ

04:39 PM Mar 08, 2020 | Naveen |

ದಾವಣಗೆರೆ: ಹಿಂದೂಗಳ ಹೊಸ ವರ್ಷ ಆರಂಭದ ಯುಗಾದಿಯಂದು ಸೂರ್ಯನಿಗೆ ಆರತಿ ಬೆಳಗುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಭಾರತ ವಿಕಾಸ ಪರಿಷತ್‌ನ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ಭಾರತದಲ್ಲಿ ಹಿಂದೂಗಳು ಡಿ.31ರ ಮಧ್ಯರಾತ್ರಿ ಕುಡಿದು, ಡ್ಯಾನ್ಸ್‌ ಮಾಡಿ ಹೊಸ ವರ್ಷ ಸ್ವಾಗತಿಸುವ ಪರಿಪಾಠಕ್ಕೆ ಮೊರೆ ಹೋಗಿದ್ದಾರೆ. ಇದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ. ಈ ನಡವಳಿಕೆ ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂತಾದ್ದಾಗಿದೆ. ಆದ್ದರಿಂದ ಯುಗಾದಿ ಹಬ್ಬದ ದಿನವೇ ನಮಗೆ ಹೊಸ ವರ್ಷ ಆರಂಭವಾಗಿದ್ದು, ಆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾ.25ರಂದು ಹೊಸ ವರ್ಷ ಸ್ವಾಗತಿಸಲಾಗುವುದು ಎಂದರು.

ಅಂದು ಬೆಳಗ್ಗೆ ಸೂರ್ಯೋದಯದ ಸಂದರ್ಭದಲ್ಲಿ ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರೋಡ್‌ನ‌ಲ್ಲಿ ಶ್ರೀಶಾರದಾಂಬಾ ದೇವಸ್ಥಾನದ ಬಳಿ ಭಾರತ ವಿಕಾಸ ಪರಿಷತ್‌ ವತಿಯಿಂದ ಸೂರ್ಯನಿಗೆ ಆರತಿ ಬೆಳಗುವ ಮೂಲಕ ಹೊಸ ವರ್ಷ ಸ್ವಾಗತಿಸಲಾಗುವುದು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಹಿಂದೂಗಳು ಡಿ.31ರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷ ಸ್ವಾಗತಿಸಲು ಪಾಶ್ಚಾತ್ಯ ಸಂಸ್ಕೃತಿ ಮೊರೆ ಹೋಗಿದ್ದಾರೆ. ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಅಲ್ಲ. ಹಿಂದೂ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಯುಗಾದಿ ದಿನವೇ ಹೊಸ ವರ್ಷ ಆರಂಭವಾಗಲಿದೆ. ಬಹುತೇಕ ಮಂದಿ ಪಾಶ್ಚಾತ್ಯ ನಡೆ ಅನುಸರಿಸುತ್ತಿರುವುದರಿಂದ ನಮ್ಮ ಮೂಲ ಸಂಸ್ಕೃತಿಗೆ ಮೂಲೆಗುಂಪಾಗುತ್ತಿದೆ. ಈ ಪಾಶ್ಚಾತ್ಯ ಸಂಸ್ಕೃತಿಗೆ ಅಂತ್ಯ ಹಾಡಲು ಈ ಬಾರಿ ಪರಿಷತ್‌ ನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಯುಗಾದಿ ಹಬ್ಬವನ್ನು ಬೇರೆ ಬೇರೆ ದಿನಗಳಂದು ಒಟ್ಟಾರೆ 15 ದಿನಗಳ ಅಂತರದಲ್ಲಿ ಆಚರಿಸಲಿದ್ದಾರೆ. ಹೊಸ ಸಂವತ್ಸರ ಆರಂಭದ ದಿನದಿಂದ ಹಿಂದೂಗಳು ಸೌರಮಾನ ಹಾಗೂ ಚಂದ್ರಮಾನ ಯುಗಾದಿ ಹಬ್ಬವೆಂದು ಆಚರಿಸುತ್ತಾರೆ. ಮಾ.25ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಸು.ರಾಮಣ್ಣ, ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಹೋಳಿ, ಗಣೇಶ ಉತ್ಸವ ರೀತಿ ಯುಗಾದಿ ಹಬ್ಬವನ್ನೂ ಎಲ್ಲರೂ ಒಟ್ಟುಗೂಡಿ ಆಚರಿಸಲು ಅನುವಾಗುವಂತೆ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ. ಡಿ.31ರ ರಾತ್ರಿಯ ನಡೆಯುವ ಅನಾಹುತ, ಅತ್ಯಾಚಾರ, ಅನಾಚಾರಗಳಿಗೆ ಅಂತ್ಯ ಹಾಡಬೇಕು. ಜನವರಿ 1ರಂದು ಪಾಶ್ಚಾತ್ಯ ಸಂಸ್ಕೃತಿ ವೈಭವೀಕರಿಸುವುದು ನಿಲ್ಲಬೇಕು. ನಮ್ಮ ಯುವ ಸಮೂಹ ಬೇರೆ ದಿಕ್ಕಿನಡೆ ಸಾಗುವುದನ್ನು ತಡೆದು ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.

ಪರಿಷತ್‌ನ ಗೌತಮ ಶಾಖೆಯ ಜಿಲ್ಲಾಧ್ಯಕ್ಷ ಜಯರುದ್ರೇಶ್‌ ಮಾತನಾಡಿ, ಡಿ.31ರ ಮಧ್ಯರಾತ್ರಿ ಹೊಸ ವರ್ಷ ಸ್ವಾಗತಿಸುವುದು ಹಿಂದೂ ಸಂಪ್ರದಾಯವಲ್ಲ. ಯುಗಾದಿ ದಿನವೇ ಹಿಂದೂಗಳಿಗೆ ಹೊಸ ವರ್ಷದ ಆರಂಭವಾಗಿದೆ. ಭಾರತೀಯ ಸಂಸ್ಕೃತಿ ಪುನರುತ್ಥಾನಗೊಳಿಸಲು ಬರುವ ಯುಗಾದಿ ಹಬ್ಬದಂದೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿ.ಶಂಕರನಾರಾಯಣ ಮಾತನಾಡಿ, ಮಾ.25ರ ಬೆಳಗ್ಗೆ ಸೂರ್ಯನಿಗೆ ಆರತಿ ಬೆಳಗುವ ಮೂಲಕ ಹೊಸ ವರ್ಷ ಸ್ವಾಗತಿಸಲಾಗುವುದು. ಅಲ್ಲಿ ನೆರೆದಿದ್ದ ಜನರಿಗೆ ಬೇವು-ಬೆಲ್ಲವಿತರಿಸಿ, ಹಬ್ಬದ ಶುಭಾಶಯ ಕೋರಲಾಗುವುದು ಎಂದರು. ಆರತಿ ಸುಂದೆರೇಶ್‌, ವಿಜಯೇಂದ್ರ, ಮೌನೇಶಪ್ಪ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next