Advertisement

ವೆಂಟಿಲೇಟರ್‌ ಬಳಕೆ ಪರಿಸ್ಥಿತಿ ಬರದಿರಲಿ

11:25 AM Apr 15, 2020 | Naveen |

ದಾವಣಗೆರೆ: ಶೀಘ್ರದಲ್ಲಿಯೇ ದಾವಣಗೆರೆ ಜಿಲ್ಲೆಗೆ ಕೋವಿಡ್‌ ತಪಾಸಣಾ ಲ್ಯಾಬ್‌ ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

Advertisement

ಮಂಗಳವಾರ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್‌-19 ಕೋವಿಡ್‌ ರೋಗ ನಿಯಂತ್ರಣ ಕುರಿತ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕೊರೊನಾ ತಪಾಸಣೆಗಾಗಿ 16 ಲ್ಯಾಬ್‌ಗಳಿವೆ. 10 ಹೊಸದಾಗಿ ಮಂಜೂರು ಮಾಡಲಾಗುವುದು. ಅದರಲ್ಲಿ ಒಂದನ್ನು ಜಿಲ್ಲೆಗೆ ಒದಗಿಸಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ಈ ಮೊದಲು ಕೊರೊನಾ ಸೋಂಕಿತರಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು. ನಂತರ ನಿಯಂತ್ರಣ ಕ್ರಮ ಕೈಗೊಂಡ ಮೇಲೆ 12ನೇ ಸ್ಥಾನದಲ್ಲಿದೆ. ಸರ್ಕಾರಿ ಹಾಗೂ ಖಾಸಗಿ ಸೇರಿ 700 ವೆಂಟಿಲೇಟರ್‌ ಸೌಲಭ್ಯವಿದೆ. ಯಾವೊಬ್ಬ ರೋಗಿಯು ಸಹ ವೆಂಟಿಲೇಟರ್‌ಗೆ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಒಂದೊಂದು ಜಿಲ್ಲೆಯಲ್ಲಿ ಸಹ ಒಂದೊಂದು ದಂಥ ಕತೆ ಇದೆ. ಎಲ್ಲ ರಾಜಕೀಯ ಪಕ್ಷದವರು ಸಹ ಪಕ್ಷಾತೀತಾವಾಗಿ ಕೋವಿಡ್‌ ನಿಯಂತ್ರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಮೊದಲು ಮೂರು ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಾಗ ಆತಂಕ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆಗಳ ನಿರಂತರ ಶ್ರಮದಿಂದ ಕೊರೊನಾ ಪಾಸಿಟಿವ್‌ ಸೋಂಕಿತರು ಗುಣಮುಖರಾಗಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ್‌ ಮಾತನಾಡಿ, ಜಿಲ್ಲೆಯ ಎಲ್ಲ ಅಧಿಕಾರಿಗಳು, ಜನಪ್ರತಿನಿ ಧಿಗಳು ಒಗ್ಗೂಡಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆ ಅನೇಕ ದಾನಿಗಳು ಸಹ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ದಾನಿಗಳು ಮುಂದೆ ಬಂದು ಬಡವರಿಗೆ ನೆರವಾಗುವಂತೆ ಕೋರಿದರು.

Advertisement

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ನಮ್ಮಲ್ಲಿ ಬೇಕಾದಷ್ಟು ವೈದ್ಯರು ಹಾಗೂ ನರ್ಸ್ಗಳಿದ್ದಾರೆ. ಜಿಲ್ಲಾಡಳಿತದಿಂದ ಕೋವಿಡ್‌ ಪರೀಕ್ಷೆಗೆ ಕಿಟ್‌ ಒದಗಿಸಿದಲ್ಲಿ ತಪಾಸಣೆಗಾಗಿ ಅವರನ್ನು ಬಳಸಿಕೊಳ್ಳಬಹುದು. ಜಿಲ್ಲಾಡಳಿತಕ್ಕೆ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಮತ್ತು ದವಸ ಧಾನ್ಯ ಹರಿದು ಬಂದಿದೆ. ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಪಕ್ಷಬೇಧ ಮರೆತು ನಾವೆಲ್ಲರೂ ರೋಗ ನಿಯತ್ರಂಣಕ್ಕಾಗಿ ಶ್ರಮಿಸೋಣ ಎಂದರು.

ಹರಿಹರ ಶಾಸಕ ಎಸ್‌. ರಾಮಪ್ಪ ಮಾತನಾಡಿ, ಲಾಕ್‌ಡೌನ್‌ ವಿಸ್ತರಣೆ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಹಾಗೂ ಗ್ಯಾರೇಜ್‌ ಕೆಲಸಗಾರು ಸೇರಿದಂತೆ ಕೂಲಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಈಗಗಾಲೇ 21 ದಿನ ಕಳೆದಿದೆ. ಇವರಿಗೆ ಜೀವನ ಸಾಗಿಸಲು ಯಾವುದೇ ಕಷ್ಟವಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ರೈತರ ಮೇಲೆ ಅನಾವಶ್ಯಕವಾಗಿ ಪೊಲೀಸರಿಂದ ಹಲ್ಲೆ ಆಗುತ್ತಿದೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

ಜಗಳೂರು ಶಾಸಕ ಎಸ್‌.ವಿ.ರಾಮಚಂದ್ರ, ಜಗಳೂರ ತಾಲ್ಲೂಕು ಕೇಂದ್ರಸ್ಥಾನವಾಗಿರುವುದರಿಂದ. ಕೂಡ್ಲಿಗಿ, ಕೊಟ್ಟೂರು, ಮೊಳಕಾಲ್ಮುರು ಸೇರಿದಂತೆ ಸುತ್ತಮುತ್ತಲಿನ ಜನರು ತಪಾಸಣೆಗೆ ಬರುತ್ತಾರೆ. ಆದರೆ, ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ವೆಂಟಿಲೇಟರ್‌ ಇದ್ದರೂ ಅದನ್ನು ಆಪರೇಟ್‌ ಮಾಡುವ ಸಿಬ್ಬಂದಿಗಳಿಲ್ಲ ಎಂದಾಗ, ಆರೋಗ್ಯ ಸಚಿವರು, ಜಿಲ್ಲೆಯ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಮ್‌ಗಳಲ್ಲಿನ ಕೆಲ ಸಿಬ್ಬಂದಿಗಳನ್ನು ನಿಯೋಜಿಸಲು ಜಿಧಿಲ್ಲಾಕಾರಿಗೆ ಸೂಚಿಸಿದರು.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳಾಗುತ್ತಿದ್ದು, ಅಂತಹವರ ಮೇಲೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಬೆಂಗಳೂರಿನಲ್ಲಿ ಇರುವಂತೆ ಜಿಲ್ಲೆಯಲ್ಲಿಯೂ ಸಹ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡ ವಾರ್‌ ರೂಂ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 2 ಎಪಿಸೆಂಟರ್‌ ಮಾಡಿ ಅಲ್ಲಿರುವವರಿಗೆ ಫ್ಲೂ ಸರ್ವೇ ಮಾಡಲಾಗಿದೆ. ಈವರೆಗೆ ಪ್ರಾಥಮಿಕ ಕಾಂಟ್ಯಾಕ್ಟ್‌ನಲ್ಲಿರುವರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್‌ನಲ್ಲಿರುವವರನ್ನು ಗುರುತಿಸಲಾಗಿದ್ದು, ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|
ಜಿ.ಡಿ. ರಾಘವನ್‌ ಮಾತನಾಡಿದರು. ಶಾಸಕ ಪ್ರೊ. ಎನ್‌.ಲಿಂಗಣ್ಣ, ಎಂಎಲ್‌ಸಿ ಅಬ್ದುಲ್‌ ಜಬ್ಟಾರ್‌, ಜಿಪಂ ಅಧ್ಯಕ್ಷೆ ಯಶೋಧಮ್ಮ, ಮೇಯರ್‌ ಬಿ.ಜಿ. ಅಜಯಕುಮಾರ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಉಪ ಮೇಯರ್‌ ಸೌಮ್ಯ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next