Advertisement

ದಳಪತಿಗಳಿಲ್ಲದ ಕ್ಷೇತ್ರದಲ್ಲಿ ಕೈಬಲ ನಿರೀಕ್ಷೆ 

12:45 AM Mar 17, 2019 | |

ದಾವಣಗೆರೆ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಕ್ಷೇತ್ರ ಹೊಂದಾಣಿಕೆಯಿಂದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾರರು ಮೈತ್ರಿ ಅಭ್ಯರ್ಥಿ ಕೈ ಹಿಡಿಯುವರೇ ಎಂಬ ಕುತೂಹಲ ಮೂಡಿದೆ.

Advertisement

1977ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಲೋಕಸಭಾ ಕ್ಷೇತ್ರ 1991ರ ವರೆಗೆ ಕಾಂಗ್ರೆಸ್‌ನ ಭದ್ರಕೋಟೆ ಯಾಗಿತ್ತು. ಈವರೆಗೂ ನಡೆದಿ ರುವ 11ಚುನಾವಣೆಯಲ್ಲಿ 6 ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ 5 ಬಾರಿ ಜಯಭೇರಿ ಬಾರಿಸಿವೆ. ಕ್ಷೇತ್ರದಲ್ಲಿನ ಹಿಂದಿನ ಚುನಾವಣೆಗಳಿಗೂ ಈ ಚುನಾವಣೆಗೂ ವ್ಯತ್ಯಾಸ ಇದೆ. ಈವರೆಗೂ ಕ್ಷೇತ್ರದಲ್ಲಿ ಎದುರಾಳಿ ಯಾಗಿರುತ್ತಿದ್ದ ಪಕ್ಷ, ಕಾಂಗ್ರೆಸ್‌ ಜತೆಗೂಡಿರುವುದು ಆ ಪಕ್ಷಕ್ಕೆ ಬಲ ತರಲಿದೆಯೇ ಎಂಬುದು ರಾಜಕೀಯ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಈಗ ಕಾಂಗ್ರೆಸ್‌ ಜತೆಗಿರುವ ಜಾತ್ಯತೀತ ಜನತಾದಳ ಈ ಕ್ಷೇತ್ರದಲ್ಲಿ ಈವರೆಗೂ ವಿಜಯ ಪತಾಕೆ ಹಾರಿಸದಿದ್ದರೂ ಕೈ ಪಡೆ ಗೆಲುವಿಗೆ ಅಡ್ಡಗಾಲಾಗಿದೆ ಎಂಬುದಂತೂ ಸತ್ಯ. 1977ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿ ಯಾಗಿದ್ದ ಕೊಂಡಜ್ಜಿ ಬಸಪ್ಪನವರ ಆಯ್ಕೆ ನಂತರ ಆ ಪಕ್ಷ 1991ರವರೆಗೆ ಕ್ಷೇತ್ರದಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿತು. 1996ರಲ್ಲಿ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಲು ಕಾರಣರಾದರು. ನಂತರ, 1998ರಲ್ಲಿ ನಡೆದ ಚುನಾವಣೆ ಯಲ್ಲಿ ಪರಾಭವಗೊಂಡು ಮರುವರ್ಷವೇ (1999) ನಡೆದ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ವಿರುದ್ಧ ವೇ ಜಯ ಸಾಧಿಸಿದರು. ಅಲ್ಲಿಂದ ಈವರೆಗೂ ದಾವಣಗೆರೆಲೋಕಸ ಭಾ ಕ್ಷೇತ್ರದಲ್ಲಿ ಕಮಲ ನಳನಳಿಸುತ್ತಿದೆ.

ಬಿಜೆಪಿಗೆ 6 ಶಾಸಕರ ಬಲ: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 6 ಮಂದಿ ಬಿಜೆಪಿ ಶಾಸಕರಿದ್ದರೆ, 2 ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಪ್ರಸ್ತುತ ಜೆಡಿಎಸ್‌ನ ಒಬ್ಬ ಶಾಸಕರೂ ಕೂಡ ಕ್ಷೇತ್ರದಲ್ಲಿಲ್ಲ. ಹಾಗಾಗಿಯೇ, ಕ್ಷೇತ್ರ ಹಂಚಿಕೆಯಲ್ಲಿ ದಾವಣಗೆರೆ ಕಾಂಗ್ರೆಸ್‌ ಪಾಲಾಗಲು ಕಾರಣ. ಕ್ಷೇತ್ರದಲ್ಲಿ 2004, 2009 ಹಾಗೂ 2014ರ ಮೂರೂ ಚುನಾವಣೆಯಲ್ಲೂ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ಗೆ ಕಾಂಗ್ರೆಸ್‌ನ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಎದುರಾಳಿಯಾಗಿದ್ದರು. ಆದರೂ,ಮೂರು ಬಾರಿಯೂ ಬಿಜೆಪಿ ಗೆದ್ದಿದೆ. ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಬಿಜೆಪಿ ವಿರುದ್ಧ ಪರಾಭವಗೊಂಡಿರು ವುದು ಅನುಕ್ರಮವಾಗಿ 32,123, 2024 ಹಾಗೂ 17,607 ಮತಗಳ ಅಂತರದಿಂದ. ಆ ಚುನಾವಣೆ ಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಪಡೆದದ್ದು 1,58,367 (2004- ಚನ್ನಯ್ಯ ಒಡೆಯರ್‌), 10,489 (2009- ಕೆ.ಬಿ. ಕಲ್ಲೇರುದ್ರೇಶ್‌) ಹಾಗೂ 46,911 (2014-ಮಹಿಮಾ ಪಟೇಲ್‌) ಮತಗಳನ್ನು. ಹಾಗಾಗಿಯೇ, ಒಂದು ವೇಳೆ, ಕಳೆದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ ಸ್ಪರ್ಧಿಸದಿದ್ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸುತ್ತಿದ್ದರೇನೋ ಎಂಬುದು ಕೆಲವರ ವಾದ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಪ್ಲಸ್‌ ಆಗಲಿದೆಯೇ ಎಂಬುದು ಕುತೂಹಲವಿದೆ.

ಕಾಂಗ್ರೆಸ್‌ ಪಡೆಯಲ್ಲಿದೆ ಆತಂಕ
ಕಳೆದ ಹಲವು ಚುನಾವಣೆಯಂತೆ ಈ ಬಾರಿಯೂ ಉದ್ಯಮಿ ಬೀಗರ ನಡುವಿನ ಬಿಗ್‌ ಫೈಟ್‌ ನಿರೀಕ್ಷೆಯಲ್ಲಿ ಜನರಿದ್ದರೆ, ಕಾಂಗ್ರೆಸ್‌ ವಲಯದಲ್ಲಿ ಮಾತ್ರ ಆತಂಕ ಮನೆ ಮಾಡಿದೆ. ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್‌, ಕಳೆದ 5 ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆ ಆಧರಿಸಿ ಪ್ರಚಾರ ಮಾಡುತ್ತಾ, ಇದೇ ನನ್ನ ಕೊನೇ ಚುನಾವಣೆ ಎಂದು ಹೇಳುತ್ತಾ ಹಳ್ಳಿ, ಹಳ್ಳಿ ಸುತ್ತುತ್ತಿದ್ದಾರೆ. ಅವರಿಗೆ ಪಕ್ಷದ ಮುಖಂಡರು ಸಾಥ್‌ ನೀಡಿದ್ದು, ಕಮಲ ಪಡೆ ಒಂದಿಷ್ಟು ಉತ್ಸಾಹದಲ್ಲಿದೆ. ಆದರೆ, ಕಾಂಗ್ರೆಸ್‌ ವಲಯದಲ್ಲಿ ಮಾತ್ರ ಕೊಂಚ ಮಂಕು ಕವಿದಂತಿದೆ. ಸಾರ್ವಜನಿಕರು ಹಾಗೂ ಕೈ ಪಡೆ ಈ ಬಾರಿಯೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಪಕ್ಷದ ಜಿಲ್ಲಾ ವರಿಷ್ಠರು ಹಾಗೂ ಹೈಕಮಾಂಡ್‌ ಸಹ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೆಸರನ್ನೇ ಶಿಫಾರಸು ಮಾಡಿದೆ.

ಆಘಾತದಿಂದ ಹೊರಬಂದಿಲ್ಲ

Advertisement

ಲೋಕಸಭಾ ಚುನಾವಣೆಯಲ್ಲಿ ನಿರಂತರ ಮೂರು ಬಾರಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ವಿರುದ್ಧ  ಪರಾಭವ ಗೊಂಡಿ ರುವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿನ ಸೋಲು ಆಘಾತ ತಂದಿದೆ. ಆ ಬೇಸರದಿಂದ ಅವರಿನ್ನೂ ಸಂಪೂರ್ಣ ಹೊರ ಬಂದಂತಿಲ್ಲ. ಹಾಗಾಗಿ, ಅವರು ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸ ಬೇಕೋ?, ಬೇಡವೋ? ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

● ಎನ್‌.ಆರ್‌.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next