ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್ ಹರಡುವ ಕದಂಬಬಾಹು ತಡೆಗಟ್ಟುವ ನಿಟ್ಟಿನಲ್ಲಿ ಎರಡನೇ ಹಂತದ ಲಾಕ್ ಡೌನ್ 2.0 ನಡುವೆಯೂ ದಾವಣಗೆರೆಯ ಅನೇಕ ರಸ್ತೆಯಲ್ಲಿ ಜನರು, ವಾಹನ ಸಂಚಾರ ಸಾಮಾನ್ಯವಾಗಿದೆ.
ಮೊದಲ ಹಂತದ ಲಾಕ್‌ಡೌನ್ ಏ.14ಕ್ಕೆ ಮುಗಿಯುತ್ತದೆ ಎಂದೇ ಭಾವಿಸಿದ್ದ ಜನರು ಸೋಮವಾರದಿಂದಲೇ ಓಡಾಟ ಹೆಚ್ಚಿಸಿದ್ದರು. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮೇ 3ರ ವರೆಗೆ ಎರಡನೇ ಹಂತದ ಲಾಕ್‌ಡೌನ್ ಘೋಷಣೆ ನಂತರ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇತ್ತು. ಏ.20ರ ವರೆಗೆ ಲಾಕ್‌ಡೌನ್ ಕಠಿಣವಾಗಿ ಇರಲಿದೆ ಎಂದು ಹೇಳಿದ ನಂತರ ಮೊದಲಗಿಂತಲೂ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆ ಆಗಲಿದೆ ಎಂಬ ನಿರೀಕ್ಷೆ ಅಕ್ಷರಶಃ ಠುಸ್ ಆಗುತ್ತಿದೆ.
ತರಕಾರಿ ಒಳಗೊಂಡಂತೆ ಅಗತ್ಯ ವಸ್ತುಗಳ ಖರೀದಿಗೆ ನೂರಾರು ಜನರು ಬೀದಿಗಿಳಿಯುತ್ತಿದ್ದಾರೆ. ದ್ವಿಚಕ್ರ ವಾಹನ, ಆಟೋರಿಕ್ಷಾ, ತರಕಾರಿ ಹೊತ್ತು ತಂದ ವಾಹನಗಳಿಂದ ಮಾರುಕಟ್ಟೆಯಲ್ಲಿನ ಜನಸಂದಣಿ ಹೆಚ್ಚಾಗಿದೆ. ರಸ್ತೆಗಳು ರಾಜಾರೋಷವಾಗಿಯೇ ಜನರು ಓಡಾಡಿದರು. ಬುಧವಾರ ಮಧ್ಯಾಹ್ನದ ವೇಳೆಗೆ ಕೆಲವೆಡೆ ಪೊಲೀಸರು ರಸ್ತೆಗೆ ಇಳಿದು ವಾಹನ ಸವಾರರ ಮುಕ್ತ ಓಡಾಟಕ್ಕೆ ಬ್ರೇಕ್ ಹಾಕತೊಡಗಿದರು. ಕೆಲವಾರು ವಾಹನ ವಶಕ್ಕೆ ತೆಗೆದು ಕೊಂಡರು. ದಾವಣಗೆರೆಯ ಪ್ರಮುಖ ರಸ್ತೆಯ ಅನೇಕ ಕಡೆ ಬ್ಯಾರಿಕೇಡ್ ಹಾಕಿ, ಸಂಚಾರ ನಿರ್ಬಂಧಿಸಿದ್ದರೂ ಪರ್ಯಾಯ ಮಾರ್ಗದಲ್ಲಿ ಜನರು ಒಂದಿಲ್ಲ ಒಂದು ಕೆಲಸದ ಬಗ್ಗೆ ಹೇಳುತ್ತಾ ರಸ್ತೆಗೆ ಇಳಿಯುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಡಾವಣೆಗಳಲ್ಲಿ ಯಾವುದೇ ನಿರ್ಬಂಧ ಇಲ್ಲದೆ ವಾಹನ, ಜನರ ಸಂಚಾರ ಇದ್ದೇ ಇರುತ್ತದೆ. ಸಂಜೆಯಾಯಿತೆಂದರೆ ಲಾಕ್‌ಡೌನ್… ಎಂಬುದೇ ಇರದಂತಾಗುತ್ತಿದೆ. ಜನರು ಬಹಳ ರಿಲ್ಯಾಕ್ಸ್ ಮೂಡ್ ನಲ್ಲಿ ಓಡಾಡುವುದು ಕಂಡು ಬರುತ್ತದೆ. ಕೋವಿಡ್ ಮಹಾಮಾರಿ ವಕ್ಕರಿಸುವುದ ತಡೆಯಲು ಎಲ್ಲರೂ ಮನೆಯಲ್ಲೇ ಇರಬೇಕು. ತೀರಾ ತೀರಾ ತುರ್ತು ಸಂದರ್ಭ ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು… ಎಂದು ಗೋಗರೆದರೂ ಜನರು ಮಾತ್ರ ಕೇಳುವ ಸ್ಥಿತಿಯಲ್ಲೇ ಇಲ್ಲ. ಲಾಕ್‌ಡೌನ್ ಇದೇನಾ ಎಂಬ ಅನುಮಾನ ಬರುವಂತೆ ಮುಕ್ತವಾಗಿ, ಮನಸೋಇಚ್ಛೆಯಂತೆ ಓಡಾಡುವುದು ಕಂಡು ಬರುತ್ತಿದೆ.
ಲಾಕ್‌ಡೌನ್ ಜಾರಿ ನಂತರದ 22 ದಿನಗಳಲ್ಲಿ ಈವರೆಗೆ 3,496 ವಾಹನ ವಶಪಡಿಸಿಕೊಂಡು 14,73,500 ರೂಪಾಯಿಯಷ್ಟು ದಾಖಲೆ ಮೊತ್ತದ ದಂಡ ವಸೂಲಿ ಮಾಡಲಾಗಿದೆ. ಪ್ರತಿ ದಿನ 100ಕ್ಕೂ ಹೆಚ್ಚು ವಾಹನ ವಶಪಡಿಸಿಕೊಳ್ಳಲಾಗುತ್ತಿದೆ. ಪದೆ ಪದೇ ಲಾಕ್‌ಡೌನ್ ಉಲ್ಲಂಘಿಸುವರ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗವುದು. ವಿಪತ್ತು ನಿರ್ವಹಣಾ ಕಾಯ್ದೆ-2005ರ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಎಚ್ಚರಿಕೆಯ ನಡುವೆಯೂ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಈಗ ಕೃಷಿ ಸಂಬಂಧಿತ ಚಟುವಟಿಕೆಗೆ ವಿನಾಯತಿ ನೀಡಿರುವುದು ಸಂಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕೊರೊನಾ ಮಹಾಮಾರಿಯ ಎಚ್ಚರಿಕೆ ಗಂಟೆಯ ನಡುವೆಯೂ ಜನರು, ವಾಹನ ಸಂಚಾರಕ್ಕೆ ಕಡಿವಾಣ ಹಾಕುವುದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು… ಎನ್ನುವಂತಾಗುತ್ತಿದೆ.