Advertisement

ಪಂಚಮಸಾಲಿ ಸಮಾಜಕ್ಕೆ ಬಜೆಟ್‌ ಭರವಸೆ

11:42 AM Jan 15, 2020 | Naveen |

ದಾವಣಗೆರೆ: ಮುಂದಿನ ಬಜೆಟ್‌ನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಮಂಗಳವಾರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿನ ಹರ ಜಾತ್ರಾ ಮಹೋತ್ಸವದಲ್ಲಿ ಬೆಳ್ಳಿ ಬೆಡಗು… ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಯಡಿಯೂರಪ್ಪ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಬಿಟ್ಟು ಇರುವವನಲ್ಲ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವೂ ನನ್ನನ್ನು ಬಿಟ್ಟು ಇಲ್ಲ. ಕೃಷಿ ಪ್ರಧಾನ ಸಮಾಜವಾದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಏನು ಸವಲತ್ತು ಬೇಕೋ ಅದನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಏನು ಬೇಕು ಎಂದು ಜನರ ಕೈ ಎತ್ತಿಸಿ ಹೇಳಬೇಕಾಗಿಲ್ಲ. ಕಿವಿ ಮಾತು ಹೇಳಿದರೆ ಸಾಕು. ವಚನಾನಂದ ಸ್ವಾಮೀಜಿಯವರು ನನ್ನ ಪರಿಸ್ಥಿತಿ ಅರಿತು ಮಾತನಾಡಲಿ. ನನ್ನ ಮೇಲೆ ವಿಶ್ವಾಸವಿಡಿ… ಎಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ನಾಡಿನ ಎಲ್ಲಾ ಜನರ ಆಶೀರ್ವಾದದಿಂದ 4 ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಕೆರೆ-ಕಟ್ಟೆ ತುಂಬಿಸುವ ಕೆಲಸ ಮಾಡಿದ್ದೇನೆ. ನಾಡಿನ ರೈತರು ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮ, ಯೋಜನೆ ಜಾರಿ ಮಾಡಿದ್ದೇನೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ 120 ವರ್ಷದಲ್ಲೇ ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಪ್ರವಾಹದಿಂದ 400 ಗ್ರಾಮಗಳು ಮುಳುಗಿದ್ದವು. 7 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿತ್ತು. ಯಾರೂ ಮಂತ್ರಿಗಳು ಇಲ್ಲದೇ ಇದ್ದರೂ ಒಂದು ತಿಂಗಳ ಕಾಲ ಒಬ್ಬನೇ ಓಡಾಡಿ 7-8 ಸಾವಿರ ಕೋಟಿ ಖರ್ಚು ಮಾಡಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದೇನೆ ಎಂದು ತಿಳಿಸಿದರು.

Advertisement

ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿದರೆ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸುತ್ತವೆ. ನಾನು ಮಾರ್ಚ್‌ವರೆಗೆ ಪರಿಸ್ಥಿತಿ ಸುಧಾರಣೆಗೆ ಕಾಯಲೇಬೇಕು. ರೈತರು, ನಾಡಿನ ಜನತೆಗೆ ನೀಡಿರುವ ಭರವಸೆ ಈಡೇರಿಸುತ್ತೇನೆ ಎಂದರು.

ಕೃಷಿ ಪ್ರಧಾನವಾಗಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ವ್ಯಾಪಾರಕ್ಕೂ ಸೈ. ವೀರ ರಾಣಿ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿ ನಮ್ಮ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು. ಅವರು ಅಖಂಡ ಭಾರತದ ನಿರ್ಮಾಣ ಮಾಡಿದವರು. ಹರ ಜಾತ್ರಾ ಮಹೋತ್ಸವಗಳು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನೆಗೆ ಪೂರಕ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next