Advertisement

19 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ

11:30 AM Jun 22, 2020 | Naveen |

ದಾವಣಗೆರೆ: ಮುಂಜಾಗ್ರತಾ ಕ್ರಮವಾಗಿ ಮಹಾಮಾರಿ ಕೋವಿಡ್ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಜಿಲ್ಲೆಯ 19 ಖಾಸಗಿ ಆಸ್ಪತ್ರೆಗಳ ಪಟ್ಟಿ ಸಿದ್ಧ ಮಾಡಿಟ್ಟುಕೊಂಡಿದೆ.

Advertisement

ಮಹಾಮಾರಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗಿ ಕೋವಿಡ್‌ ಮತ್ತು ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಹಾಸಿಗೆ ಒಳಗೊಂಡಂತೆ ಅಗತ್ಯ ಚಿಕಿತ್ಸಾ ಸೌಲಭ್ಯದ ಕೊರತೆ ಉಂಟಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಯಡಿ ನೋಂದಾಯಿಸಿಕೊಂಡಿರುವ ಜಿಲ್ಲೆಯ 19 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಶಾಮನೂರು ರಸ್ತೆಯಲ್ಲಿನ ಸುಕ್ಷೇಮ ಆಸ್ಪತ್ರೆ, ಎಂಸಿಸಿ ಬಿ ಬ್ಲಾಕ್‌ 2ನೇ ಮುಖ್ಯ ರಸ್ತೆಯಲ್ಲಿನ ಕಡ್ಲಿ ನಾಗಮ್ಮ ಮೆಮೋರಿಯಲ್‌ ಆಸ್ಪತ್ರೆ, ಪಿ.ಜೆ. ಬಡಾವಣೆಯಲ್ಲಿನ ಸುಚೇತನ ಆಸ್ಪತ್ರೆ, ಅರುಣಾ ಚಿತ್ರಮಂದಿರ ರಸ್ತೆಯಲ್ಲಿನ ಸ್ಪಂದನಾ ಯೂರಿಯಾಲಜಿ ಸೆಂಟರ್‌, ಪಿ.ಜೆ. ಬಡಾವಣೆಯ 5ನೇ ಕ್ರಾಸ್‌ನಲ್ಲಿರುವ ಯೂನಿಟಿ ಹೆಲ್ತ್‌ ಸೆಂಟರ್‌, ಹಳೆ ಪಿಬಿ ರಸ್ತೆಯಲ್ಲಿನ ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆ, ಹರಿಹರ ತಾಲೂಕಿನ ಮಲೇಬೆನ್ನೂರುನ ದರ್ಗಾ ರಸ್ತೆಯಲ್ಲಿ ಇರುವ ಅಪೂರ್ವ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ, ದಾವಣಗೆರೆಯ ಬಾಪೂಜಿ ಆಸ್ಪತ್ರೆ, ಅಕ್ಕಮಹಾದೇವಿ ರಸ್ತೆಯ ಸಿಟಿ ಸೆಂಟ್ರಲ್‌ ಆಸ್ಪತ್ರೆ, ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರಸ್ತೆ ಸಮೀಪದ ಸಂಜೀವಿನಿ ಆಸ್ಪತ್ರೆ, ಎಂಸಿಸಿ ಬಿ ಬ್ಲಾಕ್‌ನ ಆಶ್ರಯ ಹಾಸ್ಪಿಟಲ್‌, ಎಂಸಿಸಿ ಬಿ ಬ್ಲಾಕ್‌ನ ನಯನ ಹಾಸ್ಪಿಟಲ್‌, ನಾರಾಯಣ ನೇತ್ರಾಲಯ, ಹದಡಿ ರಸ್ತೆಯ ಆರೈಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಬಾಪೂಜಿ ಮಕ್ಕಳ ಆರೋಗ್ಯ ಕೇಂದ್ರ, ಸುಶೃತ ಐ ಕ್ಲಿನಿಕ್‌, ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಿ.ಜೆ. ಬಡಾವಣೆಯ 3ನೇ ಮುಖ್ಯ ರಸ್ತೆ 8 ನೇ ಕ್ರಾಸ್‌ನಲ್ಲಿರುವ ಗುರುಶ್ರೀ ಆಸ್ಪತ್ರೆ ಮತ್ತು ಎಸ್‌.ಎಸ್‌. ನಾರಾಯಣ ಹೃದಯಾಲಯಗಳ ಪಟ್ಟಿ ಮಾಡಿದೆ.

ರಾಜ್ಯ ಸರ್ಕಾರ ಪಟ್ಟಿ ಮಾಡಿರುವ ಆಸ್ಪತ್ರೆಗಳ ಪೈಕಿ ಬಾಪೂಜಿ ಆಸ್ಪತ್ರೆ, ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆ, ಆರೈಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜೊತೆಗೆ ದೊಡ್ಡಬಾತಿಯ ತಪೋವನ ಆಸ್ಪತ್ರೆಯನ್ನ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೋವಿಡ್‌-19 ಚಿಕಿತ್ಸೆಗೆ ಸಜ್ಜುಗೊಳಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯಕ್ಕೆ ಮೊದಲ ಬಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಇಬ್ಬರಲ್ಲಿ ಕಾಣಿಸಿಕೊಂಡಿತ್ತು. ಮೂವರು ಗುಣಮುಖರಾದ ನಂತರ 32 ದಿನಗಳ ಕಾಲ ಯಾವುದೇ ಸೋಂಕಿನ ಪ್ರಕರಣ ವರದಿ ಆಗಿರಲಿಲ್ಲ. ಆ ಅವಧಿಯಲ್ಲಿ ಜಿಲ್ಲಾಡಳಿತ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 80 ಹಾಸಿಗೆಯ ವಿಭಾಗವನ್ನ ಕೋವಿಡ್‌ ಆಸ್ಪತ್ರೆಯನ್ನಾಗಿ ಹಾಗೂ 150 ಹಾಸಿಗೆ ವಿಭಾಗವನ್ನು ನಿಗದಿತ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಿ ಚಿಕಿತ್ಸೆಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಜೊತೆಗೆ ಬಾಪೂಜಿ, ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲೂ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ನಾಲ್ಕು ತಾಲೂಕು ಕೇಂದ್ರಗಳಲ್ಲೂ 10 ಐಸೋಲೇಷನ್‌ ವಾರ್ಡ್‌ ಸಿದ್ಧಪಡಿಸಿದೆ.

Advertisement

ಸರಿ ಸುಮಾರು 32 ದಿನಗಳ ನಂತರ ಏ. 29 ರಂದು ಜಿಲ್ಲೆಯಲ್ಲಿ ಪ್ರಥಮ ಕೋವಿಡ್ ಸೋಂಕಿನ ಪ್ರಕರಣ ದೃಢಪಟ್ಟಿತ್ತು. ನೋಡ ನೋಡುತ್ತಿದ್ದಂತೆ ಸೋಂಕಿನ ಪ್ರಮಾಣ ಜರ್ರನೆ ಏರಿತ್ತು. ಮೇ 19ರ ವೇಳೆಗೆ 109 ಸಕ್ರಿಯ ಪ್ರಕರಣಗಳಿದ್ದವು ಎಂದರೆ ಎಷ್ಟು ವೇಗವಾಗಿ ಕೋವಿಡ್ ವೇಗವಾಗಿ ವ್ಯಾಪಿಸಿತ್ತು ಎಂಬುದರ ಲೆಕ್ಕ ಹಾಕಬಹುದು. ಮೇ 20 ರಂದು ಪ್ರಥಮ ಬಾರಿಗೆ 7 ಜನ ಸೋಂಕಿತರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾದರು. ಅಲ್ಲಿಂದ ಡಿಸ್ಚಾರ್ಜ್‌ ಆಗುವಂತಹವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಈಗ ಡಿಸ್ಚಾರ್ಜ್‌ ಆದವರ ಸಂಖ್ಯೆಯೇ 220. ಸಕ್ರಿಯ ಪ್ರಕರಣಗಳ ಸಂಖ್ಯೆ 29 ಇದೆ. ಹಾಗಾಗಿ ಸದ್ಯಕ್ಕಂತೂ ಖಾಸಗಿ ಆಸ್ಪತ್ರೆಗೆ ಮೊರೆ ಹೋಗಬೇಕಾದ ಪ್ರಮೇಯ ಕಂಡು ಬರುತ್ತಿಲ್ಲ.

ಸದ್ಯ ಅಂತಹ ಸ್ಥಿತಿ ಇಲ್ಲ
ದಾವಣಗೆರೆ ಜಿಲ್ಲೆಯಲ್ಲಿ 29 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ ಮತ್ತು ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ 230 ಹಾಸಿಗೆ ಸಿದ್ಧಪಡಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಒಟ್ಟಾರೆ 40 ಐಸೋಲೇಷನ್‌ ಬೆಡ್‌ಗಳಿವೆ. ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಮತ್ತು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇಡೀ ಜಿಲ್ಲಾಡಳಿತ ಒಂದು ತಂಡವಾಗಿ ಕೆಲಸ ಮಾಡುತ್ತಿದೆ. ಸದ್ಯಕ್ಕಂತೂ ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ರೆಫರ್‌
ಮಾಡುವ ವಾತಾವರಣವೇ ಇಲ್ಲ. ಮುಂದೆಯೂ ಅಂತಹ ವಾತಾವರಣ ಬರಲಾರದು ಎಂಬ ವಿಶ್ವಾಸವೂ ಇದೆ. ಆ ರೀತಿ ಆಗದೇ ಇರಲಿ ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದರು.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next