ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಈ ತಿಂಗಳ ಕೊನೆಯವರೆಗೆ ಭದ್ರಾ ಡ್ಯಾಂ ನೀರನ್ನು ಹರಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯ ಜಲಸಂಪನ್ಮೂಲ ಇಲಾಖೆ (ಭದ್ರಾ ನಾಲಾ ವಿಭಾಗ-5) ಕಚೇರಿಗೆ ಮುತ್ತಿಗೆ ಹಾಕಿದ ರೈತ ಸಂಘದ ನೂರಾರು ಕಾರ್ಯಕರ್ತರು, ರೈತರು, ಕೂಡಲೇ ಈ ತಿಂಗಳ ಅಂತ್ಯದವರೆಗೆ ಭದ್ರಾ ಡ್ಯಾಂ ನೀರನ್ನು ಹರಿಸಬೇಕು. ಇಲ್ಲದಿದ್ದರೆ ನೀರು ಬಿಡುವವರೆಗೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಕೊನೆ ಭಾಗದ ರೈತರು ತಡವಾಗಿ ನಾಟಿ ಮಾಡಿರುವುದರಿಂದ ಹಾಗೂ ಈ ಭಾಗದ ರೈತರಿಗೆ ಸರಿಯಾಗಿ ನೀರು ಸಿಗದೇ ಇರುವುದರಿಂದ ಇನ್ನೂ ಸಹ ಕೈಗೆ ಭತ್ತದ ಬೆಳೆ ಬಂದಿಲ್ಲ. ಅಲ್ಲದೇ ಅಡಿಕೆ ತೋಟಗಳು ಸಂಪೂರ್ಣ ಒಣಗುತ್ತಿವೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕೂಡಲೇ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನುಕೂಲಸ್ಥರು ಅಡಿಕೆ ಮತ್ತು ಬಾಳೆ ಸೇರಿದಂತೆ ಮುಂತಾದ ತೋಟಗಳನ್ನು ಉಳಿಸಿಕೊಳ್ಳಲು ಪೈಪ್‌ಲೈನ್, ಟ್ಯಾಂಕರ್ ಬಳಸಿ ನೀರು ಹರಿಸುವ ಕೆಲಸ ಮಾಡುತ್ತಾರೆ. ಆದರೆ, ಬೆಳೆದ ಬೆಳೆಗೆ ಬಂಡವಾಳ ಹಾಕಿ ಸಾಲ ಮೈಮೇಲೆ ಹೊತ್ತುಕೊಂಡಿರುವ ರೈತರ ಗತಿ ಏನು ಎಂದು ಪ್ರಶ್ನಿಸಿದರಲ್ಲದೇ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದ್ದರೂ ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಭೇಟಿ ನೀಡಿಲ್ಲ. ಒಂದು ಸಭೆ ಕೂಡ ನಡೆಸಿಲ್ಲ. ಇಷ್ಟ ಇದ್ರೆ ಅಧಿಕಾರ ನಡೆಸಲಿ. ಇಲ್ಲದಿದ್ದರೆ ಅಧಿಕಾರ ಕೈಬಿಡಲಿ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮಕೈಗೊಂಡು ಜಿಲ್ಲಾ ಉಸ್ತುವಾರಿ ಸಚಿವರ ಕಿವಿ ಹಿಂಡುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಬಹುತೇಕ ಕಡೆ ಭತ್ತ ಕಟಾವಿಗೆ ಬರಲು ಸರಿ ಸುಮಾರು 20 ದಿನಗಳವರೆಗೆ ಬೇಕಾಗಿರುವುದರಿಂದ ಹಾಗೂ ತೋಟಗಳಲ್ಲಿನ ಕೊಳವೆ ಬಾವಿಗಳಲ್ಲಿಯೂ ನೀರಿಲ್ಲದೇ ಇರುವುದರಿಂದ ತೋಟ, ಗದ್ದೆಗಳಿಗೆ ನೀರಿನ ಅವಶ್ಯಕತೆ ಇದೆ. ನೀರಾವರಿ ಅಧಿಕಾರಿಗಳು ಮೇ 15ರಿಂದ 20ರವರೆಗೆ ನೀರು ಹರಿಸಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹಾಗಾಗಿ ಈ ತಿಂಗಳ ಅಂತ್ಯದವರೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ನೀರು ಹರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸೇನೆಯ ಜಿಲ್ಲಾಧ್ಯಕ್ಷ ಅರಸನಾಳ್ ಸಿದ್ದಪ್ಪ, ಉಪಾಧ್ಯಕ್ಷ ಹೊನ್ನೂರು ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ಕಾರ್ಯದರ್ಶಿ ಕೋಲ್ಕುಂಟೆ ಬಸಣ್ಣ, ಹುಚ್ಚವ್ವನಹಳ್ಳಿ ಪ್ರಕಾಶ್, ಪೂಜಾರ್ ಅಂಜಿನಪ್ಪ, ಎಚ್. ಪ್ರಕಾಶ್, ಕುಕ್ಕುವಾಡ ಪರಮೇಶ್, ಆಲೂರು ಪರಶುರಾಮ್, ಗುಮ್ಮನೂರು ಕೃಷ್ಣಮೂರ್ತಿ, ಶೇಖರಪ್ಪ, ಹನುಮಂತಪ್ಪ, ಆಲೂರು ಪರಶುರಾಮ್, ರುದ್ರಣ್ಣ, ಹುಚ್ಚೆಂಗಪ್ಪ ಸೇರಿದಂತೆ ಕೋಲ್ಕುಂಟೆ, ಕುಕ್ಕುವಾಡ, ಕರಿಲಕ್ಕೇನಹಳ್ಳಿ, ಆಲೂರು, ಆನಗೋಡು, ಮಾಯಕೊಂಡ ಹೋಬಳಿ, ಚಿಕ್ಕಬೂದಿಹಾಳ್ ಯರವನಾಗ್ತಿಹಳ್ಳಿ, ಕುರ್ಕಿ ಗ್ರಾಮಗಳ ರೈತರು, ಸೇನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.