Advertisement

2ನೇ ಬಾರಿ ಅಧಿಕಾರಕ್ಕಾಗಿ ಕೈ-ಕಮಲ ಹಣಾಹಣಿ

11:24 AM Oct 31, 2019 | |

ರಾ. ರವಿಬಾಬು
ದಾವಣಗೆರೆ:
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಹಣಾಹಣಿ ನಡೆಸುತ್ತಿವೆ. ನ.12 ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಆಡಳಿತ ನಡೆಸಬೇಕು ಎಂದು ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ತಂತ್ರ-ಪ್ರತಿತಂತ್ರ ರೂಪಿಸಿವೆ.

Advertisement

ದಾವಣಗೆರೆ ನಗರಸಭೆ 2007ರ ಜ.6 ರಂದು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ 2008 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜಯ ಸಾಧಿಸಿದ ಬಿಜೆಪಿ ಪ್ರಪ್ರಥಮ ಬಾರಿಗೆ ನಗರಪಾಲಿಕೆಯ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿತ್ತು.

ಮಹಾನಗರ ಪಾಲಿಕೆಯ 41 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 24, ಕಾಂಗ್ರೆಸ್‌ 11, ಜೆಡಿಎಸ್‌ 4 ಹಾಗೂ ಇಬ್ಬರು ಪಕ್ಷೇತರರು (ಬಿ.ಎಚ್‌. ಮಲ್ಲೇಶ್‌, ಶಫೀಕ್‌ ಪಂಡಿತ್‌) ಆಯ್ಕೆಯಾಗಿದ್ದರು. 15ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಬಿಜೆಪಿಯ ಮಾದಮ್ಮ ಮುನಿಸ್ವಾಮಿ ಪ್ರಥಮ ಮೇಯರ್‌ ಆಗಿದ್ದರು.

2000 ರಿಂದ 2005 ಅವಧಿಯಲ್ಲಿನ ನಗರಸಭೆಯ 35 ವಾರ್ಡ್‌ಗಳಲ್ಲಿ 32 ಸ್ಥಾನಗಳಿಸಿದ್ದ ಕಾಂಗ್ರೆಸ್‌ ಮಹಾನಗರ ಪಾಲಿಕೆಯಾದ ನಂತರ ನಡೆದ ಚುನಾವಣೆಯಲ್ಲಿ 11 ವಾರ್ಡ್‌ಗಲ್ಲಿ ಗೆಲ್ಲಲು ಮಾತ್ರ ಯಶಸ್ವಿಯಾಗಿತ್ತು. ಇಬ್ಬರು ಸದಸ್ಯರ ಹೊಂದಿದ್ದ ಬಿಜೆಪಿ 24 ವಾರ್ಡ್‌ನಲ್ಲಿ ಗೆದ್ದಿತ್ತು.

2013 ಮಾ. 7 ರಂದು 41 ವಾರ್ಡ್ ಗಳಿಗೆ ನಡೆದ ನಗರಪಾಲಿಕೆಯ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ 36 ವಾರ್ಡ್‌ಗಳಲ್ಲಿ ಜಯಗಳಿಸಿತ್ತು. ಮೊದಲ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಕೇವಲ 1 ವಾರ್ಡ್‌ ಗೆಲ್ಲುವ ಮೂಲಕ ಅತ್ಯಂತ ದಯನೀಯ ಸೋಲು ಅನುಭವಿಸಿತ್ತು. 4 ವಾರ್ಡ್‌ ಗೆದ್ದಿದ್ದ ಜೆಡಿಎಸ್‌ ಒಂದು ವಾರ್ಡ್‌ನಲ್ಲೂ ಗೆಲ್ಲಲಾಗಿರಲಿಲ್ಲ. ಸಿಪಿಐ ಒಂದು ವಾರ್ಡ್‌ ಗೆದ್ದಿತ್ತು.

Advertisement

ಎಸ್‌.ಜೆ.ಎಂ. ನಗರ, ಬಸವರಾಜ ಪೇಟೆ ಹಾಗೂ ಶಾಮನೂರು ವಾರ್ಡ್‌ನಲ್ಲಿ ಗೆದ್ದಿದ್ದ ಎಸ್‌. ಬಸಪ್ಪ, ಕೆ. ಚಮನ್‌ಸಾಬ್‌, ಸುರೇಶ್‌ ಮೂವರು ಕಾಂಗ್ರೆಸ್‌ ಪಾಳೇಯ ಸೇರಿದ್ದರಿಂದ ಕಾಂಗ್ರೆಸ್‌ ಬಲ 36 ರಿಂದ 39ಕ್ಕೆ ಏರಿತ್ತು. ಸಿಪಿಐನ ಆವರಗೆರೆ ಎಚ್‌ .ಜಿ. ಉಮೇಶ್‌ ಸಹ ಕಾಂಗ್ರೆಸ್‌ಗೆ ತಾತ್ವಿಕ ಬೆಂಬಲ ನೀಡಿದ್ದರಿಂದ ವಿರೋಧ ಪಕ್ಷ ಇಲ್ಲದಂತಾಗಿದ್ದು ಈಗ ಇತಿಹಾಸ. ತಲಾ ಒಂದೊಂದು ಬಾರಿ ಮಹಾನಗರಪಾಲಿಕೆಯ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್‌ ಎರಡನೇ ಬಾರಿಗೆ ಅಧಿಕಾರದತ್ತ ಕಣ್ಣು ನೆಟ್ಟಿವೆ.

ಸತತ ಎರಡನೇ ಬಾರಿಗೆ ನಗರಪಾಲಿಕೆಯನ್ನು ಕೈ.. ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ವಿಧಾನಸಭಾ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಪಿ.ಟಿ. ಪರಮೇಶ್ವರನಾಯ್ಕ, ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಜಿಲ್ಲಾ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ರಣತಂತ್ರ ಹೆಣೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ನಿರ್ಧಾರವನ್ನ ಆಳೆದುತೂಗಿ ಕೈಗೊಳ್ಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹಾಗೂ ಈಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಭರ್ಜರಿ ಲೀಡ್‌ ಪಡೆದುಕೊಂಡಿರುವ ಬಿಜೆಪಿ ನಗರಪಾಲಿಕೆ ಚುನಾವಣೆಯಲ್ಲೂ ಅದೇ ಓಘ.. ಮುಂದುವರೆಸುವತ್ತ ಯೋಜನೆ ರೂಪಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌, ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಇತರರ ನೇತೃತ್ವದಲ್ಲಿ ಚುನಾವಣಾ ತಂತ್ರ ಹೆಣೆಯಲಾಗುತ್ತಿದೆ.

ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್‌ಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ಇದೆ. ಟಿಕೆಟ್‌ಗಾಗಿ ಉಭಯ ಪಕ್ಷಗಳ ಮುಖಂಡರಲ್ಲಿ ಮನವಿ, ಮನವೊಲಿಕೆ, ಶಿಫಾರಸು, ಒತ್ತಡ…. ಎಲ್ಲಾ ರೀತಿಯ ಕಸರತ್ತು ನಡೆಸಲಾಗುತ್ತಿದೆ. ಟಿಕೆಟ್‌ಗೆ ಹರಸಾಹಸ ಪಡುತ್ತಿರುವರು ಒಂದೊಮ್ಮೆ ಟಿಕೆಟ್‌ ದೊರೆಯಲಿಲ್ಲ ಎಂದು ಭಿನ್ನಮತದ.. ಹಾದಿ ತುಳಿದಲ್ಲಿ
ಪಾರ್ಟಿಗೆ ಡ್ಯಾಮೇಜ್‌… ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ನಾಯಕರು ಬಹಳ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

ಟಿಕೆಟ್‌ ಆಕಾಂಕ್ಷಿಗಳು ಸಹ ಬಹಳ ತಾಳ್ಮೆಯಿಂದ ಹಸಿರು ನಿಶಾನೆಗೆ ಕಾಯುತ್ತಲೇ ಪರ್ಯಾಯ ವ್ಯವಸ್ಥೆಯತ್ತವೂ ಚಿತ್ತ ಹರಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಗುರುವಾರ ಮಧ್ಯಾಹ್ನ 3ರ ವರೆಗೆ ಕಾಲಾವಕಾಶ ಇದೆ. ಅಲ್ಲಿಯವರೆಗೆ ಟಿಕೆಟ್‌ ಪ್ರಯತ್ನ ನಡೆಯುತ್ತಿದೆ. ಪಕ್ಷದ ಅಧಿಕೃತ ಟಿಕೆಟ್‌ ದೊರೆಯದೇ ಹೋದರೂ ಪಕ್ಷೇತರರಾಗಿ ಕಣಕ್ಕಿಳಿಯ ಬಯಸಿದ್ದವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next