Advertisement

ಮಹಿಳಾ ನಿಲಯದ ಹೆಣ್ಮಕ್ಕಳಿಗೆ ಕಂಕಣ ಭಾಗ್ಯ!

11:09 AM Feb 28, 2020 | Naveen |

ದಾವಣಗೆರೆ: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ. ಯಾರ್ಯಾರ ಋಣಾನುಬಂಧ ಎಲ್ಲಿ ಇರುತ್ತದೆಯೋ ಗೊತ್ತಿರಲ್ಲ..ಎಂಬ ನಾಣ್ಣುಡಿ ಅಕ್ಷರಶಃ ನಿಜ ಎಂಬುದಕ್ಕೆ ಶ್ರೀರಾಮ ನಗರದ ರಾಜ್ಯ ಮಹಿಳಾ ನಿಲಯದಲ್ಲಿ ಗುರುವಾರ ನಡೆದ ಮದುವೆ ಸಾಕ್ಷಿಯಾಯಿತು.

Advertisement

ರಾಜ್ಯ ಮಹಿಳಾ ನಿಲಯದ ನಿವಾಸಿ ಅನಿತಾ(ಮಮತಾ) ಅವರ ವಿವಾಹ ಸಿದ್ಧಾಪುರ ತಾಲೂಕಿನ ಬಾಳೆಕೊಪ್ಪದ ಲೋಲಾಕ್ಷಿ ಮತ್ತು ಸುಬ್ರಾಯ ಹೆಗಡೆ ದಂಪತಿ ಜೇಷ್ಠ ಪುತ್ರ ವಿನಾಯಕ ಸುಬ್ರಾಯ ಹೆಗಡೆ ಅವರೊಂದಿಗೆ, ರಾಜ್ಯ ಮಹಿಳಾ ನಿಲಯದ ನಿವಾಸಿ ರೇಣುಕ ಗೊರಪ್ಪನವರ್‌ ಅವರ ವಿವಾಹ ಶಿರಸಿ ತಾಲೂಕಿನ ಶಿವಳ್ಳಿಯ ಸೀತಾ ಮತ್ತು ಜನಾರ್ಧನ ಸುಬ್ರಾಯ ಭಟ್ಟ ದಂಪತಿ ಜೇಷ್ಠ ಪುತ್ರ ನಾಗೇಂದ್ರ ಜನಾರ್ದನ ಭಟ್ಟ ಅವರೊಂದಿಗೆ ನೆರವೇರಿತು.

ನೂತನ ಜೀವನಕ್ಕೆ ಕಾಲಿಡುವ ಮುನ್ನ ಸಪ್ತಪದಿ ತುಳಿಯುವ ಇಬ್ಬರಿಗೂ ತಂದೆ-ತಾಯಿ ಇಲ್ಲವೆಂಬ ಬಹು ದೊಡ್ಡ ಕೊರಗನ್ನು ಜಿಲ್ಲಾಮಟ್ಟದ ಅಧಿಕಾರಿಗಳು ನೀಗಿಸಿದವರು. ಈ ಇಬ್ಬರೂ ಹೆಣ್ಣು ಮಕ್ಕಳನ್ನು ಧಾರೆ ಎರೆದುಕೊಟ್ಟ ಈ ಅಧಿಕಾರಿಗಳು ಹಾಲು-ತುಪ್ಪ ಹಾಕಿ ಜೀವನ ಹಾಲು-ಜೇನಿನಂತಿರಲಿ ಎಂದು ಹರಿಸಿದರು.

ಮಾಂಗಲ್ಯಧಾರಣೆ ಸಮಯದಲ್ಲಿ ಆನಂದ ಭಾಷ್ಪ ಸುರಿಸಿದರು.ಅಧಿಕಾರ-ಆಡಳಿತ ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವೀಯತೆ ಎಂಬುದನ್ನು ಇವರು ಸಾಕ್ಷೀಕರಿಸಿದರು. ಗುರುವಾರ ನಡೆದ ಮಹಿಳಾ ನಿಲಯದ ಅನಿತಾ(ಮಮತಾ), ರೇಣುಕ ಗೊರಪ್ಪನವರ್‌ ಮದುವೆಯಲ್ಲಿ ಧಾರೆ ಎರೆದುಕೊಟ್ಟವರು ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ್‌ ಜಿ.ಬೀಳಗಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಅವರು. ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌, ಅಭಿಲಾಷ, ಶೃತಿ, ವಾರ್ತಾಧಿಕಾರಿ ಡಿ.ಅಶೋಕ್‌ ಕುಮಾರ್‌ ಮತ್ತು ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಸಾಥ್‌ ನೀಡಿದರು.

ಸರ್ಕಾರಿ ಸ್ವಾಮ್ಯದ ಮಹಿಳಾ ನಿಲಯದಲ್ಲಿ ಮದುವೆ ನಡೆದರೂ ಶಾಸ್ತ್ರ, ಸಂಪ್ರದಾಯಕ್ಕೆ ಯಾವುದೇ ಕೊರತೆಯಾಗದಂತೆ ಗಜಾನನ ಶಾಸ್ತ್ರಿಗಳು ಪೌರೋಹಿತ್ಯ ವಹಿಸಿದ್ದರು. ವಧು-ವರರ ಮೆರವಣಿಗೆಯಿಂದ ಹಿಡಿದು ಪ್ರತಿಯೊಂದು ಶಾಸ್ತ್ರೋಕ್ತವಾಗಿಯೇ ನಡೆದವು.

Advertisement

11ರಿಂದ 11.30 ಗಂಟೆ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಿತು. ನಾಗೇಂದ್ರ ಜನಾರ್ದನ ಭಟ್‌ ಮಾತನಾಡಿ, ಶಿವಳ್ಳಿಯಲ್ಲಿ 2 ಎಕರೆ ಅಡಕೆ ತೋಟವಿದೆ. ಎಸ್ಸೆಸ್ಸೆಲ್ಸಿ ನಂತರ ಸಂಸ್ಕೃತದಲ್ಲಿ ಬಿಇಡಿ ಪೂರೈಸಿ ಅರ್ಚಕ ವೃತ್ತಿ ಮಾಡುತ್ತಿದ್ದೇನೆ. ಇಂತಹ ಆದರ್ಶದ ಮದುವೆ ಆಗುತ್ತಿರುವುದಕ್ಕೆ ನಿಜಕ್ಕೂ ಬಹಳ ಖುಷಿ ಆಗುತ್ತಿದೆ. ಬೆಂಗಳೂರಿನಲ್ಲಿ ಮಾಡುತ್ತಿದ್ದ ಅರ್ಚಕ ವೃತ್ತಿ ಬಿಟ್ಟು ಇನ್ನು ಮುಂದೆ ಊರಿಗೆ ವಾಪಸ್ಸಾಗುತ್ತೇನೆ. ಇಬ್ಬರೂ ಒಳ್ಳೆಯ ಜೀವನ ನಡೆಸುತ್ತೇವೆ ಎಂದು ಸಂತಸ ಹಂಚಿಕೊಂಡರು.

ವಧು ರೇಣುಕ ಮಾತನಾಡಿ, ನನ್ನ ಜೀವನದ ಮರೆಯಲಾಗದ ಕ್ಷಣ. ಬಹಳ ಖುಷಿ ಆಗುತ್ತಿದೆ. ನನಗೆ ತಂದೆ- ತಾಯಿ ಯಾರೂ ಇಲ್ಲ. ಆದರೆ,ಅಧಿಕಾರಿಗಳು ನನ್ನ ತಂದೆ-ತಾಯಿಯವರಿಗಿಂತಲೂ ಹೆಚ್ಚಿನದ್ದಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಬಹಳ ಖುಷಿ ಆಗುತ್ತಿದೆ ಎಂದರು. ಅನಿತಾ(ಮಮತಾ) ಮತ್ತು ವಿನಾಯಕ ಸುಬ್ಬರಾವ್‌ ಹೆಗಡೆ, ಖುಷಿ ಆಗುತ್ತಿದೆ ಎಂದು ಸಂತಸ ಹಂಚಿಕೊಂಡರು.

ಈ ಇಬ್ಬರೂ ಹೆಣ್ಣು ಮಕ್ಕಳನ್ನು ಧಾರೆ ಎರೆದುಕೊಟ್ಟಿರುವುದು ದೇವರು ನನಗೆ ನೀಡಿದ ಬಹು ದೊಡ್ಡ ಪುಣ್ಯದ ಕೆಲಸ. ಇಬ್ಬರಿಗೆ ತಂದೆ-ತಾಯಿ ಇಲ್ಲ ಎಂಬ ಕೊರಗು ಕಿಂಚಿತ್ತೂ ಕಾಡದಂತೆ ನಮ್ಮ ಎಲ್ಲಾ ಅಧಿಕಾರಿಗಳು ತಮ್ಮ ಮನೆಯ ಮದುವೆಯಂತೆ ಮುಂದೆ ನಿಂತು ಎಲ್ಲವನ್ನೂ ನೆರವೇರಿಸಿದ್ದು ಸಂತೋಷ ತಂದಿತು.
ಮಹಾಂತೇಶ್‌ ಜಿ. ಬೀಳಗಿ,
ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next