Advertisement

ಉದ್ಯೋಗ ಖಾತ್ರಿಗೆ ಫುಲ್‌ ಡಿಮ್ಯಾಂಡ್‌

03:47 PM Apr 23, 2020 | Naveen |

ದಾವಣಗೆರೆ: ಜಗತನ್ನೇ ಬೆಚ್ಚಿ ಬೀಳಿಸುತ್ತಿರುವ ಮಹಾಮಾರಿ ಕೋವಿಡ್ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ ಡೌನ್‌ ನಡುವೆಯೂ ವಿನಾಯತಿ ನೀಡಲಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ!

Advertisement

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಹಂತದಲ್ಲೇ ದಾವಣಗೆರೆ ಜಿಲ್ಲೆ ಆಯ್ಕೆಯಾಗಿದ್ದು, 1,90,319 ಜನರು ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ 13,597, ಚನ್ನಗಿರಿಯಲ್ಲಿ 20,263, ಹರಿಹರದಲ್ಲಿ 7,792, ಹೊನ್ನಾಳಿಯಲ್ಲಿ 18,116 ಹಾಗೂ ಜಗಳೂರಿನಲ್ಲಿ 32,039 ಜನರು ಸೇರಿ ಒಟ್ಟಾರೆ 91,807 ಜನರು ಖಾಯಂ ಕೆಲಸಕ್ಕೆ ಬರುತ್ತಿದ್ದಾರೆ.

ಪ್ರಥಮ ಹಂತದ ಲಾಕ್‌ಡೌನ್‌ ಜಾರಿಯಿಂದ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಸಹ ಅಕ್ಷರಶಃ ಸ್ತಬ್ಧಗೊಂಡಿದ್ದವು. ಖಾತ್ರಿ ಯೋಜನೆಯೊಟ್ಟಿಗೆ ಇತರೆಡೆಯೂ ಕೆಲಸವೇ ಇಲ್ಲದಂತಾಗಿ ಕೂಲಿ ಕಾರ್ಮಿಕರು ಅತೀವ ಸಂಕಷ್ಟಕ್ಕೆ ಸಿಲುಕಿದ್ದರು. ಗ್ರಾಮೀಣ ಭಾಗದ ಜನರಿಗೆ ಕೆಲಸದ ಒದಗಿಸುವ ಉದ್ದೇಶದಿಂದ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಹಸಿರು ನಿಶಾನೆ ದೊರೆತ ನಂತರ ದುಡಿಯುವ ಕೈಗಳಿಗೆ ಕೆಲಸ ದೊರಕುತ್ತಿದೆ.

ನಿಧಾನವಾಗಿ ಬದುಕಿನ ಬಂಡಿ ಸಾಗುವಂತಾಗಿದೆ. ಲಾಕ್‌ಡೌನ್‌ ನಡುವೆಯೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳಿಗೆ ಅನುಮತಿ ನೀಡಿದ ಪ್ರಾರಂಭಿಕ ದಿನಗಳಲ್ಲಿ ಕೂಲಿಕಾರರು ಪ್ರತಿಕ್ರಿಯೆ ಒಂದಷ್ಟು ನೀರಸವಾಗಿತ್ತು. ಕೊರೊನಾ ಭಯ ಕಾಡುತ್ತಿತ್ತು. ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್, ಸ್ಯಾನಿಟೈಸರ್‌, ಆಗಾಗ ಕೈ ತೊಳೆಯಲು ಅನುಕೂಲ, ಎಲ್ಲಕ್ಕಿಂತಲೂ ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಂಡ ನಂತರ ಕೆಲಸಗಾರರ ಸಂಖ್ಯೆ ಹೆಚ್ಚಾಗತೊಡಗಿದೆ.

ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬಳಿ 38, ಐಗೂರು ಸಮೀಪ 150, ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ 130,
ಕಂಸಾಗರದಲ್ಲಿ 35, ನಿಲೋಗಲ್‌ನಲ್ಲಿ 77, ಹೊನ್ನಾಳಿ ತಾಲೂಕಿನ ಸವಳಂಗದಲ್ಲಿ 80, ಚೀಲೂರಿನಲ್ಲಿ 25, ಕಂಚಿಗನಾಳ್‌ನಲ್ಲಿ 80, ಕುಂದೂರಿನಲ್ಲಿ 312, ಗಂಗನಕೋಟೆಯಲ್ಲಿ 52 ಕತ್ತಿಗೆ ಮತ್ತು ಕುಂಕುವ ಗ್ರಾಮದಲ್ಲಿ ತಲಾ 70 ಜನರು ಸೇರಿ ಒಟ್ಟಾರೆ 1,119 ಜನರು ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಆಧಾರಿತ ಕೆರೆ, ಹಳ್ಳ ಹೂಳೆತ್ತುವ ಕೆಲಸದಲ್ಲಿ ಮಾಡುತ್ತಿದ್ದಾರೆ.

Advertisement

ಜಿಲ್ಲೆಯ 196 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಖಾತ್ರಿ ಯೋಜನೆಯಡಿ ವೈಯಕ್ತಿಕವಾಗಿ ಅಂದರೆ ಹೊಲಗಳ ಬದು ನಿರ್ಮಾಣ, ಕೃಷಿ ಹೊಂಡ, ದನಗಳ ಕೊಟ್ಟಿಗೆ ಒಳಗೊಂಡಂತೆ ಹಲವಾರು ಕೆಲಸ ಕೋರಿ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ವಸತಿ ಯೋಜನೆಯಡಿ ಓರ್ವ ಕೆಲಸಗಾರನಿಗೆ 90 ದಿನಗಳ ಕೆಲಸ ಮಾಡಲು ಸಹ ಅವಕಾಶ ಇದೆ. ವೈಯಕ್ತಿಕ ಕೆಲಸಗಳಿಗೆ ಕೆಲವೇ ದಿನಗಳಲ್ಲಿ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಮೂಲಗಳು ತಿಳಿಸಿವೆ.

ಮಹಾಮಾರಿ ಕೋವಿಡ್ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಖಾತ್ರಿ ಕೆಲಸದ ಜಾಗದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಕೆಲಸಕ್ಕೆ ಬರುವರಿಂದ ಕೊರೊನಾ ವೈರಸ್‌ ತಡೆಗೆ ಸಂಬಂಧಿಸಿದಂತೆ ಪ್ರತಿಜ್ಞೆಯನ್ನು ಸಹ ಮಾಡಿಸಲಾಗುತ್ತಿದೆ. ಕೆಲಸದ ಜೊತೆಗೆ ಆರೋಗ್ಯ ಸುರಕ್ಷೆಗೆ ಅತಿ ಹೆಚ್ಚಿನ ಗಮನ ನೀಡಲಾಗುತ್ತಿದೆ.

ನೋಂದಣಿಯಾದ ಎಲ್ಲರಿಗೂ ಕೆಲಸ
ಲಾಕ್‌ಡೌನ್‌ ಕಾರಣಕ್ಕೆ ಅನೇಕ ಕಡೆ ಕೆಲಸ ಇಲ್ಲವಾಗಿದೆ. ಖಾತರಿ ಯೋಜನೆಯಡಿ ಒಂದು ದಿನಕ್ಕೆ ಒಬ್ಬರಿಗೆ ಒಟ್ಟಾರೆ 285 ರೂ. ಕೂಲಿ ನೀಡಲಾಗುತ್ತದೆ. ಹೆಣ್ಣುಮಕ್ಕಳು ಮತ್ತು ಪುರುಷರಿಗೆ ಸಮಾನವಾಗಿ ಕೂಲಿ ಪಾವತಿ ಮಾಡಲಾಗುವುದು. ವಾರಾಂತ್ಯಕ್ಕೆ ಜಾಬ್‌ ಕಾರ್ಡ್‌ದಾರರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ಒಂದು ತಿಂಗಳು ಕೆಲಸ ಮಾಡಿದರೂ ಒಬ್ಬರಿಗೆ 11ರಿಂದ 12 ಸಾವಿರ ರೂ. ದೊರೆಯುತ್ತದೆ. ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗುವುದರಿಂದ ಖಾತರಿ ಯೋಜನೆಯಡಿ ಕೆಲಸಕ್ಕೆ ಬಹಳ ಬೇಡಿಕೆ ಬರುತ್ತಿದೆ. ಕೆಲಸ ಕೋರಿ ಬಂದಂತಹ ಎಲ್ಲರಿಗೂ ಕೆಲಸ ನೀಡಲಾಗುವುದು ಎಂದು ಜಿಪಂ ಮೂಲಗಳು ಹೇಳಿವೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next