Advertisement

ಹಸಿರೀಕರಣಕ್ಕೆ ಅರಣ್ಯ ಇಲಾಖೆ ಸಜ್ಜು

12:18 PM May 26, 2019 | Naveen |

ದಾವಣಗೆರೆ: ಪ್ರತಿ ವರ್ಷದಂತೆ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಈ ಬಾರಿಯೂ ಮಳೆಗಾಲದ ಆರಂಭದ ಜೂನ್‌ ಮೊದಲ ವಾರದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ರೈತರು, ಸಾರ್ವಜನಿಕರಿಗೆ ಸಸಿ ವಿತರಿಸಲು ಹಾಗೂ ರಸ್ತೆಬದಿ ಸೇರಿದಂತೆ ವಿವಿಧ ಅರಣ್ಯಗಳ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

2019-20ನೇ ಸಾಲಿಗೆ ವಿವಿಧ ಯೋಜನೆಗಳಡಿ ಜಿಲ್ಲೆಯಲ್ಲಿ ಒಟ್ಟು 438 ಹೆಕ್ಟೇರ್‌ ಪ್ರದೇಶದಲ್ಲಿ 4.30ಲಕ್ಷ ಸಸಿಗಳನ್ನು ಅರಣ್ಯ ಪ್ರದೇಶದ ಬ್ಲಾಕ್‌ ನೆಡುತೋಪು ನಿರ್ಮಾಣ ಹಾಗೂ ಸಾರ್ವಜನಿಕರು ಮತ್ತು ರೈತರಿಗೆ 4 ಲಕ್ಷದ 4500 ಸಸಿ ವಿತರಣೆ ಸೇರಿದಂತೆ ಒಟ್ಟು ದಾವಣಗೆರೆ ಜಿಲ್ಲೆಯಲ್ಲಿ 8ಲಕ್ಷ ಸಸಿಗಳನ್ನು ನೆಡುವ ಹಾಗೂ ರೈತರಿಗೆ ವಿತರಿಸುವ ಕಾರ್ಯಕ್ರಮ ರೂಪಿಸಲಾಗಿದ್ದು, ಜೂನ್‌ 5ರಿಂದ ಚಾಲನೆ ದೊರೆಯಲಿದೆ.

ವಿವಿಧ ಸಸಿಗಳ ಮಾದರಿ: ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣಕ್ಕೆ ಹೊಂಗೆ, ಸಿಹಿ ಹುಣಸೆ, ಸೀಮಾರೂಬ, ತಪಸಿ, ಕಮರ, ತಾರೆ, ಅಂಟುವಾಳ, ಹೆಬ್ಬೇವು, ಹೊನ್ನೆ, ಹೊಳೆಮತ್ತಿ, ಶಿವನಿ, ಆಲ, ಸಿಸ್ಸು, ಅರಳಿ, ನೇರಳೆ, ಗೋಣಿ, ಅತ್ತಿ, ಬೇಲ ಇತರೆ ಸಸಿಗಳು ಸಿದ್ಧಗೊಂಡಿವೆ.

ಇನ್ನು ಆಲ, ಬೇವು, ನೇರಳೆ, ಮಹಾಘನಿ, ಹೊಂಗೆ, ತಪಸಿ, ಸ್ಪೆಥೋಡಿಯಾ, ಟಬೂಬಿಯಾ, ರೂಸಿಯಾ ಇತರೆ ಸಸಿಗಳನ್ನು ನಗರ ಮತ್ತು ರಸ್ತೆಬದಿ ನೆಡುತೋಪು ನಿರ್ಮಾಣ ಮಾಡಲು ಹಾಗೂ ಶ್ರೀಗಂಧ, ಸಾಗುವಾನಿ, ಬೇವು, ನೇರಳೆ, ಕಾಡು ಬಾದಾಮಿ, ಸಿಲ್ವರ್‌, ಓಕ್‌, ನುಗ್ಗೆ, ಹೊಂಗೆ, ಕರಿಬೇವು ಇತರೆ ಸಸಿಗಳನ್ನು ಸಾರ್ವಜನಿಕರಿಗೆ ಮತ್ತು ರೈತರಿಗೆ ವಿತರಿಸಲಾಗುವುದು.

ಅರಣ್ಯ ಇಲಾಖೆ ಪ್ರೋತ್ಸಾಹ: ಅರಣ್ಯ ಇಲಾಖೆಯು ಪ್ರತಿ ವೃಕ್ಷದ ಉಳಿವಿಗೆ ಮೊದಲೆರೆಡು ವರ್ಷ 30 ರೂಪಾಯಿ, ಮೂರನೇ ವರ್ಷಕ್ಕೆ 40 ರೂಪಾಯಿಯಂತೆ ಒಟ್ಟು 100 ರೂಪಾಯಿ ಪ್ರೋತ್ಸಾಹ ಧನವನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ರೈತರಿಗೆ ನೀಡುತ್ತದೆ.

Advertisement

ಎಲ್ಲಾ ತಾಲೂಕುಗಳಲ್ಲೂ ಜೂ. 5ರಂದು ವಿಶ್ವ ಜಲ ದಿನಾಚರಣೆ ಅಂಗವಾಗಿ ವನ ಮಹೋತ್ಸವ ನಡೆಸಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯಿಂದ ಈ ಬಾರಿ ಜಿಲ್ಲೆಯ ವಿವಿಧ ತಾಲೂಕಿನ ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ಇತರೆ ಸಂಸ್ಥೆಗಳಿಗೆ ಹಾಗೂ ರಸ್ತೆಬದಿ ಸೇರಿದಂತೆ ವಿವಿಧ ಅರಣ್ಯಗಳ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಸಸಿಗಳನ್ನು ವಿತರಿಸಲಾಗುವುದು. ಬೇವು, ನೇರಳೆ, ಹೊಂಗೆ, ಹೊಳೆ ಮತ್ತಿ,ಆಲ, ಅರಳಿ,ಕಾಡು ಬಾದಾಮಿ, ಮಹಾಗನಿ, ತೇಗ, ಸಿಲ್ವರ್‌ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಇಲಾಖೆಯ ವಿವಿಧ ಯೋಜನೆಗಳಡಿ 1,34 ಲಕ್ಷ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ 9.66 ಲಕ್ಷ ಸಸಿ ಸೇರಿದಂತೆ ಒಟ್ಟು 11 ಲಕ್ಷ ಸಸಿಗಳನ್ನು ಬೆಳೆಸಿದ್ದು, ಜೂನ್‌ 5ರಿಂದ ಉಚಿತ ಮತ್ತು ರಿಯಾಯ್ತಿ ದರದಲ್ಲಿ ವಿತರಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದೆಲ್ಲೆಡೆ ಮರಗಳನ್ನು ಕಡಿದು ರಸ್ತೆ, ಒಳಚರಂಡಿ ಅಭಿವೃದ್ಧಿಗೆ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಕೇಳುತ್ತಾರೆ. ಆದರೆ, ಸ್ಮಾರ್ಟ್‌ಸಿಟಿ ದಾವಣಗೆರೆಯನ್ನು ಪರಿಸರ ಪೂರಕ ಗ್ರೀನ್‌ಸಿಟಿಯಾಗಿ ಮಾಡಲು ಮಾತ್ರ ಮುಂದಾಗುತ್ತಿಲ್ಲ. ಇತ್ತ ಅರಣ್ಯ ಇಲಾಖೆಗೆ ಸಸಿಗಳನ್ನು ಬೆಳೆಸಲು ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ಸಭೆಗೂ ಅರಣ್ಯ ಅಧಿಕಾರಿಗಳನ್ನು ಕರೆಯುತ್ತಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪರಿಸರ ಸುಧಾರಣೆಗೆ ಸಾಕಷ್ಟು ಗೈಡ್‌ಲೈನ್ಸ್‌ ಇದ್ದರೂ ಪಾಲಿಸುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪರಿಸರ ಪೂರಕ ಗ್ರೀನ್‌ಸಿಟಿ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಬೇಕು.
ಚಂದ್ರಶೇಖರ್‌ ನಾಯಕ,
ಉಪ ಅರಣ್ಯ ಸಂರಕ್ಷಣಾಧಿಕಾರಿ.

ಕೆಂಗಲಹಳ್ಳಿ ವಿಜಯ್‌

Advertisement

Udayavani is now on Telegram. Click here to join our channel and stay updated with the latest news.

Next