Advertisement

ಸಫಾಯಿ ಕರ್ಮಚಾರಿ ಮಕ್ಕಳಿಗೆ ಪ್ರವೇಶ ನೀಡದಿದ್ರೆ ಕ್ರಮ

09:59 PM Jun 25, 2021 | Team Udayavani |

ದಾವಣಗೆರೆ: ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ನೀಡದಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು. ಗುರುವಾರ ಮ್ಯಾನ್ಯುಯಲ್‌ ಸ್ಕಾವೆಂಜಿಂಗ್‌ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರ ಕಾಯ್ದೆ ಹಾಗೂ ನಿಯಮಗಳ ತರಬೇತಿ ಕಾರ್ಯಕ್ರಮದ ಬಳಿಕ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡಬೇಕು ಎಂದು ಸರ್ಕಾರದ ಆದೇಶವೇ ಇದೆ. ಜಿಲ್ಲಾಧಿಕಾರಿಗಳು ಪ್ರವೇಶ ದೊರಕಿಸಿಕೊಡಲು ಗಮನ ಹರಿಸಬೇಕು. ಒಂದು ವೇಳೆ ಪ್ರವೇಶ ನೀಡದಿದ್ದರೆ ಅಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದರು. ಹರಿಹರದಲ್ಲಿ ಕೆಲಸದ ಅವಧಿಯಲ್ಲಿ ಪೌರ ಕಾರ್ಮಿಕರು ಸೂಕ್ತ ಮುಂಜಾಗ್ರತೆ ವಹಿಸದೆ, ಅಗತ್ಯ ಪರಿಕರ ಬಳಸದೆ ಕೆಲಸ ಮಾಡುತ್ತಿರುವುದು ಸ್ವತಃ ತಮ್ಮ ಗಮನಕ್ಕೆ ಬಂದಿದೆ. ಪೌರ ಕಾರ್ಮಿಕರಿಗೆ ಅಗತ್ಯವಾದ ಪರಿಕರ ನೀಡಬೇಕು. ಕಡ್ಡಾಯವಾಗಿ ಬಳಸುವಂತೆ ನಿಗಾ ವಹಿಸಬೇಕು. ನಿಗದಿತ ಅವಧಿಯಲ್ಲಿ ಆರೋಗ್ಯ ತಪಾಸಣೆ, 6 ತಿಂಗಳಿಗೊಮ್ಮೆ ಮಾಸ್ಟರ್‌ ಹೆಲ್ತ್‌ ಚೆಕಪ್‌ ಮಾಡಿಸಬೇಕು ಎಂದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಎಲ್ಲ ಪೌರ ಕಾರ್ಮಿಕರಿಗೆ ಸಮವಸ್ತ್ರ, ಗ್ಲೌಸ್‌, ಗಮ್‌ ಬೂಟ್‌ ನೀಡಲಾಗಿದೆ.

ಆದರೆ ಅವುಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಹಾಕಿಕೊಳ್ಳುತ್ತಿಲ್ಲ ಎಂದರು. ಕಾರ್ಮಿಕರಿಗೆ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಿ ಪರಿಕರಗಳನ್ನು ಉಪಯೋಗಿಸಿಯೇ ಕೆಲಸ ಮಾಡಲು ತಿಳಿಸಬೇಕು. ಎಲ್ಲ ಪೌರ ಕಾರ್ಮಿಕರಿಗೂ ಕಡ್ಡಾಯವಾಗಿ ಜೀವವಿಮೆ ಮಾಡಿಸುವಂತೆ ಎಂದು ಎಂ. ಶಿವಣ್ಣ ಸೂಚನೆ ನೀಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಮಹಾನಗರಪಾಲಿಕೆ ಹೊರತುಪಡಿಸಿ ಉಳಿದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಲಾಗಿದೆ. ನಿರಂತರವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಮೊದಲ ಹಂತದ ಕೋವಿಡ್‌ ನಿರೋಧಕ ಲಸಿಕೆಯನ್ನು ಎಲ್ಲರೂ ಪಡೆದಿದ್ದಾರೆ.

ಎರಡನೇ ಡೋಸ್‌ ಕೆಲವರು ಪಡೆದಿದ್ದು ಉಳಿದವರಿಗೂ ಲಸಿಕೆ ಕೊಡಿಸಲಾಗುವುದು ಎಂದರು. ಪೌರ ಕಾರ್ಮಿಕರ ಸಂಘದ ಪ್ರತಿನಿಧಿ ಮಾತನಾಡಿ, ಜೀವನಪೂರ್ತಿ ನಗರದ ಸ್ವತ್ಛತೆ ಮಾಡುವ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಸಮುದಾಯ ಶೌಚಾಲಯ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು. ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ. ಸ್ವಯಂ ಉದ್ಯೋಗಕ್ಕಾಗಿ ಕೆಲವರಿಗೆ ನೀಡಲಾಗಿರುವ ಜೆರಾಕ್ಸ್‌ ಯಂತ್ರ, ತಳ್ಳು ಗಾಡಿ, ಹೊಲಿಗೆ ಯಂತ್ರಗಳನ್ನು ಉಪಯೋಗಿಸದೆ ತುಕ್ಕು ಹಿಡಿಯುತ್ತಿವೆ.

ಹಾಗಾಗಿ ಸ್ವಉದ್ಯೋಗಕ್ಕೆ ದಾರಿಯಾಗುವ, ಅವಶ್ಯಕ ಸಾಮಗ್ರಿಗಳನ್ನು ಕೊಡುವುದು ಸೂಕ್ತ ಎಂದು ಮನವಿ ಮಾಡಿದರು. ಇನ್ನೊಬ್ಬ ಪ್ರತಿನಿಧಿ ಮಾತನಾಡಿ, ಮಹಾನಗರಪಾಲಿಕೆಯ ಮಳಿಗೆಗಳಲ್ಲಿ ಕೆಲವನ್ನು ನಮಗೆ ಹಂಚಿಕೆ ಮಾಡಿದರೆ ಅನುಕೂಲ ಆಗಲಿದೆ ಎಂದರು.

Advertisement

ಮಳಿಗೆಗಳು ಈಗಾಗಲೇ ಹರಾಜು ಆಗಿದ್ದು, ಯಾವ ಮಳಿಗೆಗಳೂ ಖಾಲಿ ಇಲ್ಲ ಎಂದು ನಗರಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ ತಿಳಿಸಿದರು. ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ 15 ಕಡೆ ವಿಶ್ರಾಂತಿ ಕೊಠಡಿಗಳಿಗೆ ಯೋಜನೆ ಸಿದ್ಧಪಡಿಸಲಾಗಿದ್ದು 45 ವಾರ್ಡ್‌ಗಳಲ್ಲೂ ಮಾಡುವ ಯೋಜನೆ ಇದೆ. ಪೌರ ಕಾರ್ಮಿಕರಿಗೆ ನಿರ್ವಹಣೆ ವಹಿಸಬಹುದಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರೂಪಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next