ಹೊನ್ನಾಳಿ: ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಬಗಟ್ಟೆಯಲ್ಲಿರುವ ವಸತಿ ಶಾಲೆಯಲ್ಲಿ 800 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಿದ್ದು, ಮೇ 31ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಕೋವಿಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಅರಬಗಟ್ಟೆ ಗ್ರಾಮಕ್ಕೆ ತೆರಳುವ ರಸ್ತೆ ದುರಸ್ತಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ ಸಾಸ್ವೆಹಳ್ಳಿ ಹಾಗೂ ಜೀವನಹಳ್ಳಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸರಿಯಾದ ಭೌತಿಕ ವ್ಯವಸ್ಥೆ ಕೊರತೆಯಿಂದ ಆ 2 ಕೋವಿಡ್ ಕೇಂದ್ರಗಳನ್ನು ಮುಚ್ಚಿ ಅರಬಗಟ್ಟೆಯ ವಸತಿ ಶಾಲೆಯಲ್ಲಿ ಸುಸಜ್ಜಿತ ಬೃಹತ್ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದರು.
ಈಗಾಗಲೇ ಅರಬಗಟ್ಟೆಯಲ್ಲಿನ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಬೇಕಾದ ಕಾಟ್, ಹಾಸಿಗೆ, ಮಂಚ ಜೋಡಣೆ ಮಾಡಲಾಗಿದೆ. ದಿನದ 24 ಗಂಟೆಯೂ ವಿದ್ಯುತ್ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಸಾಸ್ವೆಹಳ್ಳಿ ಹಾಗೂ ಜೀನಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಗುಣಮುಖರಾದವನ್ನು ಬಿಟ್ಟು ಉಳಿದವರನ್ನು ಅರಬಗಟ್ಟೆ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಎಂದ ಶಾಸಕರು, ಸೋಂಕಿತರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ರಸ್ತೆ ಅಭಿವೃದ್ಧಿ, ಅರಬಗಟ್ಟೆಯಲ್ಲಿರುವ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ತೆರಳುವ ರಸ್ತೆ ಹಾಳಾಗಿದ್ದು, ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.
ಆಂಬ್ಯುಲೆನ್ಸ್ ಓಡಾಟಕ್ಕೆ ತೊಂದರೆಯಾಗದ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಹಶೀಲ್ದಾರ್ ಬಸನಗೌಡ ಕೋಟೂರ, ತಾಲೂಕು ಆರೋಗ್ಯಾ ಧಿಕಾರಿ ಡಾ|ಕೆಂಚಪ್ಪ, ಬೆಸ್ಕಾಂ ಎಇಇ ರವಿಕಿರಣ್, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್, ಪಿಎಸೈ ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ, ಎಪಿಎಂಸಿ ಸದಸ್ಯ ಕುಬೇರಪ್ಪ ಇದ್ದರು.