Advertisement

ಸೊಸೆ ಆಗಿ ಬಂದಿರುವೆ ನೀನಿಲ್ಲಿಗೆ

03:45 AM Apr 05, 2017 | Harsha Rao |

ಅತ್ತೆ- ಮಾವನಿಗೆ ಮುದ್ದಿನ ಸೊಸೆ ಆಗೋದು ಹೀಗೆ!

Advertisement

ಮದ್ವೆ ಆಯೆ¤ಂಬ ಖುಷಿ. ಆದ್ರೆ, ಹೊಸ ಮನೆಗೆ ಕಾಲಿಟ್ಟಾಗ ಹೇಗೋ ಏನೋ ಎಂಬ ಕಸಿವಿಸಿ. ಮದ್ವೆಯಾಗಿ ಗಂಡನ ಮನೆ ಸೇರುವ ಎಲ್ಲ ಹೆಣ್ಮಕ್ಕಳಿಗೂ, ಅಲ್ಲಿ ಚೆನ್ನಾಗಿ ಬಾಳಿ ಬದುಕಬೇಕೆಂಬ ಆಸೆ ಇರುತ್ತೆ. ಆದರೆ, ಸರಿಯಾದ ಮಾರ್ಗದರ್ಶನ, ಸಲಹೆಯ ಕೊರತೆಯಿಂದಾಗಿ ಕೆಲವೊಮ್ಮೆ ಎಡವಟ್ಟುಗಳಾಗಿ, ಕುಟುಂಬಗಳು ಒಡೆಯುತ್ತವೆ. ಅತ್ತೆ-ಮಾವ, ನಾದಿನಿಯರು, ಓರಗಿತ್ತಿಯರೊಂದಿಗೆ ಸ್ನೇಹ ಸಂಪಾದಿಸಿ, ಪ್ರೀತಿಯಿಂದ ಕೂಡಿ ಬಾಳಿದರಷ್ಟೇ ಆ ಮನೆ ಸ್ವರ್ಗ. ಹುಟ್ಟಿ, ಬೆಳೆದ ಮನೆಯನ್ನು ಬಿಟ್ಟು ಹೊಸ ಮನೆ, ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುವಾಗ ಕೆಲವೊಂದು ಸಣ್ಣಪುಟ್ಟ ವಿಚಾರ ನೆನಪಿನಲ್ಲಿಟ್ಟುಕೊಂಡ್ರೆ ಜೀವನ ಬಲು ಸುಲಭ. ಆ ಸೀಕ್ರೆಟ್‌ ಯಾವುವು ಗೊತ್ತಾ?

1. ಮಾತೇ ಮಾಣಿಕ್ಯ: ಮನೆಯ ಎಲ್ಲರೊಂದಿಗೂ ಚೆನ್ನಾಗಿ ಮಾತನಾಡುತ್ತಿರಿ. ಕಚೇರಿಗೆ ಹೋದಾಗ ಅಥವಾ ದೂರವಿದ್ದಾಗಲೂ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಿ. ಅತ್ತೆ, ನಾದಿನಿಯರಿಗೆ ಆಗಾಗ್ಗೆ ಫೋನ್‌ ಕರೆ ಮಾಡಿ, ಕುಶಲೋಪರಿ ವಿಚಾರಿಸಿ. ಅವರೇ ಕರೆ ಮಾಡಲಿ ಎಂದು ಕಾಯಬೇಡಿ. ಇನ್ನು ಅವರೊಂದಿಗೆ ಎಲ್ಲ ವಿಚಾರಗಳಲ್ಲೂ ವಾಗ್ವಾದಕ್ಕಿಳಿಯುವುದು, ಪ್ರತಿ ಮಾತಿನಲ್ಲೂ ತಪ್ಪು ಹುಡುಕುವುದು ಮಾಡಬೇಡಿ.

2. ಸ್ಪರ್ಧೆ ಬೇಡ: ಮಗನ ಬಗ್ಗೆ ಅಮ್ಮನಿಗೆ ಸ್ವಾಮ್ಯಪ್ರವೃತ್ತಿ (ಪೊಸೆಸಿವ್‌ನೆಸ್‌) ಇರುವುದು ಸಹಜ. ಹೀಗಿರುವಾಗ, “ನಿಮ್ಮ ಮಗನಿಗೆ ಹೀಗೆ ಮಾಡಿದರೆ ಇಷ್ಟ. ಅಡುಗೆಗೆ ಇಂಥದ್ದನ್ನೇ ಹಾಕಿ’ ಎಂದು ಅತ್ತೆಗೆ ಪಾಠ ಮಾಡಬೇಡಿ. ಪತಿಗೆ ನಿಮ್ಮ ಅಡುಗೆ ಹೆಚ್ಚು ಇಷ್ಟವಾದರೂ ಅದನ್ನು ಅತ್ತೆ ಮುಂದೆ ಹೇಳಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಅತ್ತೆಯೊಂದಿಗೆ ಸ್ಪರ್ಧೆಗಿಳಿದು, ಅವರ ಮನಸ್ಸಿಗೆ ನೋಯಿಸಬೇಡಿ.

3. ಒಟ್ಟಿಗೆ ಟೈಮ್‌ಪಾಸ್‌: ಅಡುಗೆ ಮನೆಯಲ್ಲಿ, ಮನೆಯ ಇನ್ನಿತರ ಕೆಲಸಗಳಲ್ಲಿ ಅತ್ತೆ, ನಾದಿನಿಯರಿಗೆ ಸಹಾಯ ಮಾಡಿ. ಬಿಡುವಿದ್ದಾಗ ಅವರೊಂದಿಗೆ ಕಾಲ ಕಳೆಯಿರಿ. ಶಾಪಿಂಗ್‌, ಪಾರ್ಕ್‌, ಸಿನಿಮಾ, ಹೋಟೆಲ್‌ಗೆ ಪತಿಯೊಂದಿಗೆ ಮಾತ್ರ ಹೋಗುವ ಬದಲು, ಒಮ್ಮೊಮ್ಮೆ ಇಡೀ ಕುಟುಂಬವನ್ನು ಒಟ್ಟಿಗೇ ಕರೆದೊಯ್ಯಿರಿ. ಇದರಿಂದ ನಿಮ್ಮೊಳಗಿನ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ.

Advertisement

4. ಸಲಹೆ ಕೇಳಿ: ಕುಟುಂಬಕ್ಕೆ ಸಂಬಂಧಿಸಿ ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಅತ್ತೆ-ಮಾವನ ಸಲಹೆ ಪಡೆಯಿರಿ. ಈ ವಿಚಾರದಲ್ಲಿ ಹಿಂಜರಿಕೆ ಬೇಡ. ಹಿರಿಯರ ಸಲಹೆ ನಿಮಗೆ ಇಷ್ಟವಾಗದಿದ್ದರೆ, ಆ ಬಗ್ಗೆ ಚರ್ಚಿಸಿ, ಮನವೊಲಿಸಿದರಾಯ್ತು. ನಮ್ಮ ಮಗನ ಬದುಕಿನಲ್ಲಿ ನಮ್ಮ ಪ್ರಭಾವ ಇನ್ನೂ ಇದೆ ಎಂಬ ಭಾವನೆ ಅವರಲ್ಲಿ ನೆಮ್ಮದಿ ಮೂಡಿಸುತ್ತದೆ.

5. ಉಡುಗೊರೆ ಕೊಡುತ್ತಿರಿ: ಯಾರೇ ಆಗಲಿ, ಉಡುಗೊರೆ ತಂದುಕೊಟ್ಟಾಗ ಮನಸ್ಸು ಒಮ್ಮೆ ಉಲ್ಲಸಿತವಾಗುತ್ತದೆ, ಅಲ್ವೇ? ಇದನ್ನು ನೆನಪಿಟ್ಟುಕೊಳ್ಳಿ. ಆಗಾಗ ನಿಮ್ಮ ಅತ್ತೆ, ಮಾವ, ನಾದಿನಿಯರು, ಕುಟುಂಬದ ಇತರೆ ಸದಸ್ಯರಿಗೆ ಸಣ್ಣ ಪುಟ್ಟ ಉಡುಗೊರೆಗಳನ್ನು ಕೊಡುತ್ತಿರಿ. ಅವರ ಖುಷಿಯಲ್ಲಿ ನೀವೂ ಖುಷಿ ಕಾಣಿ. 

6. ಗೌರವಾದರದಿಂದ ಕಾಣಿ: ನೀವು ಹುಟ್ಟಿ, ಬೆಳೆದ ಮನೆಯನ್ನು ಬಿಟ್ಟು ಹೊಸ ಕುಟುಂಬವೊಂದಕ್ಕೆ ಬೆಳಕಾಗಲು ಬಂದಿದ್ದೀರಿ. ಇಲ್ಲಿ ಎಲ್ಲರನ್ನೂ ಪ್ರೀತಿ, ಗೌರವಾದರಗಳಿಂದ ಕಾಣುವುದು ನಿಮ್ಮ ಕರ್ತವ್ಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಹೊಂದಾಣಿಕೆ ಮಾಡಿಕೊಂಡು ಬಾಳಿರಿ. ಕ್ಷಮಿಸಲು ಮತ್ತು ಮರೆಯಲು ಕಲಿಯಿರಿ. ಇದು ನಿಮ್ಮ ಜೀವನ ಸುಂದರವಾಗಿರುವ ಸರಳ ಸೂತ್ರ.

– ಹಲೀಮತ್‌ ಸ ಅದಿಯ

Advertisement

Udayavani is now on Telegram. Click here to join our channel and stay updated with the latest news.

Next