1900ರ ಆರಂಭದ ದಶಕ… ಆತ ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಅಲಗೋಡು ಗ್ರಾಮದ ಶ್ಯಾನುಭೋಗ ವೆಂಕಟಸುಬ್ಬಯ್ಯ. ಭಜನೆ ನಡೆಯುವಲ್ಲಿ ಪಿಟೀಲು ನುಡಿಸುತ್ತಿದ್ದ. ಮಿಲ್ಟನ್ ಕವಿ ಹೇಳುವಂತೆ ಸಮುದ್ರದೊಳಗಿನ ರತ್ನನೀತ, ನಿರ್ಜನ ಅರಣ್ಯದ ಅನಾಸ್ವಾದಿತ ಪರಿಮಳದ ಕುಸುಮ. ಈತನಿಗೋ ಆವೇಶ ಬಂದು ಪಿಟೀಲಿನ ತಂತಿ ಮೇಲೆ ಬೆರಳು ಇಟ್ಟನೆಂದರೆ ಅಮೃತವನ್ನೇ ಕರೆಯುತ್ತಿತ್ತು. ಒಂದು ದಿನ ಭಜನೆ ಸಂದರ್ಭ ಈತ ಪಿಟೀಲು ಬಾರಿಸಿದ್ದನ್ನು ಅಮಲ್ದಾರ್ (ತಹಶೀಲ್ದಾರ್) ನವರತ್ನ ರಾಮ ರಾವ್ (1877-1960) ಕೇಳಿದರು.
ಈತನಿಗಿಂತ ಸಂಗೀತ ವಿದ್ಯೆ ಸಾಧನೆಯಲ್ಲಿ ಹತ್ತು ಪಟ್ಟು ಹೆಚ್ಚಾದವರನ್ನು ರಾಮ ರಾವ್ ಬಲ್ಲರು. ಪ್ರಸಿದ್ಧಿ ಎಂಬುದನ್ನು ಆತ ಬಯಸಲೂ ಇಲ್ಲ, ಈತನಿಗೆ ಅದು ಬರಲೂ ಇಲ್ಲ. ಈತ ಬಡಪಾಯಿ. ಈ ಅವಸ್ಥೆಗೆ ಮುಖ್ಯ ಕಾರಣ ಸಹಜವಾದ ಸಂಕುಚಿತ ಧೈರ್ಯದವನು. ಸಾಲದ್ದಕ್ಕೆ ಹೊಸಬರು- ಅದರಲ್ಲೂ ದೊಡ್ಡವರು ಇದ್ದರೆ ಸಭಾಕಂಪನ ಬೇರೆ. ಆದರೆ ಶ್ರೇಷ್ಠ ದರ್ಜೆಯ ಸಂಗೀತಗಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಪಿಟೀಲು ವಾದನ ಗೊತ್ತಿದ್ದ ರಾಮ ರಾವ್ ಅನಿಸಿಕೆ.
ಭಜನೆ ಮುಗಿದಾಗ ವೆಂಕಟಸುಬ್ಬಯ್ಯನನ್ನು “ನಿನ್ನ ಸಂಗೀತ ದಿವ್ಯವಾಗಿತ್ತು. ಎಲ್ಲಿಯಪ್ಪ ಪಾಠ?’ ಎಂದು ರಾಮರಾವ್ ಕೇಳಿದರು. ಅಲ್ಲಿ ಮೂಲೆಯಲ್ಲಿ ಕುಳಿತಿದ್ದ ಬಂಡೆ ತಲೆಯ, ಸ್ಥೂಲ ಕಾಯದ, ಕಪ್ಪು ಬಣ್ಣದ ಮುದುಕರನ್ನು ತೋರಿಸಿ – “ಆ ಮಹಾನುಭಾವರ ಅನುಗ್ರಹ’ ಎಂದು ಶಾಮಣ್ಣ ಎಂಬವರನ್ನು ತೋರಿಸಿದ. ಅವರಾದರೋ ನಿಶ್ಚಲವಾಗಿ, ತಮ್ಮ ಪ್ರಪಂಚದಲ್ಲಿ ತಾವಿದ್ದುಕೊಂಡು ಜನ್ಮಾಂತರಗಳ ಕನಸು ಕಾಣುತ್ತಿರುವಂತೆ ಕೂತಿದ್ದರು. ಮಂಗಳಾರತಿಯಾದ ಬಳಿಕ ಕೋಲೂರಿಕೊಂಡು ಹೊರಟು ಹೋದರು.
ಕೆಲವು ದಿನಗಳ ಅನಂತರ “ನಿಮ್ಮ ಗುರುಗಳ ಪಿಟೀಲು ವಾದನ ಕೇಳಬೇಕಲ್ಲ? ಒಂದು ದಿನ ಕರೆದುಕೊಂಡು ಬರುತ್ತಿಯಾ? ಎಂದು ರಾಮ ರಾವ್ ಕೇಳಿದರು. “ಅವರು ಯಾರ ಮನೆಗೂ ಹೋಗುವುದಿಲ್ಲ’ ಎಂದಾಗ ನಿರಾಶರಾಗದೆ ಕುತೂಹಲಭರಿತರಾದರು. ಮನುಷ್ಯ ಜಾತಿಯ ಮೇಲಿನ ದ್ವೇಷವೂ ಅಲ್ಲ, ಮಿತ್ರರ ಕೃತಘ್ನತೆಯಿಂದ ಬಿಗಡಾಯಿಸಿದ ಹೃದಯವೂ ಅಲ್ಲ. ಬಹಳ ಕ್ಷೇಶದಲ್ಲಿ ಬಿದ್ದು, ರಾಗ ದ್ವೇಷಗಳಿಂದ ಶುದ್ಧವಾಗಿ ಮೂಡಿದ ಧೀರ ಜೀವವಿದು ಎಂದು ಮನದಟ್ಟಾಯಿತು. ಮಕ್ಕಳೊಡನೆ ಮಗುವಿನ ಹಾಗೆ ನಗುತ್ತಿದ್ದರು. ನಿತ್ಯ ಐದು ಮನೆಗಳಿಗೆ ಭಿಕ್ಷಾಟನೆ ಮಾಡಿ ತಂದ ಅನ್ನವನ್ನು ದುರ್ಬಲರಾದವರಿಗೆ ಕೊಟ್ಟು ತಾವು ಉಪವಾಸ ಮಲಗಿದ್ದನ್ನೂ ಕಂಡವರಿದ್ದರು. ಅವರಿಗೆ ಶರೀರದಲ್ಲಿ ಹುಷಾರಿಲ್ಲದಾಗ ಹೋಗಿ “ನನ್ನಿಂದ ಏನಾದರೂ ಸಹಾಯ ಬೇಕೆ?’ ಎಂದು ತಹಶೀಲ್ದಾರ್ ಕೇಳಿದರು. ಶಾಮಣ್ಣ ನಕ್ಕು “ಸಾಕ್ಷಾತ್ ಪಾರ್ಥಸಾರಥಿಯೇ ನನ್ನ ತೇರನ್ನು ನಡೆಸುತ್ತಿದ್ದಾನೆ. ಏನೂ ಕಮ್ಮಿ ಇಲ್ಲ’ ಎಂದರು. ಇಕ್ಕಟ್ಟು ಜಗಲಿ, ಹರಕುಮಂದಲಿಗೆ, ಭಿಕ್ಷಾ ಪಾತ್ರೆ, ಬಿದಿರು ಕೋಲು ಇವುಗಳನ್ನು ಕಂಡ ರಾಮರಾಯರು ಈ ಮುದುಕ ಪಾರ್ಥನೋ? ಭೀಷ್ಮನೋ? ದೇವರು ಇವನಿಗೆ ಎಷ್ಟು ಸ್ಪಷ್ಟವಾದ “ಪುರುಷ’? -ಮನದೊಳಗೆ ಅಂದುಕೊಂಡರು.
1920ರ ಸುಮಾರಿಗೆ ದೇಶಾದ್ಯಂತ ಪ್ಲೇಗ್ ಹಾವಳಿ ಬಂತು. ಶಾಮಣ್ಣ ಮಾದಾಪುರಕ್ಕೆ ಹೋಗಿ ಅಲ್ಲಿನ ಕೆರೆ ಬಳಿ ಮಂಟಪದಲ್ಲಿದ್ದರು. ರಾಮ ರಾವ್ ಪತ್ನಿಗೆ (ಹೆಣ್ಣಿನ ಕರುಳು) ಕನಿಕರ ಬಂತು. ಎತ್ತಿನ ಗಾಡಿ ಮಾಡಿಕೊಂಡು ದಂಪತಿ ಐದಾರು ಮೈಲು ದೂರ ಹೋದರು. “ದೊಡ್ಡವರು (ತಹಶೀಲ್ದಾರ್) ಇಷ್ಟು ದೂರ ಬಂದದ್ದೇಕೆ?’ ಎಂದರು ಶಾಮಣ್ಣ. “ನಡೆಸಿಕೊಡುತ್ತೇವೆಂದರೆ ಹೇಳುತ್ತೇವೆ’ ಎಂದು ರಾಮರಾವ್ ಪತ್ನಿ ಹೇಳಿದರು. “ಇದೇನಮ್ಮಾ ಕುಚೇಲನ ಮನೆ ಭಿಕ್ಷೆ?’ ಎಂದರು ಶಾಮಣ್ಣ. “ನೋಡಿ ಅಜ್ಜ, ನೀವು ಕುಚೇಲರಲ್ಲ, ನಾವಂತೂ ಯಾದವ ರಾಜರಲ್ಲ. ನೀವು ಕುಚೇಲರ ಹಾಗೆ ಅನ್ನ, ಬಟ್ಟೆ ತಾಪತ್ರಯದ ಗೃಹಸ್ಥರಲ್ಲ. ಕುಚೇಲ ನಿಮ್ಮ ಹಾಗೆ ಸಂಗೀತಗಾರರೂ ಅಲ್ಲ. ನಮ್ಮ ಮಕ್ಕಳಿಗೆ ಸಂಗೀತ ಹೇಳಿಕೊಡಬೇಕು. ನನಗೂ ಸ್ವಲ್ಪ ವೀಣಾಭ್ಯಾಸವಿದೆ. ಮರೆತು ಹೋದದ್ದನ್ನು ಮತ್ತೆ ಗಟ್ಟಿಗೊಳಿಸಬೇಕೆಂದಿದ್ದೇನೆ. ಆಗುವುದಿಲ್ಲ ಎನ್ನಬಾರದು’ ಎಂದು ವಿನಂತಿಸಿದರು.
ಕಾಠಿನ್ಯದ ಶಾಮಣ್ಣ ಮೆದುವಾದರು. “ಪಾಠ, ಊಟದ ಹೊತ್ತಿನಲ್ಲಿ ನಿಮ್ಮ ಮನೆಯಲ್ಲಿದ್ದು ಉಳಿದ ಸಮಯ ಮೂಲಸ್ಥಾನೇಶ್ವರ ಗುಡಿಯಲ್ಲಿರುತ್ತೇನೆ’ ಎಂದು ಷರತ್ತು ಹಾಕಿದರು. ರಾಮ ರಾವ್ ಮಗಳು ವೆಂಕು ಬಾಯಿ ಮೇಲೆ ಬಹಳ ಪ್ರೀತಿ ತೋರಿದ್ದರು. ಬೆಂಗಳೂರಿಗೆ ರಾಮ ರಾವ್ ವರ್ಗವಾಗಿ ಹೋದ ಬಳಿಕವೂ ವೆಂಕು ಬಾಯಿಗೆ ಎರಡು ಆಟದ ಸಾಮಾನು ಕೊಟ್ಟು ಹೋಗಿದ್ದರು. ಶಾಮಣ್ಣನಿಗೆ ಉಡುವ ಬಟ್ಟೆ ಜತೆಯನ್ನು ರಾಮ ರಾವ್ ಕೊಟ್ಟಾಗ “ಇದು ಇನ್ನು ನನ್ನ ಅಧಿಕಾರದ್ದು’ ಎಂದು ಬಟ್ಟೆಯ ಮಾಲಕತ್ವವನ್ನು ತೋರಿಸಿ ಶಿಷ್ಯ ವೆಂಕಟಸುಬ್ಬಯ್ಯನಿಗೆ ಕೊಟ್ಟು ಕೃತಾರ್ಥನಾದರು. ಆರಂಭದ
ಹತ್ತಿಪ್ಪತ್ತು ವರ್ಷ ಸ್ವಂತ ಊರಲ್ಲಿ ಊಟಕ್ಕೆ ತತ್ವಾರ ಅನುಭವಿಸಿದ್ದ ಶಾಮಣ್ಣನಿಗೆ ಈ ಹತ್ತಿಪ್ಪತ್ತು ವರ್ಷಗಳಲ್ಲಿ ಭಾರೀ ಗೌರವಾದರ. ಆದರೇನು? ಆಗ ಬೇಕಿತ್ತು, ಈಗ ಬೇಡವಾಗಿತ್ತು, ಆಹಾರ ಮಾತ್ರವಲ್ಲ, ಲೋಕ ಕೂಡ. ಎಷ್ಟೋ ಜನರ ಜೀವನದಲ್ಲಿ ಕ್ಷಣಿಕವಾದರೂ ಇಂತಹ ಅನುಭವವಾಗದೆ ಇರುವುದಿಲ್ಲವಲ್ಲ?
ಮೈಸೂರು ರಾಜ್ಯದಲ್ಲಿ ಅಧಿಕಾರಿಗಳಾಗಿದ್ದ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮ ರಾಯರಿಂದ ಕೇಳಿದ ಶಾಮಣ್ಣನ ಕಥೆಯನ್ನು “ಸುಬ್ಬಣ್ಣ’ ಹೆಸರಿನಲ್ಲಿ ಜನಪ್ರಿಯ ಮಿನಿ ಕಾದಂಬರಿಯಾಗಿ ಬರೆದರು. ತಂದೆ, ತಾಯಿ, ಮಗ, ಸೊಸೆ ಹೀಗೆ ವಿವಿಧ ಪಾತ್ರಗಳ ಅನುಭವದಿಂದ ಮುಂದಾಗುವ ಪರಿಣಾಮ, ಒಬ್ಬನೇ ವ್ಯಕ್ತಿಯಲ್ಲಿ ಕಾಲಕಾಲಕ್ಕೆ ಆಗುವ ಮಾನಸಿಕ ಬದಲಾವಣೆ ಇತ್ಯಾದಿಗಳನ್ನು ಓದುವವರಿಗೆ ನಮ್ಮದೇ ಕಥೆಯೋ ಎಂಬಂತೆ ನವಿರಾಗಿ ಚಿತ್ರಿಸಿದರು. ಹಲವು ಭಾಷೆಗಳಿಗೆ ಅನುವಾದವಾಯಿತು. ವೆಂಕಟಸುಬ್ಬಯ್ಯ, ಶಾಮಣ್ಣನಂತಹವರು ನಾನಾ ಕ್ಷೇತ್ರಗಳಲ್ಲಿ ಕಂಡುಬರುತ್ತಾರೆ. ಸಕಾಲದಲ್ಲಿ ಇಂತಹ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರಕದಿರುವುದು, ದ್ವೇಷ, ಕ್ರೌರ್ಯ, ಅಧಿಕಾರಲಾಲಸೆ, ಅಸೂಯೆ ಇತ್ಯಾದಿ ಅರಿಷಡ್ವೆ„ರಿಗಳನ್ನು ಜನ್ಮಾಂತರಗಳಿಂದ ಹೊತ್ತುಕೊಂಡೇ ಭೂಮಿಗೆ ಇಳಿಯುತ್ತಾರೋ ಎಂಬಂತಹ ಮನುಷ್ಯರ ವರ್ತನೆಗಳು ಇದಕ್ಕೆ ಕಾರಣ. ಇದರಿಂದ ನಷ್ಟವಾಗುವುದು ನಾವೆಲ್ಲರೂ ಫಲಾನುಭವಿಗಳಾದ ಸಮಾಜಕ್ಕೆ ಎಂಬ ಎಚ್ಚರ ಅತೀ ಅಗತ್ಯ.
ಇಷ್ಟಕ್ಕೂ ಈ ಶಾಮಣ್ಣ ಹೀಗೇಕೆ ಆದರು? ಎಂಬ ಕುತೂಹಲದ ಕಥಾನಕ ಮತ್ತು “ಸುಬ್ಬಣ್ಣ’ ಹೇಗೆ ಜರ್ಮನಿಗೆ ಪ್ರಯಾಣ ಬೆಳೆಸಿದ ?(!) ಎನ್ನುವುದನ್ನು ಮುಂದಿನ “ಅಮೃತಬಳ್ಳಿ” ಅಂಕಣದಲ್ಲಿ ನೋಡೋಣ.
ಮಟಪಾಡಿ ಕುಮಾರಸ್ವಾಮಿ