Advertisement

ದತ್ತ ಪೀಠ ಮುಜರಾಯಿ ಇಲಾಖೆ ಆಸ್ತಿ

06:25 AM Mar 04, 2018 | Team Udayavani |

ಬೆಂಗಳೂರು:ಬಾಬಾ ಬುಡನ್‌ಗಿರಿ ದತ್ತ ಪೀಠ ಆಸ್ತಿ ವಿಚಾರದಲ್ಲಿ ನ್ಯಾ.ನಾಗಮೋಹನ್‌ದಾಸ್‌ ನೀಡಿದ್ದ ವರದಿಯನ್ನು ಸರ್ಕಾರ ಒಪ್ಪಿದ್ದು, ದತ್ತ ಪೀಠ ಆಸ್ತಿ ವಕ್ಫ್ಗೆ ಸೇರಿದ್ದಲ್ಲ, ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

ಸುಪ್ರೀಂಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನ್ಯಾ.ನಾಗಮೋಹನ್‌ದಾಸ್‌ ಸಮಿತಿ ವರದಿಗೆ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಯಿತು. ಏಪ್ರಿಲ್‌ 6 ರಂದು ಸುಪ್ರೀಂಕೋರ್ಟ್‌ ಮುಂದೆ ದತ್ತ ಪೀಠಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಗೆ ಬರಲಿದ್ದು ಆಗ ವರದಿಯನ್ನು ಸುಪ್ರೀಂಕೋರ್ಟ್‌ಗೂ ಸಲ್ಲಿಸಲಾಗುವುದು ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

1940ರಿಂದ ದತ್ತ ಪೀಠದಲ್ಲಿ ನಡೆಯುತ್ತಿರುವ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದುವರಿಸುವುದು ಹಾಗೂ ಪೂಜಾ ಕಾರ್ಯದಲ್ಲಿ ಮಾಡುವುದು ವರದಿಯಲ್ಲಿ ಸೇರಿದೆ. ವರದಿಯಲ್ಲಿನ ಎಲ್ಲ ಅಂಶಗಳನ್ನು ಸರ್ಕಾರ ಯಥಾಸ್ಥಿತಿಯಲ್ಲಿ ಒಪ್ಪಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ದತ್ತ ಪೀಠದ ಆಸ್ತಿ ಯಾವ ಇಲಾಖೆಗೆ ಸೇರಿದ್ದು ಎಂಬುದನ್ನು ಸರ್ಕಾರ ತಿಳಿಸಿರಲಿಲ್ಲ.ಹೀಗಾಗಿ, ದತ್ತ ಪೀಠದಲ್ಲಿ ಪೂಜೆ ನೆರವೇರಿಸುವ ಶಾಖಾದ್ರಿ ಸುಪ್ರೀಂಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಹೀಗಾಗಿ, ನ್ಯಾ.ನಾಗಮೋಹನ್‌ ಸಮಿತಿ ರಚಿಸಿತ್ತು ಎಂದು ತಿಳಿಸಿದರು.

ಕರಾವಳಿ ಭಾಗದ ಸಿಆರ್‌ಜಡ್‌ ವ್ಯಾಪ್ತಿ ಹೊರತಾದ ಪ್ರದೇಶಗಳಲ್ಲಿ  ಮರುಳು ಗಣಿಗಾರಿಕೆಗಾಗಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ  ಒಪ್ಪಿದ್ದು, ಆದರ ಪ್ರಕಾರ ಹತ್ತು ವರ್ಷದವರೆಗೆ ಸಾಂಪ್ರದಾಯಿಕ ಮರಳು ಗಣಿಗಾರಿಕೆ ನಡೆಸುವ ನಿಬಂಧನೆ ತೆಗೆದುಹಾಕಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ತಾಲೂಕು ವ್ಯಾಪ್ತಿವರೆಗೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

ಉಳಿದಂತೆ, ಸಾಗರಮಾಲಾ ಯೋಜನೆಯಡಿ 65 ಕೋಟಿ ರೂ. ವೆಚ್ಚದಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಹಾಗೂ 61 ಕೋಟಿ ರೂ. ವೆಚ್ಚದಲ್ಲಿ ಕಾರವಾರ ಬಂದರಿನಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣ, 29 ಕೋಟಿ ರೂ. ವೆಚ್ಚದಲ್ಲಿ ಹಳೇ ಮಂಗಳೂರು ಬಂದರು ಬೇಂಗ್ರೆ ಬದಿ ಹೂಳೆತ್ತುವ ಕಾಮಗಾರಿ, 215 ಕೋಟಿ ರೂ. ವೆಚ್ಚದಲ್ಲಿ ಕಾರವಾರಿ ಬಂದರಿನ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಬ್ರೇಕ್‌ ವಾಟರ್‌ ನಿರ್ಮಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು.  ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ 129 ಕೆರೆ ತುಂಬಿಸಲು 129 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ. ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಮಂಗಳೂರು ತಾಲೂಕು ಹರೆಕಳ ಗ್ರಾಮದಲ್ಲಿ 170 ಕೋಟಿ ರೂ. ವೆಚ್ಚದಲ್ಲಿ ಉಪ್ಪು ನೀರು ತಡೆಯಲು ಕಿಂಡಿ ಅಣೆಕಟ್ಟು ಕಟ್ಟಲು ಸಂಪುಟ ಒಪ್ಪಿಗೆ ದೊರೆತಿದೆ.

ಸರ್ಕಾರಿ ನೌಕರರಿಗೆ
ಶೇ.30 ರಷ್ಟು ವೇತನ ಪರಿಷ್ಕರಣೆಗೆ ಅಸ್ತು

*ರಾಜ್ಯ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗ ನೀಡಿದ್ದ ಶಿಫಾರಸಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆಯಾದರೂ ಸಂಪುಟದಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ.

ನಾಡಧ್ವಜ ವಿಚಾರ ಮುಂದೂಡಿಕೆ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ವಿನ್ಯಾಸ ಸಿದ್ಧಪಡಿಸಿ ಕಾನೂನಿನ ಸ್ವರೂಪ ನೀಡುವ ಕುರಿತು ವಿಷಯ ಮುಂದೂಡಲಾಗಿದೆ. ಸಂಪುಟದಲ್ಲಿ  ಈ ಕುರಿತು ಚರ್ಚೆಗೆ ಬರಲಿಲ್ಲ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು. ಮೂಲಗಳ ಪ್ರಕಾರ, ಚರ್ಚೆಯಾಯಿತಾದರೂ ಧ್ವಜದ ವಿನ್ಯಾಸದ ಒಮ್ಮತ ಬಾರದ ಕಾರಣ ಕನ್ನಡ ಸಂಘಟನೆಗಳ ಜತೆ ಮತ್ತೂಮ್ಮೆ ಚರ್ಚಿಸಿ ತೀರ್ಮಾನಿಸುವ ಸಲುವಾಗಿ ವಿಷಯ ಮುಂದೂಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next