Advertisement

ಹೊಸದಾಗಿ 171 ಇವಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ

12:21 AM Jun 13, 2024 | Team Udayavani |

ಮಂಗಳೂರು: ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಇವಿ ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಇಂಧನ ಇಲಾಖೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ಹೊಸದಾಗಿ 171 ಇವಿ ಚಾರ್ಜಿಂಗ್‌ ಕೇಂದ್ರಗಳು ಸ್ಥಾಪನೆಯಾಗುತ್ತಿವೆ.

Advertisement

ದ.ಕ. ಜಿಲ್ಲೆಯಲ್ಲಿ 17, ಉಡುಪಿಯಲ್ಲಿ 12, ಶಿವಮೊಗ್ಗದಲ್ಲಿ 17 ಹಾಗೂ ಚಿಕ್ಕಮಗಳೂರಿನಲ್ಲಿ 11 ಸೇರಿದಂತೆ ಪ್ರಸ್ತುತ 57 ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ 171 ಕೇಂದ್ರಗಳ ಸ್ಥಾಪನೆಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ.

ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,130 ಇವಿ ಚಾರ್ಜಿಂಗ್‌ ಕೇಂದ್ರಗಳಿದ್ದು, ಕೇಂದ್ರಗಳ ಸ್ಥಾಪನೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್‌ ನಿರ್ದೇಶನದಂತೆ ರಾಜ್ಯವನ್ನು ದೇಶದ ಇ.ವಿ. ಹಬ್‌ ಆಗಿಸಲು ಇಂಧನ ಸಚಿವಾಲಯ ಕಾರ್ಯಯೋಜನೆ ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯನ್ನು ನೋಡಲ್‌ ಎಜೆನ್ಸಿ ಆಗಿ ನೇಮಿಸಿ ಯೋಜನೆಯ ಅನುಷ್ಠಾನದ ಹೊಣೆ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸದಾಗಿ ಕೇಂದ್ರಗಳ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸಲಾಗಿದೆ.

ರಾಜ್ಯದ 31 ಜಿಲ್ಲೆಗಳಲ್ಲಿ ಸರಕಾರ- ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ)ಹೊಸದಾಗಿ 1,190 ಇವಿ ಚಾರ್ಜಿ0ಗ್‌ ಕೇಂದ್ರಗಳು, 2,380 ಇವಿ ಚಾರ್ಚರ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಇವುಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಇಂಧನ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 190 ಇವಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಪ್ರಸ್ತುತ ದ.ಕ.ದಲ್ಲಿ 79, ಉಡುಪಿಯಲ್ಲಿ 22, ಶಿವಮೊಗ್ಗದಲ್ಲಿ 50, ಚಿಕ್ಕಮಗಳೂರು ಜಿಲ್ಲೆಯಲ್ಲಿ 20 ಸೇರಿದಂತೆ ಒಟ್ಟು 171 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ. ಪದ್ಮಾವತಿ ತಿಳಿಸಿದ್ದಾರೆ.

Advertisement

ಹೆದ್ದಾರಿಗಳಲ್ಲಿ ಚಾರ್ಜಿಂಗ್‌
ಪಾಯಿಂಟ್‌ಗಳು ಹೆಚ್ಚಳ
ಇವಿ ವಾಹನಗಳ ಬಳಕೆದಾರರ ದೂರ ಪ್ರಯಾಣವನ್ನು ಸುಗಮವಾಗಿಸುವ ಮತ್ತು ತಡೆರಹಿತ ಪ್ರಯಾಣವನ್ನು ಕಲ್ಪಿಸಲು ಇಂಧನ ಇಲಾಖೆ ಕಾರ್ಯೋ ನ್ಮುಖವಾಗಿದೆ. ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಈಗಾಗಲೇ ಇರುವ ಇವಿ ಚಾರ್ಜಿಂಗ್‌ ಪಾಯಿಂಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next