Advertisement

ಕುಷ್ಟಗಿ: 63 ಸಾವಿರ ಸಸಿ ನೆಡಲು ಅರಣ್ಯ ಇಲಾಖೆ ಆಂದೋಲನ

05:43 PM Jun 06, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ಈ ಬಾರಿ ನಿರೀಕ್ಷೆಯಂತೆ ಮಳೆಯಾಗುತ್ತಿದ್ದಂತೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅರಣ್ಯೀಕರಣಕ್ಕಾಗಿ 63,030 ಸಸಿಗಳನ್ನು ನೆಡಲು ಮುಂದಾಗಿದೆ. ಡೀಮ್ಡ್ ಆರಣ್ಯ ಸೇರಿದಂತೆ ಕಾಯ್ದಿಟ್ಟ ಅರಣ್ಯ ಪ್ರದೇಶ, ರಸ್ತೆ ಬದಿ ನೆಡುತೋಪುಗಳಲ್ಲಿ ಆದ್ಯತೆಯಾಗಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಮಳೆಯಾದ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಲ್ಲೀನರಾಗಿದ್ದಾರೆ.

Advertisement

ಪರಿಸರ ಸಂರಕ್ಷಣೆ ಹಾಗೂ ಸಮರ್ಪಕ ಮಳೆಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕೆನ್ನುವ ಉದ್ದೇಶದೊಂದಿಗೆ ಈ ಬಾರಿ ಮೇ ತಿಂಗಳ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಿದೆ. ಜೂನ್‌ ತಿಂಗಳ ಆರಂಭವಾಗುತ್ತಿದ್ದಂತೆ ಮುಂಗಾರು ಹಂಗಾಮಿನಲ್ಲಿ ಸಸಿ ನೆಡುವ ಕಾರ್ಯಕ್ಕೆ ವೇಗ ಸಿಕ್ಕಿದೆ.

ಇಲ್ಲಿನ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಲಕೇರಿ ಸಸ್ಯ ಕ್ಷೇತ್ರದಲ್ಲಿ ಪೋಷಣೆ ಮಾಡಿದ ವಿವಿಧ ಜಾತಿಗಳ ಸಸಿಗಳನ್ನು ಯೋಜನೆಯಂತೆ ನೆಡಲು ಸಿದ್ದತೆಯಲ್ಲಿದ್ದು ರೈತರಿಗೂ ರಿಯಾಯಿತಿ ದರದಲ್ಲಿ ಮಾರಾಟಕ್ಕೂ ಸರ್ವ ಸಿದ್ಧತೆ ಮಾಡಿಕೊಂಡಿದೆ. ಕಲಕೇರಿ ಸಸ್ಯ ಪಾಲನ ಕ್ಷೇತ್ರದಲ್ಲಿ ಅರಳಿ, ಬಸರಿ, ಹೊಂಗೆ, ಬೇವು, ತಪಸಿ, ಕರಿಬೇವು, ನೇರಳೆ, ಚಾಲೆ, ಸೀತಾಫಲ, ಬಸವಪಾದ, ಅಶೋಕ, ನಿಂಬು, ರೇನ್‌ ಟ್ರೀ, ಹುಣಸೆ, ನಾಯಿ ನೇರಳೆ, ಶ್ರೀಗಂಧ, ಬದಾಮಿ, ಮಹಾಗನಿ, ಆಲ, ಗೋಣಿ, ಅತ್ತಿ, ಹೊಳೆಮತ್ತಿ, ಚಾರಿ, ನೋನಿ, ಬಿಲ್ವಪತ್ರೆ, ಆಕ್ಲೆಪಾ, ಪಾಮ್‌, ಪೇರಲ, ಪಾರಿಜಾತ, ದಾಸವಾಳ, ಸಿಹಿ ಹುಣಸೆ, ಗಂಟೆ ಹೂ ಲಭ್ಯ ಇದೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ತಾವರಗೇರ, ಹನುಮನಾಳ, ಹನುಮಸಾಗರ ಹಾಗೂ ಕುಷ್ಟಗಿ ಶಾಖಾ ವಲಯ ವ್ಯಾಪ್ತಿಯಲ್ಲಿ ಅರಣ್ಯೀಕರಣ ಹಾಗೂ ರಸ್ತೆ ಬದಿಗಳಲ್ಲಿ ಆದ್ಯತೆಯಾಗಿ ಗಿಡಗಳನ್ನು ನೆಡಲು ಆರಂಭಿಸಲಾಗಿದೆ. ಇಲ್ಲಿನ ಕಲಕೇರಿ ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿಯ 63,030 ಸಸಿಗಳನ್ನು ಬೆಳೆಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ 28,050, ರೈತರಿಗೆ ರಿಯಾಯಿತಿ ದರದಲ್ಲಿ 33 ಸಾವಿರ ಹಾಗೂ ರಸ್ತೆ ಬದಿ ನೆಡುತೋಪಿಗಾಗಿ 1,980 ಸಸಿಗಳನ್ನು ಬೆಳೆಸಲಾಗಿದೆ. ಮಳೆಯಾಗಿರುವ ಪ್ರದೇಶದಲ್ಲಿ ಗಿಡಗಳನ್ನು ಸಾಗಿಸಿ ನೆಡುವ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಡೀಮ್ಡ್ ಅರಣ್ಯ ಅರಣ್ಯ ಪ್ರದೇಶ ಹಾಗೂ ತಾವರಗೇರಾ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಸಸಿ ನಾಟಿ ಮಾಡಲಾಗಿದೆ.

ಕೆಲವೆಡೆ ಅರಣ್ಯ ಒತ್ತುವರಿ ಜಮೀ ನುಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಈಗಾಗಲೇ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ
750 ಗಿಡ, ವೆಂಕಟಾಪೂರ ಕ್ರಾಸ್‌ ರಸ್ತೆ ಬದಿ 500 ಹಾಗೂ ಹನುಮನಾಳ-ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 2,500 ಸಸಿ ನಾಟಿ ಮಾಡಲಾಗಿದೆ.

Advertisement

2024-25ನೇ ಸಾಲಿಗೆ 100 ಹೆಕ್ಟೇರ್‌ನಲ್ಲಿ ಸಸಿ ಬೆಳೆಸಲು ಗುರಿ ಹೊಂದಲಾಗಿದೆ. ಈ ಕುರಿತು ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿದೆ. ಗುಡ್ಡಗಾಡು ಪ್ರದೇಶ ಹಾಗೂ ಅರಣ್ಯ ಪ್ರದೇಶದ ಒತ್ತುವರಿ ಜಮೀನುಗಳಲ್ಲಿ ಗಿಡ ನೆಡಲಾಗುವುದು. ಸಾರ್ವಜನಿಕರು, ರೈತರು, ಸಂಘ ಸಂಸ್ಥೆ ಅವರು ಗಿಡ ನೆಡುವುದಷ್ಟೇ ಅಲ್ಲ ವರ್ಷದುದ್ದಕ್ಕೂ ಕಾಳಜಿ ವಹಿಸಬೇಕು ಎನ್ನುವುದು ಅರಣ್ಯ ಇಲಾಖೆಯ ಕಾಳಜಿ.
*ರಿಯಾಜ್‌ ಗನಿ,
ಪ್ರಭಾರ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಕುಷ್ಟಗಿ

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next