Advertisement

45 ಸಾವಿರ ಅತಿಥಿಗಳ ನೇಮಕಕ್ಕೆ ತೀರ್ಮಾನ; ಪ್ರಾಥಮಿಕ ಶಾಲೆಗಳಿಗೆ 35 ಸಾವಿರ

12:31 AM Jun 04, 2024 | Team Udayavani |

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ಸಾಲಿಗೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 35 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 10 ಸಾವಿರ ಸೇರಿ ಒಟ್ಟು 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯು ತೀರ್ಮಾನಿಸಿದೆ.

Advertisement

ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕ ಅಥವಾ ಶೈಕ್ಷಣಿಕ ವರ್ಷದ ಅಂತ್ಯ ಈ ಪೈಕಿ ಯಾವುದು ಮೊದಲೋ ಅಲ್ಲಿಯವರೆಗೆ 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರವು ಅನುಮತಿ ನೀಡಿದ್ದರೂ ಪ್ರಸ್ತುತ ಖಾಲಿ ಇರುವ 33,863 ಹುದ್ದೆಗಳಿಗೆ ಮೊದಲ ಹಂತದಲ್ಲಿ ಜಿಲ್ಲಾವಾರು ಮತ್ತು ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಿದೆ. ಜಿಲ್ಲಾವಾರು ಖಾಲಿ ಇರುವ ಶಿಕ್ಷಕ ಹುದ್ದೆಗಳು ಮತ್ತು ಅತಿಥಿ ಶಿಕ್ಷಕರ ನೇಮಕದ ವಿವರಗಳನ್ನು ನೀಡಲಾಗಿದೆ.ಪ್ರೌಢಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಸರಕಾರವು ಅನುಮತಿ ನೀಡಿದೆ.

ಸದ್ಯ ಪ್ರೌಢಶಾಲೆಗಳಲ್ಲಿ 8,954 ವಿಷಯ ಶಿಕ್ಷಕರ ಕೊರತೆ ಇದೆ. ನೇರ ನೇಮಕಾತಿ, ಭಡ್ತಿ, ವರ್ಗಾವಣೆ ಮೂಲಕ ಭರ್ತಿ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ 8,954 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಸರಕಾರ ತಿಳಿಸಿದೆ.

ಗೌರವ ಧನ ನಿಗದಿ
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10 ಸಾವಿರ ರೂ. ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 10,500 ರೂ. ಗೌರವಧನ ನಿಗದಿ ಮಾಡಲಾಗಿದೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಶಿಕ್ಷಕರ ನೇಮಕಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

Advertisement

ಮಂಜೂರಾದ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು, ಅತಿಥಿ ಶಿಕ್ಷಕರ ನೇಮಕವನ್ನು ಮುಖ್ಯ ಶಿಕ್ಷಕರ ಮೂಲಕವೇ ಮಾಡಬೇಕು, ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶದ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗಳಿಗೆ/ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕ ಪಬ್ಲಿಕ್‌ ಶಾಲೆಗಳು, ದ್ವಿಭಾಷಾ, ಆಂಗ್ಲ ಭಾಷಾ ಮಾಧ್ಯಮದ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ. 100 ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು. ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ ಹುದ್ದೆಗಳಿಗೆ ಖಾಯಂಗೊಂಡ ಶಿಕ್ಷಕರು ವರ್ಗಾವಣೆ ಅಥವಾ ನೇಮಕ ಹೊಂದಿದ್ದಲ್ಲಿ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಬಳಿಕ ತಾಲೂಕಿನಲ್ಲಿ ಅಗತ್ಯಕ್ಕೆ ಅನುಸಾರವಾಗಿ ಹಂಚಿಕೆ ಮಾಡಬೇಕು ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next