ಬೆಂಗಳೂರು: ‘ಮೇ 15 ರ ಸಂಜೆ ನಾನು ದೆಹಲಿಗೆ ತೆರಳಿ ಪ್ರಮಾಣವಚನ ದಿನಾಂಕವನ್ನು ನಿಗದಿ ಮಾಡಿಕೊಂಡು ಬರುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾನುವಾರ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ‘ಉತ್ತಮ ಮತದಾನವಾಗಿದ್ದು ,ಜನರು ನಮ್ಮ ಪರ ಒಲವು ವ್ಯಕ್ತ ಪಡಿಸಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಲ್ಲು ಉತ್ತಮ ಪೂರಕ ಪ್ರತಿಕ್ರಿಯೆಗಳು ಬಂದಿವೆ.ಕಾಂಗ್ರೆಸ್ ವಿರುದ್ಧ ಬಲವಾದ ಆಡಳಿತದ ವಿರೋಧಿ ಅಲೆ ಇದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ವನ್ನು ಜನರು ಕ್ಷಮಿಸುವುದಿಲ್ಲ’ ಎಂದರು.
‘ಬಿಜೆಪಿ 130 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ. ಕಾಂಗ್ರೆಸ್ 70 ದಾಟುವುದಿಲ್ಲ. ಜೆಡಿಎಸ್ 22 ರಿಂದ 25 ಸ್ಥಾನ ಗೆಲ್ಲಲಿದೆ’ ಎಂದರು.
‘ನಾನು ಇಂದು ಮತ್ತು ನಾಳೆ ವಿಶ್ರಾಂತಿ ಪಡೆದು ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸುತ್ತೇನೆ. ಇಂದು ರಾತ್ರಿ ನಮಗಾಗಿ ಕೆಲಸ ಮಾಡಿದ ಕಾರ್ಯಕರ್ತರಿಗಾಗಿ ಊಟಕ್ಕೆ ವ್ಯವಸ್ಥೆ ಮಾಡಿದ್ದೇವೆ’ ಎಂದರು.
‘ಫಲಿತಾಂಶದ ದಿನ ನಾನು ಸಂಜೆ 5 ಗಂಟೆಗೆ ದೆಹಲಿಗೆ ತೆರಳಿ ಅಮಿತ್ ವಾ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿ ಪ್ರಮಾಣವಚನದ ದಿನಾಂಕ ನಿಗದಿ ಮಡಿಕೊಂಡು ಬರುತ್ತೇನೆ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸಿದ್ದರಾಮಯ್ಯ ಕಾಲ ಮುಗಿದಿದೆ
ನಾನು ಸಿದ್ದರಾಮಯ್ಯ ಕುರಿತು ಟೀಕೆ ಮಾಡುವುದಿಲ್ಲ. ಅವರ ಕಾಲ ಮುಗಿದಿದೆ. ಮತದಾರರು ಜನ ವಿರೋಧಿ ನೀತಿಗೆ ತಕ್ಕ ಪಾಠ ಮಾಡಲಿದ್ದಾರೆ.ಸ್ವಂತ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಅವರ ಸೋಲು ನಿಶ್ಚಿತ ಎಂದರು.