ಅಳ್ನಾವರ: ನಿಸ್ವಾರ್ಥ ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಮಾತ್ರ ಸದ್ಗತಿ ದೊರಕಲು ಸಾಧ್ಯವೆಂದು ಧಾರವಾಡದ ಸ್ವಯಂ ಸಿದ್ದ ಮೈಲಾರಜ್ಜನವರು ಹೇಳಿದರು.
ಸಮೀಪದ ಹೊನ್ನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ದತ್ತ ಭಕ್ತರ ಸಮಾವೇಶ ಹಾಗೂ ಸ್ಥಳಕ್ಕೆ ಔದುಂಬರ ವನ ಎಂದು ನಾಮಕರಣ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಸತ್ಸಂಗದಿಂದ ಧಾರ್ಮಿಕತೆಯ ಭಾವನೆ ಮೂಡುವುದರ ಜೊತೆಗೆ ಜೀವನದಲ್ಲಿ ಮುಕ್ತಿ ಮಾರ್ಗ ಕಂಡುಕೊಳ್ಳಬಹುದಾಗಿದೆ. ಸಾಧು-ಸಂತರ ದರ್ಶನದಿಂದ ಪಾಪ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಕುಮಶಿ ಕ್ಷೇತ್ರೋಧ್ಯಾಪಕ ರಘುನಾಥಭಟ್ ಜೋಶಿ ಮಾತನಾಡಿ, ಶ್ರೀಪಾದ ವಲ್ಲಬರ ಚರಿತ್ರೆಯನ್ನು ಪಾರಾಯಣ ಮಾಡುವ ಮೂಲಕ ಮುಕ್ತಿ ಮಾರ್ಗ ಕಂಡುಕೊಳ್ಳಬೇಕು. ಕೇವಲ ಪ್ರಾಪಂಚಿಕ ಸುಖಕ್ಕಾಗಿ ಮಾತ್ರ ಶ್ರಮಿಸದೆ ಸದ್ಗುರುಗಳ ಕೃಪೆಗೆ ಪಾತ್ರರಾಗಿ ನಿಸ್ವಾರ್ಥದಿಂದ ಧಾರ್ಮಿಕ ಆಚರಣೆಯಲ್ಲಿ ತೊಡಗಬೇಕು ಎಂದರು.
ನಿವೃತ್ತ ಕನ್ನಡ ಉಪನ್ಯಾಸಕ ರಾ.ಶ್ರೀ. ಸುಂಕದ ಅಧ್ಯಕ್ಷತೆ ವಹಿಸಿದ್ದರು. ಹೇಮಲತಾ ಸುಂಕದ, ಮಿಲಿಂದ ಪಿಶೆ, ಎಂ.ಬಿ. ನಾತು, ಉದಯ ದೇಶಪಾಂಡೆ, ರವಿ ದೇಶಪಾಂಡೆ, ಎಸ್.ಪಿ. ಹೊನ್ನಂಗಿ, ಎಸ್.ಕೆ. ಅರವಳ್ಳಿ, ಡಿ.ಕೆ. ಕುಲಕರ್ಣಿ, ಸುರೇಶ ಕಣಧಾಳಿ ಇದ್ದರು.