ಊರ ಗದ್ದೆಗಳಲ್ಲಿ ಪೈರು ಕಟಾವಿಗೆ ತಯಾರಾಗಿರುತ್ತದೆ. ಗುಡಿ ಗೋಪುರ ಗಳಲ್ಲಿ ಗಂಟೆಯ ನಾದ ಕೇಳುತ್ತಿರುತ್ತದೆ. ಮದುವೆ, ಗೃಹ ಪ್ರವೇಶಗಳಂತಹ ಕೌಟುಂಬಿಕ ಕಾರ್ಯಕ್ರಮಗಳು , ಹಬ್ಬ ಹರಿದಿನಗಳು ಕಾಯುತ್ತಿರುತ್ತವೆ. ಕೆಲವು ಹೆತ್ತವರಂತೂ ಕುಟುಂಬ ಪ್ರವಾಸ ಹೋಗಲು ಈ ರಜೆಯನ್ನೇ ಕಾಯುತ್ತಿರುತ್ತಾರೆ. ಹೀಗೆ ರಜೆಯಲ್ಲಿ ಕೃಷಿ ಸಂಬಂಧಿತ , ಧಾರ್ಮಿಕ , ಸಾಮಾಜಿಕ , ಸಾಂಪ್ರದಾಯಿಕವೆನಿಸಿದ ಒಂದು ಪುಸ್ತಕವೇ ಪಠಣಕ್ಕೆ ತಯಾರಾಗಿರುತ್ತದೆ. ಈ ಪುಸ್ತಕ ಶಾಲೆಯ ಚೀಲದೊಳಗೆ
ಸೇರಿಸುವಂಥದ್ದಲ್ಲ.
ಮಕ್ಕಳಿಗೆ ಮಧ್ಯಾವಧಿ ರಜೆ, ಅಂದರೆ ದಸರಾ ರಜೆ ಪ್ರಾರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲೊಮ್ಮೆ ಕಡಿತದ ಗೊಂದಲಕ್ಕೊಳಗಾದ ಈ ರಜಾ ಕಾಲ, ನಂತರ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳ ಪರವಾಗಿ ವಹಿಸಿದ ವಕಾಲತ್ತಿನ ಪರಿಣಾಮ ವಾಗಿ ಪೂರ್ಣಾವಧಿಯಲ್ಲಿ ದೊರಕಿದೆ. ಮಳೆಗಾಲದ ಮಹಾಮಳೆಗೆ ಜಿಲ್ಲೆಯು ತತ್ತರಿಸಿದಾಗ ರಕ್ಷಣೆಯ ದೃಷ್ಟಿಯಿಂದ ನೀಡಿದ ರಜೆಗಳನ್ನು ದಸರಾ ರಜೆಯಿಂದ ಕಡಿತಗೊಳಿಸುವ ಇರಾದೆ ಜಿಲ್ಲಾ ಶಿಕ್ಷಣ ಇಲಾಖೆಯದ್ದಾಗಿತ್ತು. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ ದಸರಾ ರಜೆ ಪಡೆಯುವುದು ಮಕ್ಕಳ ಹಕ್ಕಲ್ಲವೇ ಎಂಬುದು?
ಕಲಿಕೆ ಮಕ್ಕಳ ಹಕ್ಕು. ಹಾಗೆಂದು ಆ ಕಲಿಕೆ ಶಾಲೆ ಎಂಬ ಫಲಕದಡಿಯಲ್ಲಿ ಶಿಕ್ಷಕ ಶಿಕ್ಷಕಿಯರ ಮಾರ್ಗದರ್ಶನದಲ್ಲೇ ನಡೆಯುತ್ತದೆ ಎಂದರೆ ಅದು ಅವೈಜ್ಞಾನಿಕ ತೀರ್ಮಾನವಾದೀತು. ಶಾಲೆಯಲ್ಲಿ ಕಲಿತಷ್ಟೇ ವಿಷಯಗಳನ್ನು ಮಕ್ಕಳು ಮನೆ ಮತ್ತು ಪರಿಸರದಿಂದಲೂ ಕಲಿಯುತ್ತಾರೆ. ಅದಕ್ಕೆ ಅನುಗುಣವಾಗುವಂತೆ ಶೈಕ್ಷಣಿಕವಾಗಿ ತೊಡಗಿಕೊಂಡ ಮಕ್ಕಳಿಗೆ ವರ್ಷದ ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ರಜೆಗಳನ್ನು ನೀಡಿ ಮನೆ ಮತ್ತು ಪರಿಸರದಿಂದ ಸಿಗುವ, ಶಾಲಾ ಪಠ್ಯ ವಸ್ತುವಿನಿಂದ ಹೊರತಾದ ಕಲಿಕೆ ಪಡೆಯಲು ಅವಕಾಶ ನೀಡಲಾಗಿದೆ. ಈ ರಜಾ ಕಾಲದಲ್ಲಿ ಕೃಷಿ, ಅಡುಗೆ ಮೊದಲಾದ ಗೃಹ ಚಟುವಟಿಕೆ ಗಳನ್ನು ಅಭ್ಯಸಿಸಲು ಹಾಗೂ ಸೈಕಲ್ ಸವಾರಿ ಯಂತಹ ಬದುಕಿಗೆ ಬೇಕಾದ ಇತರ ಪಾಠಗಳನ್ನು ಕಲಿಯಲು ಮಕ್ಕಳಿಗೆ ಅವಕಾಶ ಲಭಿಸುತ್ತದೆ.
ಊರ ಗದ್ದೆಗಳಲ್ಲಿ ಪೈರು ಕಟಾವಿಗೆ ತಯಾರಾಗಿರುತ್ತದೆ. ಗುಡಿ ಗೋಪುರಗಳಲ್ಲಿ ಗಂಟೆಯ ನಾದ ಕೇಳುತ್ತಿರುತ್ತದೆ. ಮದುವೆ, ಗೃಹ ಪ್ರವೇಶಗಳಂತಹ ಕೌಟುಂಬಿಕ ಕಾರ್ಯಕ್ರಮಗಳು , ಹಬ್ಬ ಹರಿದಿನಗಳು ಕಾಯುತ್ತಿರುತ್ತವೆ. ಕೆಲವು ಹೆತ್ತವರಂತೂ ಕುಟುಂಬ ಪ್ರವಾಸ ಹೋಗಲು ಈ ರಜೆಯನ್ನೇ ಕಾಯುತ್ತಿರುತ್ತಾರೆ. ಹೀಗೆ ರಜೆಯಲ್ಲಿ ಕೃಷಿ ಸಂಬಂಧಿತ , ಧಾರ್ಮಿಕ , ಸಾಮಾಜಿಕ , ಸಾಂಪ್ರದಾಯಿಕವೆನಿಸಿದ ಒಂದು ಪುಸ್ತಕವೇ ಪಠಣಕ್ಕೆ ತಯಾರಾಗಿರುತ್ತದೆ. ಈ ಪುಸ್ತಕ ಶಾಲೆಯ ಚೀಲದೊಳಗೆ ಸೇರಿಸುವಂಥದ್ದಲ್ಲ. ಆದುದರಿಂದ ಶಾಲೆಯೊಳಗೆ ಅದರ ಕಲಿಕೆಗೆ ಅವಕಾಶವಿರುವುದಿಲ್ಲ. ಮನೆ ಮಂದಿಯೊಂದಿಗೆ ಬೆರೆತು ಆಡಿ ನಲಿದು ಅನುಭವಿಸುವ ಈ ಜೀವನಾನುಭವಕ್ಕೆ ಸೂಕ್ತ ಸಮಯಾವಕಾಶದ ಅಗತ್ಯವಿದೆ. ಇದನ್ನು ಮನಗಂಡು ನಮ್ಮ ರಾಜ್ಯದ ಪಠ್ಯಕ್ರಮದಲ್ಲಿ ಸೂಕ್ತ ಹೊಂದಾಣಿಕೆ ಮಾಡಿಕೊಂಡು ಸರಾಸರಿ ಇಪ್ಪತ್ತು ದಿನಗಳ ಕಾಲ ಮಧ್ಯಾವಧಿ (ದಸರ) ರಜೆ ನೀಡುವುದು ರೂಢಿಯಾಗಿದೆ. ಮಕ್ಕಳ ಕಲಿಕಾ ಮನೋವಿಕಾಸದ ದೃಷ್ಟಿಯಿಂದ ಇದು ಅತ್ಯಂತ ಸಮಂಜಸವೂ ಆಗಿದೆ.
ಕಳೆದ ವರ್ಷದ ವರೆಗೂ ಮಧ್ಯಾವಧಿ ರಜೆ ದಸರಕ್ಕೆ ಸರಿಯಾಗಿ ಸಿಗುತ್ತಿತ್ತಾದರೂ ಕಳೆದ ವರ್ಷ ನಾಡ ಹಬ್ಬಕ್ಕೂ ರಜೆಗೂ ಪರಸ್ಪರ ತಾಳೆಯಾಗದೆ ಗೊಂದಲವೇರ್ಪಟ್ಟಿತು. ಆದರೆ ಈ ಬಗ್ಗೆ ರಾಜಕೀಯ ಒತ್ತಡ ಏರ್ಪಟ್ಟಾಗ ದಿನ ಬೆಳಗಾಗುವುವುದರೊಳಗೆ ರಜೆಯ ಆದೇಶ ಬದಲಾಗಿ ಕೆಲವು ಜಿಲ್ಲೆಗಳಲ್ಲಿ ಹಬ್ಬಕ್ಕೂ ರಜೆಗೂ ಹೊಂದಾಣಿಕೆ ಮಾಡಿಕೊಂಡದ್ದನ್ನು ಸ್ಮರಿಸಿಕೊಳ್ಳ ಬಹುದು. ಇದರಿಂದ ಮಕ್ಕಳ ರಜೆಯ ಮೇಲೂ ರಾಜಕೀಯದ ಸವಾರಿ ಪ್ರಾರಂಭವಾಗಿದೆಯೋ ಎಂಬ ಸಂಶಯ ಹುಟ್ಟಿಕೊಳ್ಳುತ್ತದೆ.
ಈ ವರ್ಷದ ರಜೆಯಲ್ಲಿ ಮೊದಲು ಇದ್ದ ಗೊಂದಲ ನಿವಾರಣೆಯಾಯಿತು ಎಂದು ಕೊಂಡಾಗ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಇನ್ನೊಂದು ಆದೇಶ ಹೊರಟಿದೆ. 9 ಮತ್ತು 10ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ರಜಾಕಾಲದ ಪ್ರತಿದಿನವೂ “ವಿಶ್ವಾಸ ಕಿರಣ’ ಎಂಬ ಯೋಜನೆಯಡಿಯಲ್ಲಿ ತರಗತಿಗೆ (ರವಿವಾರವೂ ಬಿಡದೆ) ಹಾಜರಾಗಬೇಕು. ಅರ್ಥಾತ್ ಈ ಮಕ್ಕಳಿಗೆ ರಜೆ ಸಂಭ್ರಮದ ಬದಲು ಸಜೆಯನ್ನು ತಂದಿದೆ.
ಒಂದೆಡೆಯಲ್ಲಿ ಕಲಿಕೆ ಸಂತಸದಾಯಕ ವಾಗಬೇಕು , ಹೊರೆಯಾಗಬಾರದು , ಅಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗಬಾರದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಶಾಲೆಯೊಳಗೆ ಮಕ್ಕಳ ಮನಸ್ಸು ನೋಯುವಂತಹ ಯಾವುದೇ ಘಟನೆ ನಡೆದರೆ ಅದಕ್ಕೆ ಶಿಕ್ಷಕರನ್ನು ಹೊಣೆ ಗಾರರನ್ನಾಗಿ ಮಾಡುವಂತಹ ಕಾನೂನುಗಳಿವೆ. ಮಕ್ಕಳು ತಪ್ಪು ಮಾಡಿದರೆ ದೈಹಿಕ ದಂಡನೆ , ಮಾನಸಿಕ ವೇದನೆ ನೀಡಬಾರದು ಎಂದು ಶೈಕ್ಷಣಿಕ ವಲಯದಲ್ಲಿ ಅಲ್ಲಲ್ಲಿ ಪುನರುಚ್ಚರಿಸ ಲಾಗುತ್ತದೆ.ಆದರೆ ಸರಕಾರ ಹೊರಡಿಸುವ ರಜೆ ಕಡಿತ , ಸ್ಪೆಷಲ್ ಕ್ಲಾಸ್‌ಗಳಂತಹ ಆದೇಶದಿಂದ ಮಕ್ಕಳ ಮನಸ್ಸಿಗೆ ವೇದನೆಯಾಗುವುದಿಲ್ಲವೇ? ಆಡಳಿತ ವರ್ಗದ ಇಂತಹ ಧೋರಣೆಗಳಿಂದ ಮಕ್ಕಳು ರಜಾಕಾಲದ ಸಂಭ್ರಮದಿಂದ ವಂಚಿತರಾಗುವುದು ಮಾತ್ರ ಸತ್ಯ.
ಭಾಸ್ಕರ ಕೆ.