ಮೈಸೂರು: ದಸರಾ ಚಲನಚಿತ್ರೋತ್ಸವ ಸೆ.21 ರಿಂದ 28 ರವರೆಗೆ ಐನಾಕ್ಸ್ ಮತ್ತು ಡಿಆರ್‌ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿದೆ. ದಸರಾ ಚಲನಚಿತ್ರ ಉಪಸಮಿತಿ ಅಧ್ಯಕ್ಷ ರಾಚಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ವಾರ್ತಾ ಭವನದಲ್ಲಿ ಚಲನಚಿತ್ರೋತ್ಸವ ಆಯೋಜನೆ ಕುರಿತು ಸಭೆ ನಡೆಸಲಾಯಿತು.
ಚಲನಚಿತ್ರೋತ್ಸವ ಸಮಿತಿ ಉಪ ವಿಶೇಷಾಧಿಕಾರಿಗಳಾದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಮಾತನಾಡಿ, ಚಿತ್ರೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲಾಗುತ್ತಿದ್ದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ.21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆಂದರು.
ಸಮಿತಿ ಕಾರ್ಯಾಧ್ಯಕ್ಷರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಚಿತ್ರೋತ್ಸವವನ್ನು ಆಯೋಜಿಸಲು ಆರ್ಟಿಸ್ಟಿಕ್ ನಿರ್ದೇಶಕರಾಗಿ ಮೈಸೂರು ಫಿಲಂ ಸೊಸೈಟಿ ಮನು ಅವರನ್ನು ನೇಮಕ ಮಾಡಿ ಅವರ ನೇತೃತ್ವದಲ್ಲಿ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಡಿಆರ್‌ಸಿ ಚಿತ್ರಮಂದಿರದಲ್ಲಿ ಪ್ರತಿ ದಿನ 4 ಕನ್ನಡ ಚಲನಚಿತ್ರಗಳು ಪ್ರದರ್ಶನವಾಗಲಿದೆ. 30ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮೈಸೂರಿಗೆ ಅತಿಥಿಗಳಾಗಿ ಆಗಮಿಸಿರುವ ಕಾವಾಡಿಗರು, ಮಾವುತರ ಕುಟುಂಬದವರಿಗೆ ಉಚಿತ ಪ್ರದರ್ಶನ ಇರಲಿದೆ. ಬಾಲಕರ-ಬಾಲಕಿಯರ ಬಾಲಮಂದಿರದಲ್ಲಿರುವ ಮಕ್ಕಳು, ವಿಕಲಚೇತನರ ನಿಲಯಗಳಲ್ಲಿರುವ ಮಕ್ಕಳಿಗೆ ಡಿಆರ್‌ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ರಾಷ್ಟ್ರೀಯ ಮತ್ತು ವಿದೇಶದ ಪ್ರಖ್ಯಾತ ಚಿತ್ರಗಳು ಇರಲಿದೆ. 300 ರೂ.ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಉದ್ಘಾಟನೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರ ಕಲಾವಿದರಾದ ಆದಿತ್ಯ, ಧ್ರುವಸಜಾ, ರಚಿತಾ ರಾಮ್, ನಂದಕಿಶೋರ್, ಸುಂದರ್‌ರಾಜ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತು ಶೋಭರಾಜ್, ಒಂದು ಮೊಟ್ಟೆ ಕಥೆ, ರಣರಣಕ ಚಿತ್ರ ತಂಡ ಇರಲಿದ್ದಾರೆ. ನಂತರ ಒಂದು ಮೊಟ್ಟೆಯ ಕಥೆ ಚಿತ್ರ ಪ್ರದರ್ಶನ ನಡೆಯಲಿದೆ.
ಸೆ.22 ರಂದು ಮನಮಂಥನ ಚಿತ್ರ ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರು ಐನಾಕ್ಸ್ ಚಿತ್ರಮಂದಿರದಲ್ಲಿ ಸಂವಾದ ನಡೆಸಲಿದ್ದಾರೆ. ಸೆ.27ರಂದು ಮಾರಿಕೊಂಡವರು ಚಿತ್ರ ನಿರ್ದೇಶಕ ಶಿವರುದ್ರಯ್ಯ ಸಂವಾದ ನಡೆಸಲಿದ್ದಾರೆ. ವಿಶೇಷವಾಗಿ ಮನ:ಪರಿವರ್ತನೆ ಸಂದೇಶ ಇರುವ ಚಿತ್ರ ರಾಮಾ ರಾಮಾರೇ ಪ್ರದರ್ಶನವನ್ನು ಕೇಂದ್ರ ಕಾರಾಗೃಹದಲ್ಲಿ ಸೆ.24 ರಂದು ಏರ್ಪಡಿಸಲಾಗಿದೆ ಎಂದರು. ಸಭೆಯಲ್ಲಿ ಉಪ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ರವಿಚಂದ್ರು, ಸದಸ್ಯರಾದ ಕೆ.ಎಸ್.ಶಿವರಾಮು ಮತ್ತಿತರರಿದ್ದರು.