Advertisement

ಸಾರಿಗೆ ನೌಕರರಿಗಿಲ್ಲ ದಸರಾ ಸಂಭ್ರಮ

11:32 AM Oct 14, 2021 | Team Udayavani |

ಬೀದರ: ಕೊರೊನಾದಿಂದ ಆದಾಯ ಕುಸಿತವಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಚೇತರಿಕೆ ಕಾಣುತ್ತಿದ್ದರೂ ಸಾರಿಗೆ ನೌಕರರ “ವೇತನ ಸಮಸ್ಯೆ’ಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಕಳೆದೆರಡು ತಿಂಗಳ ಅರ್ಧದಷ್ಟು ಮಾತ್ರ ಸಂಬಳ ಪಾವತಿಯಾಗಿದ್ದು, ಈ ಬಾರಿ ವಿಜಯದಶಮಿ ಹಬ್ಬವನ್ನೂ ನೌಕರರು ಬರಿಗೈನಲ್ಲೇ ಆಚರಿಸಬೇಕಾದ ಕಷ್ಟದ ಸ್ಥಿತಿ ಎದುರಾಗಿದೆ.

Advertisement

ಕೋವಿಡ್‌ ಸೋಂಕು ಅಪ್ಪಳಿಸಿದಾಗಿನಿಂದ ಸಾರಿಗೆ ಸಂಸ್ಥೆ ನೌಕರರ ವೇತನ ಸಂಕಟ ಬೆಂಬಿಡದಂತೆ ಕಾಡುತ್ತಲೇ ಇದೆ. ಲಾಕ್‌ ಡೌನ್‌ ಮತ್ತು ನಂತರ ಪ್ರಯಾಣಿಕರ ಕೊರತೆಯಿಂದ ರಸ್ತೆ ಸಾರಿಗೆ ನಿಗಮಗಳು ಆದಾಯ ಇಲ್ಲದೇ ಆರ್ಥಿಕ ಕುಸಿತಕ್ಕೆ ಒಳಗಾಗುತ್ತ ಬಂದಿವೆ. ತಿಂಗಳ ವೇತನಕ್ಕಾಗಿ ಸರ್ಕಾರದತ್ತ ಕೈಚಾಚಬೇಕಾದ ಸ್ಥಿತಿ ಮಾತ್ರ ತಪ್ಪುತ್ತಿಲ್ಲ.

ಕೊರೊನಾ ಎರಡನೇ ಅಲೆ ಬಹುತೇಕ ನಿಯಂತ್ರಣದಲ್ಲಿದ್ದು, ಸೋಂಕಿತರ ಪ್ರಮಾಣವೂ ಕುಸಿದಿದೆ. ಹಾಗಾಗಿ ಹಂತ-ಹಂತವಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರಿಗೆ ನಿಗಮಗಳು ಸಹ ಹಳಿಗೆ ಮರಳುತ್ತಿವೆ. ಆದರೂ ನೌಕರರಿಗೆ ಸಮಯಕ್ಕೆ ಸಂಬಳ ಮಾತ್ರ ಕೈಸೇರುತ್ತಿಲ್ಲ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ಬೀದರ ವಿಭಾಗದಲ್ಲಿ ಬಸ್‌ ಚಾಲಕ, ನಿರ್ವಾಹಕರು, ಮೆಕ್ಯಾನಿಕ್‌ ಮತ್ತು ಕಚೇರಿ ಸಿಬ್ಬಂದಿ ಸೇರಿ ಒಟ್ಟು 2520 ನೌಕರರಿದ್ದಾರೆ. ಆಗಸ್ಟ್‌ ತಿಂಗಳ ವೇತನವನ್ನು ಸೆ.27ಕ್ಕೆ ಮತ್ತು ಸೆಪ್ಟೆಂಬರ್‌ ತಿಂಗಳ ಸಂಬಳವನ್ನು ಅ.9ಕ್ಕೆ ಕೇವಲ ಅರ್ಧದಷ್ಟು ಮಾತ್ರ ಪಾವತಿಸಲಾಗಿದೆ. ಕಡಿಮೆ ವೇತನದಲ್ಲಿ ದುಡಿಯುವ ಸಾರಿಗೆ ಸಿಬ್ಬಂದಿಗಳಿಗೆ ಸಾಲ ಮತ್ತು ಇತರ ಸೌಲಭ್ಯಗಳ ಹಣ ಕಡಿತವಾಗಿ ಕೈಸೇರುವುದೇ ಕಮ್ಮಿ. ಈಗ ಅರ್ಧದಷ್ಟು ಮಾತ್ರ ವೇತನ ನೀಡಿ ಕೈಚೆಲ್ಲಿ ಕುಳಿತಿರುವುದು ನೌಕರರು ಕುಟುಂಬ ನಿರ್ವಹಣೆಗೆ ಪರದಾಡುವ ಸ್ಥಿತಿ ಬಂದಿದೆ.

ಇದನ್ನೂ ಓದಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,987 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ

ಇನ್ನೂ ಎರಡು ದಿನದಲ್ಲಿ ದಸರಾ, ನಂತರ ದೀಪಾವಳಿ ಹಬ್ಬಗಳಿದ್ದು, ಅದರ ಸಂಭ್ರಮ ಮಾತ್ರ ಇವರಿಗೆ ಇಲ್ಲದಂತಾಗಿದೆ. ಬಸ್‌ ಕಾರ್ಯಾಚರಣೆಯಿಂದ ಸದ್ಯ ಆದಾಯ ಸಂಗ್ರಹವಾಗುತ್ತಿದ್ದರೂ ಅದು ಕೇವಲ ಡೀಸೆಲ್‌ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಭರಿಸಲು ಅಷ್ಟೇ ಸಾಕಾಗುತ್ತಿದೆ. ಸಾರಿಗೆ ನಿಗಮಗಳಿಗೆ ಸರ್ಕಾರ ಬಸ್‌ ಪಾಸ್‌ನ ಅನುದಾನ ಬಿಡುಗಡೆ ಮಾಡಿದರೆ ನೌಕರರ ವೇತನ ಸಮಸ್ಯೆ ಎದುರಾಗುವುದಿಲ್ಲ ಮತ್ತು ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಕೈಚಾಚುವುದೂ ಬೇಕಾಗುವುದಿಲ್ಲ ಎಂಬುದು ಸಾರಿಗೆ ಅಧಿಕಾರಿಯೊಬ್ಬರ ಅಭಿಪ್ರಾಯ. ಆದರೆ, ಈ ವಿಷಯದಲ್ಲಿ ಸರ್ಕಾರ ಮಾತ್ರ ಮೌನ ವಹಿಸಿದೆ.

Advertisement

ನೌಕರರ ವೇತನ ಕುರಿತಾಗಿನ ಪ್ರಸ್ತಾವನೆಯಂತೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಿ ಆರ್ಥಿಕ ಸಂಕಷ್ಟದಲ್ಲಿರುವ ನೌಕರರು ಮತ್ತು ಅವರ ಕುಟುಂಬಗಳಿಗೆ ನೆರವಾಗಬೇಕಿದೆ. ಇನ್ನೂ ನಿಗಮಕ್ಕೆ ಸೇರಬೇಕಾದ ಬಸ್‌ ಪಾಸ್‌ನ ಅನುದಾನವೂ ಸಮಯಕ್ಕೆ ಪಾವತಿಸಿ ಬರುವ ದಿನಗಳಲ್ಲಿ ವೇತನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ.

ಸಾರಿಗೆ ನೌಕರರಾದ ನಾವು ಹಗಲು- ರಾತ್ರಿ ಎನ್ನದೇ ಬಸ್‌ ಕಾರ್ಯಾಚರಣೆ ಮಾಡುತ್ತೇವೆ. ಆದರೆ, ಸಮಯಕ್ಕೆ ವೇತನ ಮಾತ್ರ ಸಿಗುತ್ತಿಲ್ಲ. ಈ ಹಿಂದೆ ಪ್ರತಿ ತಿಂಗಳು 10ರೊಳಗೆ ವೇತನ ಖಾತೆಗೆ ಜಮಾ ಆಗುತ್ತಿತ್ತು. ಕಳೆದೆರಡು ತಿಂಗಳಿಂದ ಕೇವಲ ಅರ್ಧದಷ್ಟು ಸಂಬಳ ಕೊಟ್ಟಿದ್ದು, ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಇದೀಗ ದಸರಾ, ದೀಪಾವಳಿ ಹಬ್ಬ ಆಚರಣೆಗೆ ಬಿಡಿಗಾಸು ಇಲ್ಲದಾಗಿದೆ. -ಹೆಸರು ಹೇಳಲಿಚ್ಛಿಸದ ಸಾರಿಗೆ ನೌಕರ

ರಸ್ತೆ ಸಾರಿಗೆ ನೌಕರ ವೇತನ ಬಾಕಿ ಇರುವುದು ನಿಜ. ಸದ್ಯ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಅರ್ಧದಷ್ಟು ವೇತನ ಪಾವತಿ ಮಾಡಲಾಗಿದೆ. ಇನ್ನುಳಿದ ಸಂಬಳ ಕುರಿತಂತೆ ಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರವೇ ನೌಕರರ ವೇತನ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸ ಇದೆ.  -ನಾರಾಯಣ ಗೌಡಗೇರಿ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಕೆಆರ್‌ಟಿಸಿ, ಬೀದರ

– ­ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next