Advertisement

ದಸರಾ ಗೊಂಬೆ ಬೇಡಿಕೆ ಶೇ.30 ಅಧಿಕ

11:49 AM Oct 07, 2021 | Team Udayavani |

ಬೆಂಗಳೂರು: ಕಳೆದ ವರ್ಷ ನವರಾತ್ರಿಗೆ ಹೋಲಿಸಿದರೆ ಈ ಬಾರಿ ಗೊಂಬೆ ಖರೀದಿ ಆಸಕ್ತಿ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಶೇ.30 ಹೆಚ್ಚಳವಾಗಿದೆ. ನವರಾತ್ರಿ ಹಾಗೂ ನಾಡಹಬ್ಬ ದಸರಾಗೆ ನಿಜವಾದ ಮೆರುಗು ತರುವುದು ಗೊಂಬೆ ಕೂರಿಸುವ ಪದ್ಧತಿ.

Advertisement

ನಗರದ ಮಲ್ಲೇಶ್ವರ, ರಾಜಾಜಿನಗರ, ಬಸವನಗುಡಿ, ಜಯನಗರ, ವಿಜಯನಗರ, ವಿವಿ ಪುರಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೊಂಬೆ ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗಿದೆ. ಕಳೆದ ಬಾರಿ ಕೊರೊನಾ ಭಯ ಮತ್ತು ವಿವಿಧ ನಿಯಮಗಳಿಂದ ಗೊಂಬೆಗಳ ಖರೀದಿಗೆ ಜನರ ಆಸಕ್ತಿ ಕಡಿಮೆಯಾಗಿತ್ತು. ಈ ಹಿನ್ನೆಲೆ 2019 ಅದಕ್ಕಿಂತ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಗೊಂಬೆ ವ್ಯಾಪಾರ ಶೇ.60 ರಷ್ಟು ಕುಸಿದಿತ್ತು.

ಇದನ್ನೂ ಓದಿ;- ಡಬಲ್ ಎಂಜಿನ್ ಸರಕಾರ ಏನು ಮಾಡುತ್ತಿದೆ?: ಡಿ.ಕೆ.ಶಿವಕುಮಾರ್

ಈ ಬಾರಿ ಸೋಂಕು ಹತೋಟಿಯಲ್ಲಿದ್ದು, ಮೂರನೇ ಅಲೆಯ ಆತಂಕ ದೂರಾಗಿದೆ. ಹೀಗಾಗಿ, ಮತ್ತೆ ಗೊಂಬೆ ಕೂರಿಸಲು ರಾಜಧಾನಿ ಜನರು ಮುಂದಾಗಿದ್ದಾರೆ. ಕಳೆದ ವರ್ಷಕ್ಕೆಹೋಲಿಸಿದರೆ ಶೇ.30 ವ್ಯಾಪಾರ ಹೆಚ್ಚಿದೆ ಎನ್ನುತ್ತಾರೆ ನಗರದ ಗೊಂಬೆ ಮಳಿಗೆಗಳ ವ್ಯಾಪಾರಿಗಳು. ದೇವರ ಮೂರ್ತಿಗಳು, ಜೀವನ ಮಧುರ, ಮಹತ್ವದ ಕ್ಷಣಗಳಾದ ಮದುವೆ, ನಿಶ್ಚಿತಾರ್ಥ, ನಾಮಕರಣ, ಹಬ್ಬಗಳು, ಜಾತ್ರೆಯನ್ನು ಬಿಂಬಿಸುವ ಗೊಂಬೆಗಳು, ಸೇವಾ ವಲಯಗಳಾದ ಪೊಲೀಸ್‌, ಸೇನೆ, ವೈದ್ಯರ ಗೊಂಬೆಗಳು, ನಾಡಿನ ಪ್ರಮುಖ ಪ್ರವಾಸಿತಾಣಗಳು, ಮೂರ್ತಿಗಳು, ಶಿಲ್ಪಕಲೆಗಳನ್ನು ಬಿಂಬಿಸುವ ಗೊಂಬೆಗಳಿಗೆ ಬೇಡಿಕೆ ಹೆಚ್ಚಿದೆ.

ನವರಾತ್ರಿ ಆಚರಣೆಗೂ 20 ದಿನ ಮೊದಲೇ ಗೊಂಬೆಗಳ ಖರೀದಿ ಆರಂಭವಾಗುತ್ತದೆ. ಹಬ್ಬಕ್ಕೂ ಮುನ್ನ ಗೊಂಬೆಗಳಿಗಾಗಿ ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ. ಕನಿಷ್ಠ 200 ರೂ.ನಿಂದ ಗರಿಷ್ಠ 30 ಸಾವಿರ ರೂ.ವರೆಗೂ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರದ ಹಳೇ ಬಡಾವಣೆಗಳಲ್ಲಿ ಇಂದಿಗೂ ಅತ್ಯಂತ ಸಂಪ್ರದಾಯವಾಗಿ ಹಬ್ಬ ಆಚರಿಸುತ್ತಾರೆ.

Advertisement

ಮಹಿಳೆಯರಿಗೆ 9 ದಿನ 5 ದಿನಗಳ ಮಟ್ಟಿಗೆ ಗೊಂಬೆ ಕೂರಿಸಿ ಹಬ್ಬ ಆಚರಿಸುವ ಆಸಕ್ತಿ ಹೆಚ್ಚಿದೆ. ತಲೆಮಾರುಗಳಿಂದ ಆಚರಿಸುತ್ತಾ ಬಂದಿರುವ ಪದ್ಧತಿಗಳನ್ನು ಯಾರೂ ನಿಲ್ಲಿಸುವುದಿಲ್ಲ. ಕೊರೊನಾದಿಂದಸರಳವಾಗಿ ಹಬ್ಬ ಆಚರಿಸಬಹುದು. ಮನೆಗಳಲ್ಲಿ ಈ ಬಾರಿ ಕಡಿಮೆ ಗೊಂಬೆಗಳನ್ನು ಕೂರಿಸುವ ನಿರ್ಧರಿಸಿದ್ದಾರೆ.  ಕೋಲ್ಕತ್ತ, ಆಂಧ್ರಪ್ರದೇಶ, ತಮಿಳುನಾಡಿನಿಂದ ಗೊಂಬೆಗಳನ್ನು ತರಿಸಿದ್ದೇವೆ ಎಂದು ಮಲ್ಲೇಶ್ವರ ಮಾರುಕಟ್ಟೆ ಗೊಂಬೆ ವ್ಯಾಪಾರಿ ಅಶೋಕ್‌ ತಿಳಿಸಿದರು.

ಗೊಂಬೆ ಹೋಂ ಡೆಲಿವರಿ

ಕೊರೊನಾ ಸೋಂಕು ಮುಂಜಾಗ್ರತಾ ಕ್ರಮದಿಂದ ತನ್ನ ಹಳೆಯ ಗ್ರಾಹಕರಿಗೆ ಮನೆಗಳಿಗೆ ದುರ್ಗಾ ಮೂರ್ತಿ, ಆಕರ್ಷಕ ಗೊಂಬೆಗಳನ್ನು ಹೋಂ ಡೆಲಿವರಿ ನೀಡ ಲಾಗುತ್ತದೆ. ವಾಟ್ಸ್‌ಆಪ್‌ ಮುಖಾಂತರ ಗೊಂಬೆಗಳ ಚಿತ್ರಗಳನ್ನು ರವಾನಿಸಿ, ಅವರು ಆಯ್ಕೆ ಮಾಡುವ ಗೊಂಬೆಗಳನ್ನು ತಲುಪಿಸುತ್ತಿದ್ದೇವೆ. ಆಸಕ್ತರು ಗೊಂಬೆಗಳಿಗಾಗಿ 9964650149 ಅನ್ನು ಸಂಪರ್ಕಿ ಸಬಹುದು ಎಂದು ಬಸವನಗುಡಿಯ ಎನ್‌.ಎಚ್‌.ದಸರಾ ಗೊಂಬೆಗಳು ಮಳಿಗೆಯ ಸಿಬ್ಬಂದಿ ದೀಪಿಕಾ ತಿಳಿಸಿದರು.

“ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗೊಂಬೆ ವ್ಯಾಪಾರ ಉತ್ತಮವಾಗಿದೆ. ಹೆಚ್ಚು ಮಂದಿ ಆಗಮಿಸಿ ಗೊಂಬೆ ಖರೀದಿ ಮಾಡುವ ನಿರೀಕ್ಷೆಯಲ್ಲಿ ಇದ್ದೇವೆ.”

ದೀಪಿಕಾ, ಗೊಂಬೆ ವ್ಯಾಪಾರಿ,

ಬಸವನಗುಡಿ

Advertisement

Udayavani is now on Telegram. Click here to join our channel and stay updated with the latest news.

Next