Advertisement

ದಸರಾ ಆಹಾರ ಮೇಳ: ಆದಿವಾಸಿ ಅಡುಗೆ ಮನೆಗೆ ಚಾಲನೆ

11:56 AM Sep 09, 2017 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜನಪ್ರಿಯ ಆಹಾರ ಮೇಳದಲ್ಲಿ ಮೂಲ ಬುಡಕಟ್ಟು ಜನರ ವಿಶೇಷ ಆಹಾರಗಳು ಮತ್ತು ಬುಡಕಟ್ಟು ಸಂಸ್ಕೃತಿ ಅನಾವರಣ ಮಾಡಲು ಆಗಮಿಸಿದ ಆದಿವಾಸಿಗಳನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು.

Advertisement

ದಸರಾ ಆಹಾರ ಮೇಳ ನಡೆಯುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ದೊಡ್ಡಾಲದ ಮರದ ಕೆಳಗೆ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಲಕ್ಷಿನಾರಾಯಣ್‌, ಮೈಸೂರು, ಕೊಡಗು ಹಾಗೂ ಚಾಮರಾಜ ನಗರ ಜಿಲ್ಲೆಯ ವಿವಿಧ ಹಾಡಿಗಳಿಂದ ಬಂದ ಆದಿವಾಸಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.

2014ರಿಂದ ಆರಂಭಿಸಲಾಗಿರುವ ಆದಿವಾಸಿಗಳ ಅಡುಗೆ ಮನೆಯಲ್ಲಿ ಬುಡಕಟ್ಟು ಜನರ ಬೊಂಬು ಬಿರಿಯಾನಿ ಸೇರಿದಂತೆ ಸಾಂಪ್ರದಾಯಿಕ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಈ ವರ್ಷ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಎರಡೂ ಆಲದ ಮರಗಳ ಕೆಳಗೆ ಆದಿವಾಸಿ ಅಡುಗೆ ಮನೆ ನಿರ್ಮಿಸಲಾಗುತ್ತಿದೆ.

ಜತೆಗೆ ಅವರ ಕಲೆಯನ್ನೂ ಅನಾವರಣಗೊಳಿಸುವ ಕೆಲಸ ಮಾಡಲಾಗುತ್ತಿದೆ. ಈ ವೇಳೆ ತೆಂಗಿನ ಗರಿಗಳಿಂದ ಜೋಪಡಿ ಕಟ್ಟುವ ಮತ್ತು ಅಡುಗೆ ಒಲೆ ನಿರ್ಮಿಸುವ ಕಾರ್ಯಕ್ಕೆ ಆದಿವಾಸಿಗಳು ಮುಂದಾದರು. ಬೊಂಬು ಬಿರಿಯಾನಿ ತಯಾರಿಸುವಲ್ಲಿ ಪಿರಿಯಾಪಟ್ಟಣ ತಾಲೂಕು ಮರಳಕಟ್ಟೆ ಹಾಡಿಯ ಮಧುಕುಮಾರ ಮತ್ತು ಹುಣಸೂರು ತಾಲೂಕು ನೆಲ್ಲೂರು ಪಾಲದ ಕುಮಾರ ವಿಶೇಷ ಪರಿಣಿತಿ ಪಡೆದಿದ್ದು, ಅವರೊಂದಿಗೆ ಸುಮಾರು 30 ಜನ ಅಡುಗೆ ಮನೆಯಲ್ಲಿ ಕೆಲಸ ಮಾಡಲಿದ್ದಾರೆ.

ಒಂದೂವರೆ ಮೀಟರ್‌ ಉದ್ದದ ದಪ್ಪದಾದ ಬಿದಿರು ಬೊಂಬುವಿನಲ್ಲಿ 15 ಬಿರಿಯಾನಿ ಮಾಡಬಹುದು. ದಿನಕ್ಕೆ 150 ರಿಂದ 200 ಬೊಂಬುವಿನಂತೆ ಹತ್ತು ದಿನಗಳ ಆಹಾರ ಮೇಳಕ್ಕೆ ಸುಮಾರು 2000 ಬೊಂಬು ಬೇಕಾಗುತ್ತದೆ. ಸಾಮಾಜಿಕ ಅರಣ್ಯದಿಂದ ಬೊಂಬುಗಳನ್ನು ಖರೀದಿಸಿ ತಂದಿದ್ದೇವೆ. ಪಾಯಸಕ್ಕಾಗಿ ಕೇರಳದಿಂದ ಬಿದಿರಕ್ಕಿ ತರಿಸುತ್ತಿದ್ದೇವೆ ಎಂದು ಕೃಷ್ಣಯ್ಯ ಮತ್ತು ಕಾವೇರ ತಿಳಿಸಿದರು. 

Advertisement

ಜಿಲ್ಲಾಧಿಕಾರಿ ರಂದೀಪ್‌ ಡಿ., ಜಿಪಂ ಸಿಇಒ ಪಿ.ಶಿವಶಂಕರ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಬಸವನಗೌಡ, ಆದಿವಾಸಿ ಮುಖಂಡರಾದ ಎಂ.ಕೃಷ್ಣಯ್ಯ, ಗೋಪಾಲಪೂಜಾರ, ವಿಜಯಕುಮಾರ, ಕಾವೇರ ಮತ್ತಿತರರಿದ್ದರು.

ಈ ಬಾರಿ ಬಿಳಿಗಿರಿರಂಗನ ಬೆಟ್ಟದ ಕಾಡುಬಾಳೆ ಹಣ್ಣು ವಿಶೇಷ
21ರಿಂದ ಆದಿವಾಸಿಗಳ ಸತ್ವಯುತ ಆಹಾರ ಪದಾರ್ಥಗಳನ್ನು ಜನತೆಗೆ ಪರಿಚಯ ಮಾಡಿಕೊಡಲಾಗುವುದು. ಈ ವರ್ಷ ಕಾಡು ಬಾಳೆಹಣ್ಣನ್ನು ಪರಿಚಯಿಸಲಾಗುತ್ತಿದ್ದು, ಅದಕ್ಕಾಗಿ ಬಿಳಿಗಿರಿರಂಗನಬೆಟ್ಟ ಅರಣ್ಯಪ್ರದೇಶದಿಂದ 20 ಗೊನೆ ಬಾಳೆಹಣ್ಣು ತರಿಸಲಾಗಿದೆ. ಜತೆಗೆ ರಾಗಿ ರೊಟ್ಟಿ, ಕುಂಬಳಕಾಯಿ ಮತ್ತು ಅವರೆಕಾಳು ಗೊಜ್ಜು, ಭತ್ತಕ್ಕಿ ಪಾಯಸ, ಮಾಗಳಿ ಬೇರು ಟೀ-ಕಾಫಿ, ರಾಗಿ ಮುದ್ದೆ-ಕಳಲೆ ಸಾರು, ರಾಗಿ ಮುದ್ದೆ-ನಳ್ಳಿ ಸಾರು ಹಾಗೂ ಮದ್ದು ಪಾಯಸ ತಯಾರಿಸಲಾಗುವುದು ಎಂದು ಕೃಷ್ಣಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next