Advertisement

ಶಿಳ್ಳೆ, ಚಪ್ಪಾಳೆಯ ನಡುವೆ ದಸರಾ ಚಲನಚಿತ್ರೋತ್ಸವ

12:38 PM Sep 22, 2017 | |

ಮೈಸೂರು: ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ, ಹರ್ಷೋದ್ಘಾರದ ನಡುವೆ ದಸರಾ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ಕಲಾಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

Advertisement

ದಸರೆ ವಿವಿಧ ಕಾರ್ಯಕ್ರಮಗಳು ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾಷಣ ಮಾಡದ ಮುಖ್ಯಮಂತ್ರಿಗಳು, ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸಿದರು. ಸಚಿವ ಎಚ್‌.ಸಿ.ಮಹದೇವಪ್ಪ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳೂ ಸಿಎಂರನ್ನು ಹಿಂಬಾಲಿಸಿದರು.

ಆಕರ್ಷಿಸಿದ ತಾರೆಯರು: ದಸರಾ ಚಲನಚಿತ್ರೋತ್ಸವದಲ್ಲಿ ಈ ವರ್ಷವೂ ಕನ್ನಡ ಚಿತ್ರರಂಗದ ಸ್ಟಾರ್‌ ನಟ-ನಟಿಯರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಇನ್ನು ಸಮಾರಂಭಕ್ಕೆ ಆಗಮಿಸಿದ್ದ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ, ಡಿಂಪಲ್‌ಕ್ವೀನ್‌ ರಚಿತಾರಾಮ್‌, ನಿರ್ದೇಶಕರಾದ ನಂದಕಿಶೋರ್‌, ಪಿ.ಶೇಷಾದ್ರಿ ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿದರು.

ಉದ್ಘಾಟನೆಗೂ ಮುನ್ನ ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಸುದರ್ಶನ್‌, ಲಂಬೂ ನಾಗೇಶ್‌ ಹಾಗೂ ಬಿ.ವಿ.ರಾಧಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಚಿತ್ರರಂಗದ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಸಮಾರಂಭದ ಬಳಿಕ ಇತ್ತೀಚೆಗೆ ತೆರೆಕಂಡು ಜನಮನ್ನಣೆ ಪಡೆದ ಒಂದು ಮೊಟ್ಟೆಯ ಕಥೆ ಚಿತ್ರ ಪ್ರದರ್ಶಿಸಲಾಯಿತು.

ಕಿರುರಂಗಮಂದಿರ ಉದ್ಘಾಟನೆ: ಕಲಾಮಂದಿರದ ಆವರಣದಲ್ಲಿ ನಿರ್ಮಾಣಗೊಂಡು ಹಲವು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಕಿರುರಂಗಮಂದಿರ ಕೊನೆಗೂ ಲೋಕಾರ್ಪಣೆಗೊಂಡಿತು. ಸ್ಥಳೀಯ ಹವ್ಯಾಸಿ ರಂಗತಂಡಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕಿರುರಂಗಮಂದಿರ ಅಧಿಕೃತವಾಗಿ ಉದ್ಘಾಟನೆಗೊಂಡಿರಲಿಲ್ಲ. ದಸರಾ ಹಿನ್ನೆಲೆಯಲ್ಲಿ ಕಿರು ರಂಗಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. 

Advertisement

ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಡಾ.ಯತೀಂದ್ರ ಸಿದ್ದರಾಮಯ್ಯ, ದಸರಾ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ರಾಚಯ್ಯ ಯಳಂದೂರು, ಜಿಲ್ಲಾಧಿಕಾರಿ ಡಿ.ರಂದೀಪ್‌ ಇದ್ದರು. 

ಶೀಘ್ರ ಚಿತ್ರನಗರಿ, ಸ್ಮಾರಕ ನಿರ್ಮಾಣ: ಉಮಾಶ್ರೀ: ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಸಂದರ್ಭದಲ್ಲಿ ಸಹಕರಿಸಿದ್ದಾರೆ. ಕಲಾವಿದರು ಮಾತ್ರವಲ್ಲದೆ ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದ ಕಾರ್ಮಿಕರ ಅನುಕೂಲಕ್ಕಾಗಿ ಕ್ಷೇಮನಿಧಿಗೆ 10 ಕೋಟಿ  ನೀಡಿದ್ದಾರೆ.

ಜತೆಗೆ ಪ್ರತಿ ತಾಲೂಕುಗಳಲ್ಲಿ ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಸರ್ಕಾರ 50 ಲಕ್ಷ ರೂ. ಸಬ್ಸಿಡಿ ನೀಡುವ ಮೂಲಕ ಕೊಡುಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶೀಘ್ರವೇ ಚಿತ್ರನಗರಿ ನಿರ್ಮಾಣ ಹಾಗೂ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಮಾಡಲಿದ್ದಾರೆ ಎಂದು ನಟಿ ಹಾಗೂ ಸಚಿವೆ ಉಮಾಶ್ರೀ ವಿಶ್ವಾಸ ವ್ಯಕ್ತಪಡಿಸಿದರು.
  
ಹೆಚ್ಚು ಚಿತ್ರಗಳ ನಿರ್ಮಾಣ ಮಾಡುವಲ್ಲಿ ಭಾರತ ವಿಶ್ವದಲ್ಲೇ ಮುಂದಿದೆ. ದೇಶದಲ್ಲಿ ಕರ್ನಾಟಕ 5ನೇ ಸ್ಥಾನಗಳಿಸಿದೆ. ಅನೇಕ ಜನಮನ್ನಣೆ ಪಡೆದ ಚಿತ್ರಗಳ ಪ್ರದರ್ಶನ ಕಾಣುತ್ತಿದ್ದು, ಯಾವುದೇ ಸಿನಿಮಾಗಳು ಮನರಂಜನೆ ನೀಡುವುದರ ಜತೆಗೆ ಮನೋವಿಕಾಸಕ್ಕೂ ಕಾರಣವಾಗಬೇಕು.
-ಪಿ. ಶೇಷಾದ್ರಿ, ಚಿತ್ರನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next