Advertisement

ಇಂದಿನಿಂದ ದಸರಾ ಚಲನಚಿತ್ರೋತ್ಸವ ಆರಂಭ

11:25 AM Oct 10, 2018 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ದಸರಾ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಉದ್ಘಾಟಿಸಲಿದ್ದಾರೆ.

Advertisement

ಬೆಳಗ್ಗೆ 10.30ಕ್ಕೆ  ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಮತ್ತಿತರೆ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು. 

ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ, ಚಲನಚಿತ್ರ ಕಲಾವಿದರಾದ ನಿಖೀಲ್‌ ಕುಮಾರಸ್ವಾಮಿ, ವಿಜಯ್‌ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಪಾರುಲ್‌ಯಾದವ್‌ ಹಾಗೂ ಚಲನಚಿತ್ರ ನಿರ್ದೇಶಕರಾದ ಸತ್ಯಪ್ರಕಾಶ್‌, ರಿಷಬ್‌ ಶೆಟ್ಟಿ ಆಗಮಿಸಲಿದ್ದಾರೆ. 

ಚಲನಚಿತ್ರೋತ್ಸವ ಉದ್ಘಾಟನೆ ನಂತರ ಸತ್ಯಪ್ರಕಾಶ್‌ ನಿರ್ದೇಶನದ “ಒಂದಲ್ಲಾ ಎರಡಲ್ಲಾ’ ಸಿನಿಮಾ ಕಲಾಮಂದಿರದಲ್ಲಿ ಪ್ರದರ್ಶನವಾಗಲಿದೆ. ಜಾತಿ-ಧರ್ಮಗಳಿಗೂ ಮೀರಿದ ಮಾನವೀಯತೆ ಸಹಬಾಳ್ವೆಯ ಜೀವನವನ್ನು ಸಾರುವ ಚಿತ್ರ ಇದಾಗಿದೆ. 

72 ಪ್ರದರ್ಶನ: ದಸರಾ ಚಲನಚಿತ್ರೋತ್ಸವ ಸಮಿತಿ ವತಿಯಿಂದ ಈ ಬಾರಿ ಐನಾಕ್ಸ್‌ ಚಿತ್ರಮಂದಿರದಲ್ಲಿ ಅ.12ರಿಂದ 17ರವರೆಗೆ ಕನ್ನಡ, ತುಳು, ಕೊಡವ ಹಾಗೂ ಇತರ ಭಾರತೀಯ ಭಾಷೆ ಮತ್ತು ಇತರೆ ಅಂತಾರಾಷ್ಟ್ರೀಯ ಭಾಷೆಯ 65 ಚಲನಚಿತ್ರಗಳು,72 ಪ್ರದರ್ಶನ ಕಾಣಲಿದೆ. ಚಲನಚಿತ್ರ ಪ್ರದರ್ಶನದ ನೋಂದಣಿ ಶುಲ್ಕ 300 ರೂ.ಗಳು.

Advertisement

ಕಾರ್ಯಾಗಾರ: ಮೈಸೂರು ದಸರಾ ಚಲನ ಚಿತ್ರೋತ್ಸವ ಸಮಿತಿ ಮತ್ತು ಕರ್ನಾಟಕ ಚಲನ‌ಚಿತ್ರ ಆಕಾಡೆಮಿ ವತಿಯಿಂದ ಅ.13,14ರಂದು ಎರಡು ದಿನಗಳ ಕಾರ್ಯಾಗಾರವನ್ನು ಮೈಸೂರು ವಿಶ್ವ ವಿದ್ಯಾನಿಲಯದ ವಿಜ್ಞಾನಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಾಗಾರದಲ್ಲಿ ಕಿರುಚಿತ್ರ ತಯಾರಿಕೆ, ನಿರ್ಮಾಣ, ನಿರ್ದೇಶನ ಕುರಿತು ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ 400 ರೂ.ಶುಲ್ಕ ಹಾಗೂ ವಿದ್ಯಾರ್ಥಿಗಳಿಗೆ 300 ರೂ. ಶುಲ್ಕ ನಿಗದಿಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳಿಗೆ ದಸರಾ ಚಲನಚಿತ್ರ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕಿರುಚಿತ್ರ ಚಲನಚಿತ್ರ ಸ್ಪರ್ಧೆ: ಮೈಸೂರು ದಸರಾ ಚಲನ ಚಿತ್ರೋತ್ಸವ ಸಮಿತಿ ಮತ್ತು ಕರ್ನಾಟಕ ಚಲನ‌ಚಿತ್ರ ಆಕಾಡೆಮಿ ವತಿಯಿಂದ ಈ ಬಾರಿ ಕಿರುಚಿತ್ರ ಚಲನಚಿತ್ರ ಸ್ಪರ್ಧೆಗೆ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಅ.12ರ ಸಂಜೆ 6ಗಂಟೆವರೆಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಮಾಹಿತಿಗಾಗಿ ಮೊ.94481-08831,94480-92049 ಇಲ್ಲಿಗೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next