Advertisement

ನಾಡ ಹಬ್ಬ ದಸರಾ ಸರಳ ಆಚರಣೆಗೆ ಮಾರ್ಗ ಸೂಚಿ ಪ್ರಕಟ: ಏನಿದೆ ಮಾರ್ಗಸೂಚಿಯಲ್ಲಿ?

05:46 PM Oct 14, 2020 | sudhir |

ಬೆಂಗಳೂರು : ನಾಡ ಹಬ್ಬ ದಸರಾ ಆಚರಣೆಯು ಜಿಲ್ಲೆಯಾದ್ಯಂತ ಅಕ್ಟೋಬರ್ 17 ರಿಂದ 26ರ ವರೆಗೆ ಆಚರಿಸಲಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕೂಡಾ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಸರಕಾರ ದಸರಾ ಆಚರಣೆ ಸರಳವಾಗಿ ಆಚರಿಸಲು ನಿರ್ಧರಿಸಿ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

Advertisement

ಅಂದಹಾಗೆ ಮಾರ್ಗಸೂಚಿಯಲ್ಲಿ ಏನೇನಿದೆ ನೋಡೋಣ:
1 . ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ನಾಡ ಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವುದು.
2. ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಆಚರಣೆಗೆ ಮುನ್ನವೇ ನಿಷೇಧಗಳ ಕುರಿತು ಪ್ರಚಾರ ಮಾಡುವುದು.
3. ಮೈಸೂರು ಹೊರತಾಗಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಆಚರಿಸುವ ದಸರಾ ಹಬ್ಬದಲ್ಲಿ ೧೦೦ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು.
4.ಸಾಮಾಜಿಕ ಅಂತರ ಇಲ್ಲದೆ ನಡೆಸುವ ದಸರಾ ಕಾರ್ಯಕ್ರಮಗಳನ್ನು ನಿಷೇಧಿಸುವುದು.
5. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
6. ದಸರಾ ಆಚರಣೆಯಿಂದ ಕಾನೂನು ಸುವ್ಯವಸ್ಥೆಗೆ ಚ್ಯುತಿ ಬಾರದಂತೆ ಕಾಪಾಡುವುದು.
7. ದಸರಾ ತಯಾರಿ ಹಾಗೂ ಚಟುವಟಿಕೆಗಳ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸುವುದು.

ಮೈಸೂರಿನಲ್ಲಿ ಆಚರಿಸುವ ದಸರಾ ಹಬ್ಬದ ಮಾರ್ಗಸೂಚಿಗಳು:
1. ಅರಮನೆಯ ಆವರಣದಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸುವುದು.
2.ಸೋಂಕಿನ ಹಿನ್ನೆಲೆಯಲ್ಲಿ ಮೈಸೂರಿನ ದಸರಾ ಆಚರಣೆಯನ್ನು ದೃಶ್ಯ ಸಂವಹನದ ಮೂಲಕ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
3. ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಸಮಾರಂಭದಲ್ಲಿ ಕೇವಲ 200 ಮಂದಿಗೆ ಮಾತ್ರ ಅವಕಾಶ
4.ಅರಮನೆಯಲ್ಲಿ 8 ದಿನಗಳು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಗರಿಷ್ಠ 50 ಜನ ಮೀರದಂತೆ 2 ಗಂಟೆಗಳ ಕಾರ್ಯಕ್ರಮ ನೀಡುವುದು.
5. ಜಂಬೂ ಸವಾರಿಯ ದಿನದಂದು 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
6. ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್ ತಪಾಸಣೆಗೆ ಒಳಪಡಬೇಕು ಜೊತೆಗೆ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next