Advertisement

ನಾಡದೋಣಿ ಮೀನುಗಾರಿಕೆಗೆ “ದಾರ’ವೇ ಆಧಾರ

06:30 AM Jun 17, 2018 | Team Udayavani |

ಕಾಪು: ಮಳೆಗಾಲದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಸ್ಥಗಿತಗೊಳ್ಳುವ ವೇಳೆ ನಾಡದೋಣಿ ಮೀನುಗಾರಿಕೆಯೇ ಮೀನುಗಾರರಿಗೆ ಜೀವನೋಪಾಯ. ಉಚ್ಚಿಲ – ಎರ್ಮಾಳು – ಕಾಪು ವಲಯದ ನಾಡದೋಣಿ ಮೀನುಗಾರರು ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಅಗತ್ಯವಾದ ದಾರ ಮುಹೂರ್ತಕ್ಕೆ ಚಾಲನೆ ನೀಡಿದ್ದು ಸಾಂಪ್ರದಾಯಿಕ ಮತ್ಸéಬೇಟೆಗೆ ಸನ್ನದ್ಧರಾಗುತ್ತಿದ್ದಾರೆ. 
 
ನಾಡದೋಣಿ ಮೀನುಗಾರಿಕೆಗೆ ಬಳಸಲಾಗುವ ಬಲೆಗಳನ್ನು ಜೋಡಿಸುವ ಪ್ರಥಮ ಹಂತವೇ ದಾರ ಪ್ರಕ್ರಿಯೆ. ದಾರ ಜೋಡಣೆಗೂ ಬೇಕು ಶುಭ ಮುಹೂರ್ತ ನಿಗದಿತ ಪ್ರದೇಶದಲ್ಲಿ ಒಟ್ಟುಗೂಡುವ ನಾಡದೋಣಿ ಮೀನುಗಾರರು ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲಾ ಗುಂಪಿನ ತಲಾ 5 ಮಂದಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲಕ್ಕೆ ತೆರಳಿ ಅರ್ಚಕರಲ್ಲಿ ಶುಭ ಮೂಹೂರ್ತ ಕೇಳುತ್ತಾರೆ. ಅವರು ಹೇಳಿದ ದಿನ ಪ್ರತಿಯೊಂದು ಗುಂಪಿನವರು ಒಟ್ಟಾಗಿ  ಪ್ರಾರ್ಥನೆ ನಡೆಸಿ ಬಲೆಗಳನ್ನು ಜೋಡಿಸುವ ಮೂಲಕ ದಾರ ಪ್ರಕ್ರಿಯೆ ನಡೆಸುತ್ತಾರೆ.  ಮೀನುಗಾರಿಕೆ ಆರಂಭಕ್ಕೆ ಮುನ್ನವೂ ಪ್ರಾರ್ಥನೆ ನಡೆಸಿಯೇ ಸಮುದ್ರಕ್ಕೆ ಇಳಿಯುತ್ತಾರೆ. 

Advertisement

ಹಲವು ವಿಧ
ಬಲೆಗಳಲ್ಲಿ ಕಂತ ಬಲೆ, ಬೊಲೆಂಜಿರ್‌ ಬಲೆ, ಡಿಸ್ಕೋ ಬಲೆ, ಪಟ್ಟೆ ಬಲೆ, ಮಾಂಜಿ ಬಲೆ, ಮಾಟು ಬಲೆ ಸಹಿತ ವಿವಿಧ ರೀತಿಯ ಬಲೆಗಳಿವೆ. ಸಿಗಡಿ ಮುಖ್ಯ ಗುರಿಯಾಗಿದ್ದು, ಬಂಗುಡೆ, ಬೂತಾಯಿ, ಮಾಂಜಿ, ಬೊಲೆಂಜಿರ್‌ ಸಹಿತ ಇನ್ನಿತರ ಸಣ್ಣಪುಟ್ಟ ಮೀನುಗಳನ್ನೂ ಹಿಡಿಯಲಾಗುತ್ತದೆ.  

ಏನಿದು ದಾರ?
ನಾಡದೋಣಿ ಮೀನುಗಾರಿಕೆಗೆ ಬಳಸಿದ ಮಾಟುಬಲೆಯನ್ನು ಮೀನುಗಾರಿಕಾ ಋತು ಕೊನೆಗೊಂಡ ಬಳಿಕ ಬಿಡಿ ಬಿಡಿಯಾಗಿ ವಿಂಗಡಿಸಿ ಒಂದೆಡೆ ಸಂಗ್ರಹಿಸಿಡಲಾಗುತ್ತದೆ.  ಹರಿದ ಬಲೆಗಳನ್ನು ಸರಿಪಡಿಸಲು ಅದನ್ನು ನಾಡದೋಣಿ ಮೀನುಗಾರಿಕಾ ತಂಡದ ಪ್ರತಿನಿಧಿಗಳಿಗೆ ಹಂಚಲಾಗುತ್ತದೆ. ನಿಗದಿ ಅವಧಿಯಲ್ಲಿ ಅದನ್ನು ಸರಿಪಡಿಸಿ, ಮುಖ್ಯಸ್ಥರಿಗೆ ತಲುಪಿಸಬೇಕು. ಹೀಗೆ ನಿರ್ದಿಷ್ಟ ಜಾಗದಲ್ಲಿ ಬಲೆಗಳನ್ನು ಸಾಮೂಹಿಕವಾಗಿ ಒಟ್ಟಾಗಿ ಜೋಡಿಸುವ ಕಾರ್ಯವೇ ದಾರ. ಮುಂಗಾರು ಆರಂಭದಲ್ಲಿ ಪ್ರಕ್ಷುಬ್ಧವಾದ ಸಮುದ್ರ ಸ್ವಲ್ಪ ದಿನದ ನಂತರ ಶಾಂತವಾದಾಗ, ಈ ಬಲೆಗಳನ್ನು ಹಿಡಿದು ನಾಡದೋಣಿ ಮೀನುಗಾರಿಕೆಗೆ ಹೊರಡುತ್ತಾರೆ.  

ಸೂಕ್ತ ಸೌಕರ್ಯಗಳಿಲ್ಲ
ನಮಗೆ ಸೂಕ್ತ ಸೌಕರ್ಯಗಳಿಲ್ಲ. ನಾಡದೋಣಿ ಮೀನುಗಾರಿಕೆಗೆ ಸೀಮೆ ಎಣ್ಣೆಯೇ ಮುಖ್ಯವಾಗಿದ್ದು, ಸರಕಾರ ನಮಗೆ ಅದನ್ನೂ ಸರಿಯಾಗಿ ನೀಡುತ್ತಿಲ್ಲ. ಅದರ ಜೊತೆಗೆ ಬುಲ್‌ ಟ್ರಾಲ್‌, ನಾಡದೋಣಿ ಮಾದರಿಯ ಬುಲ್‌ ಟ್ರಾಲ್‌, ಲೈಟ್‌ ಫಿಶಿಂಗ್‌ನಿಂದಲೂ ನಾಡದೋಣಿ ಮೀನುಗಾರಿಕೆಗೆ ತೊಂದರೆಯುಂಟಾಗುತ್ತಿದೆ. 
– ವಾಸು ಕರ್ಕೇರ,
ನಾಡದೋಣಿ ಮೀನುಗಾರರ ಮುಖಂಡ 

ಮೀನುಗಾರಿಕೆ ನಷ್ಟದ ಹಾದಿಯಲ್ಲಿದೆ
ಬೆಲೆ ಏರಿಕೆ, ಬಂದರು ಸೌಲಭ್ಯ ಇಲ್ಲದಿರುವುದು, ಬೃಹತ್‌ ಕೈಗಾರಿಕೆಗಳ ಕಾರಣ ನಾಡದೋಣಿ ಮೀನುಗಾರಿಕೆ ನಷ್ಟದ ಹಾದಿಯಲ್ಲಿದೆ. ವಿವಿಧ ಸಾಲ ಸೌಲಭ್ಯ, ಸಬ್ಸಿಡಿಗಳ ಮೂಲಕವಾಗಿ ಸಾಂಪ್ರಾದಾಯಿಕ ನಾಡದೋಣಿ ಮೀನುಗಾರಿಕೆಯನ್ನು ಉಳಿಸಲು ಸಾಧ್ಯವಿದೆ 
– ಮೋಹನ ಗುರಿಕಾರ,
ಮೀನುಗಾರರು  

Advertisement

ನಮ್ಮ ಅನಿವಾರ್ಯತೆ
ಮಳೆಗಾಲದ ಅವಧಿಯಲ್ಲಿ ಯಾಂತ್ರಿಕ ದೋಣಿಗಳು ಕಡಲಿಗಿಳಿಯುವಂತಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿದೆ. ಕಡಿಮೆ ಅವಧಿಯಲ್ಲೇ ನಾವು ಈ ಕಾರ್ಯ ಮಾಡಬೇಕಿದೆ. 
– ರವಿ ಕೋಟ್ಯಾನ್‌ ಉಚ್ಚಿಲ
ಮೀನುಗಾರರು 

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next