ಕಾರ್ಕಳ: ಕಾರ್ಕಳ-ಹೆಬ್ರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮುಂದಕ್ಕೆ ಆಗುಂಬೆ ಸೇರಿದಂತೆ ಘಾಟಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ರಾಜ್ಯ ಹೆದ್ದಾರಿಯ ಸ್ವರ್ಣಾ ನದಿ ಸೇತುವೆ ಬಳಿ ಎಣ್ಣೆಹೊಳೆ ಎಂಬಲ್ಲಿ ದೋಣಿ ಕಡವು ತಿರುವು ಅಪಾಯಕಾರಿಯಾಗಿ ಪರಿಣಮಿಸಿದ್ದು ವಾಹನಗಳು ಸತತವಾಗಿ ಇಲ್ಲಿ ಪಲ್ಟಿಯಾಗುತ್ತಿವೆ.
ಈ ತಿರುವಿನಲ್ಲಿ ಅಪಘಾತಗಳು ಸಂಭವಿಸುವ ಪ್ರಮಾಣ ಹೆಚ್ಚಿವೆ. ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಎಪ್ರಿಲ್ ತಿಂಗಳ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನಾಮಫಲಕಗಳು ಹಾಗೂ ಅಪಘಾತ ತಪ್ಪಿಸಲು ಅನುಕೂಲ ವಾಗುವಂತೆ ತಡೆಗೋಡೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮೇ ತಿಂಗಳಲ್ಲಿ ನಡೆದ ರಸ್ತೆ ವಿಸ್ತರಣೆ ಕಾಮಗಾರಿ ಬಳಿಕ ತಡೆಗೋಡೆ ಹಾಗೂ ಬೋರ್ಡ್ ಗಳನ್ನು ತೆಗೆಯಲಾಗಿತ್ತು. ಅನಂತರ ಮೇಯಿಂದ ಜೂನ್ ವರೆಗೆ ಒಟ್ಟು 14ಕ್ಕೂ ಹೆಚ್ಚು ಕಾರುಗಳು ಪ್ರಪಾತಕ್ಕೆ ಬಿದ್ದಿವೆ. ದ್ವಿಚಕ್ರ ವಾಹನ ಅಪಘಾತ ಘಟನೆಗಳು ಕೂಡ ನಡೆದಿವೆ.
ಹತ್ತಿರದಲ್ಲಿ ಹರಿಯುವ ಸ್ವರ್ಣಾ ನದಿಗೆ ಅಡ್ಡಲಾಗಿ ಸೇತುವೆ ಇದ್ದು ವೇಗವಾಗಿ ಸಾಗುವ ವಾಹನಗಳಿಗೆ ಎದುರಿನಿಂದ ಬರುವ ವಾಹನಗಳನ್ನು ತತ್‌ಕ್ಷಣಕ್ಕೆ ಅಂದಾಜಿಸಲು ಕಷ್ಟವಾಗುತ್ತಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ.
ಎತ್ತರಿಸಿ ವಿಸ್ತರಣೆ ಮಾಡಿ
ವರಂಗ ಕೆಲ್ ಟೆಕ್ ತಿರುವಿನಿಂದ ಮುನಿಯಾಲು ಪೆಟ್ರೋಲ್ ಬಂಕ್ ವರೆಗಿನ ಹೆದ್ದಾರಿ, ಎಣ್ಣೆಹೊಳೆ ಮಸೀದಿ ಬಳಿಯಿಂದ ಸೇತುವೆ ದೋಣಿಕಡವು ತಿರುವು ವರೆಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟು 3 ಕೋಟಿ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲಾಗಿತ್ತು, ತಗ್ಗಿನಲ್ಲಿದ್ದ ಜಾಗವನ್ನು ಎತ್ತರಗೊಳಿಸಲಾಗಿದೆ. ಅಲ್ಪ ದೂರದ ರಸ್ತೆಗೆ ಅಷ್ಟೊಂದು ಕೋಟಿ ರೂ. ವೆಚ್ಚ ಮಾಡಿದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದರು.
ಕಾಂಕ್ರೀಟ್ ಹಾಕಿದ ಬೆನ್ನಿಗೆ ಎದ್ದು ಹೋಗಿದೆ
ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಆಗಮಿಸಿದ್ದ ಸಂದರ್ಭ ಹೆದ್ದಾರಿ ರಸ್ತೆ ಕಾಮಗಾರಿ ನಡೆದು ಡಾಮರು ಕಾಮಗಾರಿ ಮಾಡಲಾಗಿತ್ತು. ಗಣೇಶ ಮಂದಿರದ ಬಳಿ ರಸ್ತೆಗೆ ಹಾಕಲಾಗಿದ್ದ ಮೋರಿ ಹೊಂಡ ಬಿದ್ದಿದ್ದವು. ಕೆಲವು ದಿನಗಳ ಎರಡು ಹಿಂದೆಯಷ್ಟೆ ಅದಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿತ್ತು. ನಿರಂತರ ಮಳೆಗೆ ಅದು ಕೂಡ ಎದ್ದು ಹೋಗಿ ಕಾಂಕ್ರೀಟ್ ಕಿತ್ತು ಹೋಗಿದೆ. ಸಮಸ್ಯೆ ಮತ್ತೆ ಹಿಂದಿನ ಸ್ಥಿತಿಗೆ ಮರಳಿದೆ.
ಕಾಮಗಾರಿ ಪೂರ್ಣವಾಗಿಲ್ಲ
ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಮಳೆಯಿಂದಾಗಿ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು ಇನ್ನೂ ಕ್ರಾಶ್ ಬ್ಯಾರಿಯರ್, ರಸ್ತೆ ಮಾರ್ಕಿಂಗ್, ರಸ್ತೆ ಸ್ಟಡ್‌ಗಳು, ರಿಫ್ಲೆಕ್ಷನ್ ಬೋರ್ಡ್, ಸೈನ್ ಬೋರ್ಡ್, ಪಿಚ್ಚಿಂಗ್ ಕೆಲಸಗಳು ಬಾಕಿ ಉಳಿದಿವೆ. ರಸ್ತೆ ಎರಡೂ ಬದಿಗಳಲ್ಲಿ ಗಣೇಶ ಮಂದಿರ ವರೆಗೆ ಕ್ರಾಶ್ ಬ್ಯಾರಿಯರ್ ಅಳವಡಿಸುವ ಮೂಲಕ ಅಪಘಾತ ಮುಕ್ತ ವಲಯವಾಗಿ ರೂಪಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಹೆಬ್ರಿ ವಲಯದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಂದೀಪ್ ಲಾಯ್ಡ ಡಿಸಿಲ್ವರವರು.
ವಿಸ್ತರಣೆಗೆ ಕ್ರಮ: ತಿರುವು ವಿಸ್ತರಿಸಲು ಕ್ರಮ ವಹಿಸಲಾಗಿದೆ. ಸರಣಿ ಅಪಘಾತ ಸಂಭವಿಸುತ್ತಿದೆ ಎನ್ನಲಾದ ಸ್ಥಳ ತಿರುವಿನಿಂದ ಕೂಡಿದೆ. ಮೊದಲಿದ್ದ ತಿರುವಿಗಿಂತ ಹೆಚ್ಚು ವಿಸ್ತರಿಸಿ, ತಿರುವು ಕಡಿಮೆಗೊಳಿಸುವ ಕೆಲಸ ಮಾಡಲಾಗಿದೆ. ಸ್ಥಳೀಯರು ಎಚ್ಚರ ವಹಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಪ್ರವಾಸಿಗರು ಅತೀ ವೇಗದಿಂದ ಸಂಚರಿಸುತ್ತಿರುತ್ತಾರೆ. ಈ ಬಗ್ಗೆ ಮತ್ತೂಮ್ಮೆ ಪರಿಶೀಲಿಸುತ್ತೇವೆ. ಅಗತ್ಯವಿದ್ದರೆ ಮೂರು ಇಲಾಖೆಗಳ ಜಂಟಿ ಸರ್ವೇ ನಡೆಸುತ್ತೇವೆ. ನಮ್ಮ ಇಲಾಖೆ ಕಡೆಯಿಂದ ಸಾಧ್ಯವಾಗುವ ಎಲ್ಲ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುತ್ತೇವೆ. –
ಸೋಮಶೇಖರ, ಎಇಇ, ಲೋಕೋಪಯೋಗಿ ಇಲಾಖೆ ಕಾರ್ಕಳ
ಸವಾರರು ಎಚ್ಚರ ವಹಿಸಿ:ತಿರುವಿನ ಕಾರಣಕ್ಕೆ ಅಪಘಾತಗಳು ಹೆಚ್ಚು ಘಟಿಸುತ್ತಿರುತ್ತವೆ. ಘಟನೆಗಳು ಸಂಭವಿಸಿದಾಗೆಲ್ಲ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರುತ್ತಿರುತ್ತೇವೆ. ಸಾರ್ವಜನಿಕರು ಕೂಡ ಇಲ್ಲಿ ತೆರಳುವಾಗ ಎಚ್ಚರದಿಂದ ವಾಹನ ಚಾಲನೆ ಮಾಡಬೇಕು.
-ತಿಮ್ಮೇಶ್, ಸಬ್ ಇನ್‌ಸ್ಪೆಕ್ಟರ್ ಅಜೆಕಾರು ಪೊಲೀಸ್ ಠಾಣೆ
-ಬಾಲಕೃಷ್ಣ ಭೀಮಗುಳಿ