Advertisement

ಮಾಣಿ –ಮೈಸೂರು ಹೆದ್ದಾರಿ: ಜೀವಭಯದಲ್ಲೇ ಸವಾರಿ

02:00 AM Jul 07, 2018 | Karthik A |

ಕಬಕ: ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು, ವಾಹನ ಸವಾರರು ಜೀವ ಭಯದಿಂದಲೇ ಓಡಾಡುವಂತಾಗಿದೆ. ತಿರುವುಗಳಲ್ಲೂ ಹಲವು ಮರಣ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬರುವ ಸಂದರ್ಭದಲ್ಲಿ ಚಾಲಕರು, ಸವಾರರ ಗಮನಕ್ಕೇ ಬರುವುದಿಲ್ಲ. ಇಡ್ಕಿದು ಗ್ರಾಮದ ಮಿತ್ತೂರು ತಿರುವಿನಲ್ಲಿ ರಸ್ತೆಯೇ ಇಲ್ಲ. ಗುಂಡಿಗಳಲ್ಲೇ ಪರದಾಡುತ್ತ ಸವಾರಿ ಮಾಡಬೇಕಿದೆ. ಹೊಂಡಗಳಲ್ಲಿ ದ್ವಿಚಕ್ರ ವಾಹನ ಸವಾರರು ಮುಗ್ಗರಿಸುವಾಗ ದೊಡ್ಡ ವಾಹನಗಳು ಹಿಂದಿನಿಂದ ಬಂದು ಢಿಕ್ಕಿ ಹೊಡೆಯುತ್ತಿವೆ. ಕುವೆತಿಲ ತಿರುವಿನಲ್ಲಿ ಇತ್ತೀಚೆಗೆ ಲಾರಿ ಢಿಕ್ಕಿಯಾಗಿ ಬೈಕ್‌ ಸವಾರನ ಪಾದವೇ ತುಂಡಾಗಿದೆ. ಮಿತ್ತೂರು ಸಮೀಪ ಲಾರಿ ಢಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇಂತಹ ಅಪಘಾತಗಳು ಹೆಚ್ಚುತ್ತಿವೆ.

Advertisement

ವಾಹನ ದಟ್ಟಣೆ ಜಾಸ್ತಿ
ಶಿರಾಡಿ ಘಾಟಿಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಬದಲಿ ಮಾರ್ಗವಾಗಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ರಸ್ತೆ ನಿತ್ಯವೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಮಳೆ ನೀರು ಚರಂಡಿಗಳು ಸರಿಯಾಗಿಲ್ಲದೆ ರಸ್ತೆಯಲ್ಲೇ ಹರಿಯುತ್ತಿರುವ ಕಾರಣ ರಸ್ತೆ ಹಾನಿಗೀಡಾಗುತ್ತಿದೆ. ರಸ್ತೆ ಪಕ್ಕದಲ್ಲಿ ಹಲವು ಕಡೆ ಬರೆಯ ಮಣ್ಣು ಜರಿದು ಬೀಳುವ ಸ್ಥಿತಿಯಲ್ಲಿದ್ದು, ದೊಡ್ಡ ಗಾತ್ರದ ಮರಗಳು ರಸ್ತೆಗೆ ಬಾಗಿವೆ. ಅಪಾಯ ಸಂಭವಿಸುವ ಮುನ್ನ ಈ ಬಗ್ಗೆ ಹೆದ್ದಾರಿ ಇಲಾಖೆ ಗಮನ ಹರಿಸಿ, ತೆರವುಗೊಳಿಸುವುದು ಒಳಿತು. ಇತ್ತೀಚೆಗೆ ಮೂರು ದಿನ ಮಳೆ ಕಡಿಮೆಯಾದ ಸಂದರ್ಭದಲ್ಲಿ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ತಾತ್ಕಾಲಿಕ ಕೆಲಸ ನಡೆದಿದ್ದರೂ ಮಳೆಗಾಲದಲ್ಲಿ ಸಂಭವಿಸುವ ಅಪಾಯ ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೊಂಡ ಮುಚ್ಚುತ್ತೇವೆ
ಮಾಣಿ-ಮೈಸೂರು ರಸ್ತೆ ಕೆ.ಆರ್‌.ಡಿ.ಸಿ.ಎಲ್‌. ವತಿಯಿಂದ ಅಭಿವೃದ್ಧಿ ನಡೆಸಿ ಐದು ವರ್ಷ ಕಳೆದವು. ಮೂರು ವರ್ಷಗಳ ನಿರ್ವಹಣೆ ಮುಗಿದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ, ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ರಸ್ತೆ ಹದಗೆಟ್ಟಿದೆ. ತತ್‌ ಕ್ಷಣ ಗುಂಡಿ ಮುಚ್ಚುವ ಕೆಲಸ ನಡೆಸುತ್ತೇವೆ. ಬರೆ ಜರಿದು ಬಿದ್ದಿರುವಲ್ಲಿ ಮಣ್ಣು ತೆರವುಗೊಳಿಸುವ ಹಾಗೂ ಚರಂಡಿ ಸರಿಪಡಿಸುವ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗಿದೆ. ರಸ್ತೆ ಗುಂಡಿ ಮುಚ್ಚುವುದು ಇತ್ಯಾದಿ ತಾತ್ಕಾಲಿಕ ಕೆಲಸಗಳನ್ನು ನಮ್ಮ ಇಲಾಖೆಯಿಂದಲೇ ನಿರ್ವಹಿಸಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರವಾಗಲಿದೆ. ಹೆದ್ದಾರಿಯಲ್ಲಿ ಮಾಣಿ-ಕಬಕ ನಡುವಿನ ಹೊಂಡಗಳನ್ನು ಮುಚ್ಚುವ ಕೆಲಸಕ್ಕೂ ಚಾಲನೆ ನೀಡಲಾಗುವುದು.
– ಸುನೀಲ್‌, ಕೆ.ಆರ್‌.ಇ.ಡಿ.ಸಿ.ಎಲ್‌. ಎಂಜಿನಿಯರ್‌

— ಉಮ್ಮರ್‌ ಜಿ. ಕಬಕ

Advertisement

Udayavani is now on Telegram. Click here to join our channel and stay updated with the latest news.

Next