ಮಹಾನಗರ: ನಗರದ ಉರ್ವಸ್ಟೋರ್‌ನಿಂದ ಅಶೋಕನಗರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು, ಹೊಂಡ-ಗುಂಡಿಗಳು ಜೀವ ತಿನ್ನುತ್ತಿವೆ.
ಉರ್ವಸ್ಟೋರ್‌ನಿಂದ ಅಶೋಕನಗರ, ಉರ್ವ ಮಾರುಕಟ್ಟೆ ಸಹಿತ ಕೆಲವೊಂದು ಪ್ರದೇಶಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದೇ ಮಾರ್ಗದಲ್ಲಿ ಹತ್ತಾರು ಮನೆಗಳಿದ್ದು, ವಸತಿ ಪ್ರದೇಶದಿಂದ ಕೂಡಿದೆ. ಇದೇ ಕಾರಣಕ್ಕೆ ನೂರಾರು ವಾಹನಗಳು ದಿನಂಪ್ರತಿ ಅತ್ತಿಂದಿತ್ತ ಸಂಚರಿಸುತ್ತದೆ. ಹೊಂಡ-ಗುಂಡಿಯಿಂದ ಕೂಡಿದ ಈ ರಸ್ತೆಯಲ್ಲಿ ಸದ್ಯ ಸಂಚಾರ ಸಂಕಷ್ಟವೆನಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ಈ ರಸ್ತೆಗೆ ಡಾಮರು ಹಾಕಲಾಗಿತ್ತು. ಕೆಲವೇ ಸಮಯದಲ್ಲಿ ಮತ್ತೆ ಗುಂಡಿ ಬಿದ್ದಿದ್ದು, ಬಳಿಕ ತಾತ್ಕಾಲಿಕ ತೇಪೆ ಹಾಕಲಾಗಿತ್ತು. ಆದರೂ ಕೆಲವು ತಿಂಗಳಿನಿಂದ ಸುರಿದ ಮಳೆಗೆ ಮತ್ತೆ ಗುಂಡಿಮಯವಾಗಿದೆ. ಎದುರಿನಿಂದ ಬೇರೆ ವಾಹನ ಬರುತ್ತಿದ್ದರೆ ಅದನ್ನು ತಪ್ಪಿಸುವುದೇ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಮಳೆ ಬಂದರಂತೂ ಇಲ್ಲಿನ ಆಳದ ಗುಂಡಿಯ ತುಂಬಾ ನೀರು ತುಂಬಿ, ಗುಂಡಿ ಯಾವುದು? ರಸ್ತೆ ಯಾವುದು? ಎಂದು ತಿಳಿಯುವುದು ಕಷ್ಟ ಎನ್ನುತ್ತಾರೆ ಸ್ಥಳೀಯರು.
ರಸ್ತೆಯ ಪರಿಸ್ಥಿತಿ ಹೇಗಾಗಿದೆ ಎಂದರೆ ಬದಿಯಲ್ಲಿ ನಡೆಯಲೂ ಕಷ್ಟ. ಮಳೆ ಬಂದರಂತೂ ಈ ರಸ್ತೆಯಲ್ಲಿ ಹೋಗಲು ಹರಸಾಹಸ ಪಡೆಬೇಕು. ಸ್ಥಳೀಯಾಡಳಿತ ನಮ್ಮ ಸಮಸ್ಯೆಯನ್ನು ಆಲಿಸಿ, ಹದಗೆಟ್ಟ ರಸ್ತೆಗೆ ಡಾಮರು ಹಾಕುವ ಕೆಲಸ ಅಥವಾ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಸಬೇಕು ಎನ್ನುತ್ತಾರೆ ಸ್ಥಳೀಯರು.
ಸುತ್ತಲಿನ ರಸ್ತೆಯದ್ದೂ ಇದೇ ಸಮಸ್ಯೆ
ಉರ್ವ ಸ್ಟೋರ್‌ನ ಸುತ್ತಮುತ್ತಲಿನ ರಸ್ತೆಯದ್ದೂ ಇದೇ ಸಮಸ್ಯೆ. ಇಲ್ಲಿನ ಅಶೋಕನಗರ ಕ್ರಾಸ್‌ನಿಂದ ಉರ್ವ ಮಾರುಕಟ್ಟೆ ಸಂಪರ್ಕ, ಡೊಮಿನಿಕ್ ಚರ್ಚ್ ರಸ್ತೆ, ಉರ್ವಸ್ಟೋರ್ ಬಸ್ ನಿಲ್ದಾಣ ಹಿಂಬದಿ ರಸ್ತೆಯದ್ದೂ ಇದೇ ಸಮಸ್ಯೆ.