Advertisement

Landlinks ರಸ್ತೆ ಗುಂಡಿ ಮುಚ್ಚಿದ ಸಮಾನ ಮನಸ್ಕ ತಂಡ; ನಮ್ಮ ಊರು ನಮ್ಮ ರಸ್ತೆ ಅಭಿಯಾನ

03:00 PM Aug 26, 2024 | Team Udayavani |

ಮಹಾನಗರ: ನಗರ ಸುತ್ತಾಡಿದರೆ ಸಾಕು ಹಲವು ಕಡೆಗಳಲ್ಲಿ ಹೊಂಡ-ಗುಂಡಿ ಕಾಣುತ್ತದೆ. ಅದರಲ್ಲೂ ನಗರ ಒಳರಸ್ತೆಗಳಲ್ಲಂತೂ ಭಾರೀ ಗಾತ್ರದ ಗುಂಡಿ ಸಾಮಾನ್ಯವಾದಂತಿದೆ. ಕೆಲವೊಂದು ಕಡೆ ಸಂಬಂಧಪಟ್ಟ ಜನಪ್ರತಿನಿಧಿಗಳಿಂದಲೂ ಇದಕ್ಕೆ ಸ್ಪಂದನೆ ಸಿಗುವುದಿಲ್ಲ. ಇದೀಗ ನಗರದ ಲ್ಯಾಂಡ್‌ಲಿಕ್ಸ್‌ ಬಳಿ ಸ್ಥಳೀಯ ಸಮಾನ ಮನಸ್ಕರು ತಂಡದ ಸದಸ್ಯರು ‘ನಮ್ಮ ಊರು ನಮ್ಮ ರಸ್ತೆ’ ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಂಡ ರಚಿಸಿ ತಮ್ಮ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ ಮಾನವೀಯ ಕೆಲಸ ಮಾಡಿದ್ದಾರೆ.

Advertisement

ಲ್ಯಾಂಡ್‌ ಲಿಂಕ್ಸ್‌ನ ಒಂದನೇ ಮುಖ್ಯರಸ್ತೆ, ಫ್ಯಾನ್ಸಿ ಅಂಗಡಿಯೊಂದರ ಬಳಿ ಹಲವು ಸಮಯದಿಂದ ಬೃಹತ್‌ ಗಾತ್ರದ ಗುಂಡಿ ಬಿದ್ದಿತ್ತು. ಹಲವು ಮಂದಿ ದ್ವಿಚಕ್ರ ಸವಾರರು ಈ ಗುಂಡಿ ಬಿದ್ದು ಗಾಯಗೊಂಡಿದ್ದರು. ವಾಹನಗಳು ಕೂಡ ಸ್ಕಿಡ್‌ ಆಗುವ ಅಪಾಯ ಇತ್ತು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರೂ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳೇ ಸೇರಿ ರವಿವಾರ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಈ ರಸ್ತೆಯ ಉಳಿದ ಕಡೆ ಇರುವ ಗುಂಡಿಯನ್ನೂ ಮುಚ್ಚುವ ಯೋಜನೆಯಲ್ಲಿದ್ದಾರೆ. ಸ್ಥಳೀಯ ರಾದ ಅಶೋಕ, ಹಿಮಕರ, ಸುನೀಲ್‌ ಹಯವದನ, ಶರವಣ ಮತ್ತು ರಘುರಾಮ ಅವರು ಈ ಕೆಲಸದಲ್ಲಿ ಸಹಕರಿಸಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ಲ್ಯಾಂಡ್‌ಲಿಂಕ್ಸ್‌ ಕನಸು
ಸ್ಥಳೀಯರಾದ ಅಶೋಕ್‌ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ರಸ್ತೆಯಲ್ಲಿದ್ದ ಹೊಂಡದಿಂದಾಗಿ ತುಂಬಾ ಸಮಸ್ಯೆ ಉಂಟಾಗುತ್ತಿತ್ತು. ಅಪಘಾತದ ಆತಂಕವೂ ಇದೆ. ಜನಪ್ರತಿನಿಧಿಗಳ ಸ್ಪಂದನೆ ಇಲ್ಲದ ಕಾರಣ ನಾವೇ ತಂಡ ಕಟ್ಟಿ ಗುಂಡಿ ಮುಚ್ಚಿದ್ದೇವೆ. ನಾವು ಒಂದೊಂದು ವೃತ್ತಿಯಲ್ಲಿದ್ದು, ರಜಾ ದಿನಗಳಲ್ಲಿ ಈ ಕೆಲಸದಲ್ಲಿ ತೊಡಗುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳೀಯರು ನಮಗೆ ಸಾಥ್‌ ನೀಡುವ ನಿರೀಕ್ಷೆ ಇದೆ. ಅದೇ ರೀತಿ. ಪ್ಲಾಸ್ಟಿಕ್‌ ಮುಕ್ತ ಲ್ಯಾಂಡ್‌ಲಿಂಕ್ಸ್‌ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲು ಚಿಂತನೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next