Advertisement

Siruguppa ಸಾವಿನ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿ 150ಎ

07:20 PM Sep 05, 2024 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಹಾದು ಹೋಗುವ ಬೀದರ್ -ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ನಿಧಾನವಾಗಿ ಸಾಗಿದ್ದು, ಸಾರ್ವಜನಿಕರ ಸಾವಿನ ಹೆದ್ದಾರಿಯಾಗಿದ್ದು, ಪ್ರತಿನಿತ್ಯವೂ ಈ ಹೆದ್ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರು ಹೊಂಡ ಗುಂಡಿಗಳನ್ನು ಹಾದು ಹೋಗುವುದು ಅನಿವಾರ್ಯವಾಗಿದೆ. ಈ ಹೆದ್ದಾರಿಯಲ್ಲಿ ಒಂದು ವರ್ಷದಲ್ಲಿ 23ಜನ ಸಾವನ್ನಪ್ಪಿದ್ದಾರೆ.

Advertisement

ತಾಲೂಕಿನ ಇಬ್ರಾಹಿಂಪುರ ಗ್ರಾಮದ ತುಂಗಭದ್ರ ಸೇತುವೆಯಿಂದ ತೆಕ್ಕಲಕೋಟೆಯ ಮಾರಮ್ಮ ದೇವಸ್ಥಾನದ ವರೆಗೆ ಕೇವಲ 15ಕಿಮೀ ಸಂಚರಿಸಲು ವಾಹನ ಸವಾರರಿಗೆ ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಹೆದ್ದಾರಿಯ ಕಾಮಗಾರಿ ಅರೆ ಬರೆಯಾಗಿದ್ದು, ಹೆದ್ದಾರಿಯು ತಗ್ಗು ದಿನ್ನೆಗಳಿಂದ ಕೂಡಿದೆ.

ಸಿರುಗುಪ್ಪ ತಾಲ್ಲೂಕು ಅಂತರ ರಾಜ್ಯ ರಸ್ತೆಗಳನ್ನು ಸಂಪರ್ಕಿಸುವ ಮುಖ್ಯ ಕೇಂದ್ರವಾಗಿರುವುದರಿಂದ ಭಾರೀ ವಾಹನ ಸೇರಿದಂತೆ ಬಸ್, ಕಾರು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಆದರೆ ಇಲ್ಲಿನ ಅರೆಬರೆ ಕಾಮಗಾರಿ, ಸೇತುವೆ ನಿರ್ಮಾಣಕ್ಕೆ ಮಾಡಿದ ತಿರುವುಗಳು ಹಾಗೂ ತಗ್ಗು ಗುಂಡಿಗಳಿಂದ ವಾಹನ ಸವಾರರು ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದು, ಕೈಕಾಲು ಮುರಿದುಕೊಂಡು ಹಾಗೂ ಜೀವ ಕಳೆದುಕೊಂಡು ಉದಾಹರಣೆಗಳು ಸಾಕಷ್ಟಿವೆ.

ಹೆದ್ದಾರಿ ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ 500 ಮೀಟರ್ ಗೆ ಒಂದು ಕಡೆ ರಸ್ತೆ ಅಗಲೀಕರಣಗೊಳಿಸಿ ಮಣ್ಣು ತೋಡಿದ್ದು ಬಿಟ್ಟರೆ ಕಾಮಗಾರಿ ಪ್ರಾರಂಭದಲ್ಲಿ ಎಲ್ಲಿತ್ತೋ ಅಲ್ಲಿಯೇ ಇದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಹೆದ್ದಾರಿಯ ಕಾಮಗಾರಿಯನ್ನು ಹೈದರಾಬಾದಿನ ಆರ್ ಎಂ ಎನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದು, ಮಾರ್ಚ್ 2023ಕ್ಕೆ ಮುಗಿಸಬೇಕಿತ್ತು. ಆದರೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಮತ್ತೆ 9 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರು, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

Advertisement

ಮಳೆ ಬಂದರೆ ಸಾಕು ತಗ್ಗುದಿನ್ನೆಗಳಲ್ಲಿ ನೀರು ನಿಂತು ಕೆಸರುಗದ್ದೆಯಂತಾಗುವುದು ಹಾಗೂ ಧೂಳಿನಿಂದ ಕೂಡಿರುವುದು ಸಾರ್ವಜನಿಕರ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ.

ಹೆದ್ದಾರಿಯಲ್ಲಿ ಒಟ್ಟು49ಅಪಘಾತಗಳು ನಡೆದಿದ್ದು, 23ಜನ ಸಾವನ್ನಪ್ಪಿದ್ದು, 26ಜನ ಗಾಯಗೊಂಡಿದ್ದಾರೆ. ಒಂದೇ ವರ್ಷದಲ್ಲಿ 23ಸಾವುಗಳು ಸಂಭವಿಸಿದ್ದು, ಹೆದ್ದಾರಿಯು ಸಾವಿನ ದಾರಿಯೆಂದು ಸಾಬೀತಾಗಿರುತ್ತದೆ.

ಈ ಹೆದ್ದಾರಿಯಲ್ಲಿ ತೆಕ್ಕಲಕೋಟೆಯಿಂದ ಸಿರುಗುಪ್ಪಗೆ ತೆರಳುತ್ತಿದ್ದರೆ ಹೊಂಡ ಗುಂಡಿಗಳಿಂದ ಧೂಳು ದುಮ್ಮಿನಿಂದ ನರಕಯಾತನೆಯನ್ನು ವಾಹನ ಸವಾರರು ಪ್ರತಿನಿತ್ಯವೂ ಅನುಭವಿಸುವಂತಾಗಿದೆ ಎಂದು ತೆಕ್ಕಲಕೋಟೆಯ ದ್ವಿಚಕ್ರ ವಾಹನ ಸವಾರ ಕೆ.ಹುಸೇನಪ್ಪ, ರಾಜಸಾಬ್ ತಿಳಿಸಿದ್ದಾರೆ.

ವಿದ್ಯುತ್ ಹಾಗೂ ನೀರು ಸರಬರಾಜು ಕಾಮಗಾರಿಗಳ ಅನುಮೋದನೆ ವಿಳಂಬ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಕಾಮಗಾರಿ ನಿಧಾನವಾಗಿದ್ದು, 2024ರ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ ವಿಭಾಗದ ಇ.ಇ. ನರೇಂದ್ರ ತಿಳಿಸಿದ್ದಾರೆ.

ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಸಚಿವರು ಹಾಗೂ ಮೂವರು ಸಂಸದರ ಜೊತೆ ಚರ್ಚಿಸಲಾಗಿದೆ. ಅಂತಿಮವಾಗಿ ಗುತ್ತಿಗೆದಾರರಿಗೆ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಎಂ.ನಾಗರಾಜ ತಿಳಿಸಿದ್ದಾರೆ.

-ಆರ್.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next