ಪುಂಜಾಲಕಟ್ಟೆ: ಬಂಟ್ವಾಳ- ಮೂಡುಬಿದಿರೆ ರಸ್ತೆಯಲ್ಲಿ ಬಂಟ್ವಾಳದಿಂದ ಪುಚ್ಚೆಮೊಗರುವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿಗಳು ತುಂಬಿದ್ದು ಅದರಲ್ಲೂ ಸೊರ್ನಾಡುನಿಂದ ಮಾಡಮೆವರೆಗಿನ ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿದೆ.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು ಬಂಟ್ವಾಳದಿಂದ ಮೂಡುಬಿದಿರೆ, ಕಾರ್ಕಳ, ಉಡುಪಿ, ವಾಮದ ಪದವು, ವೇಣೂರು, ನಾರಾವಿ, ಪುಂಜಾಲಕಟ್ಟೆ ಗಳಿಗೆ ಈ ರಸ್ತೆ ಯಿಂದ ಸಂಪರ್ಕವಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಇದರಲ್ಲಿ ಸಾಗುತ್ತವೆ.
ಈ ರಸ್ತೆ ಸಂಪೂರ್ಣ ಡಾಮರೀಕರಣಗೊಂಡು ಹಲವು ವರ್ಷಗಳೇ ಕಳೆದಿದೆ. ಕಳೆ ಬಾರಿ ಬಂಟ್ವಾಳದಿಂದ ಸೊರ್ನಾಡುವರೆಗೆ, ಪುಚ್ಚೆಮೊಗರುನಿಂದ ಮಾಡಮೆ ವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿತ್ತು. ಕಾರ್ಕಳದ ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿ ಕೊನೆಗೆ ಹಾಗೋ ಹೀಗೋ ಕಾಮಗಾರಿ ಮುಗಿಸಿದ್ದರು. ಇದೀಗ ಮಳೆಗಾಲದಲ್ಲಿ ಹೊಂಡ ಗುಂಡಿ ಉಂಟಾಗಿದೆ.
ಬಂಟ್ವಾಳದಿಂದ ಮುಂದಕ್ಕೆ ಸೊರ್ನಾಡು ಜಂಕ್ಷನ್‌ವರೆಗೆ ಉತ್ತಮ ರಸ್ತೆ ಇದ್ದರೂ ಅಲ್ಲಿಂದ ಮುಂದಕ್ಕೆ ಅಣ್ಣಳಿಕೆ ಜಂಕ್ಷನ್‌ನಲ್ಲಿ ಡಾಮರು ಎದ್ದುಹೋಗಿ ಹೊಂಡ ಗುಂಡಿ ಉಂಟಾಗಿದೆ. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿ ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರರಿಗೆ ಕೆಸರು ನೀರಿನ ಸ್ನಾನ ಸೃಷ್ಟಿಯಾಗಿದೆ. ಅಣ್ಣಳಿಕೆ, ಕೊಲ್ಲ , ರಾಯಿ, ಕುದ್ರೊಳಿಗಳಲ್ಲಿ ರಸ್ತೆ ತೀರಾ ಹದಗೆಟ್ಟಿದೆ.
ನಿತ್ಯ ಸಂಚಾರದ ಬಸ್ ಚಾಲಕರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೊಂಡ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾದ ಬಗ್ಗೆಯೂ ವರದಿಯಾಗುತ್ತಿದೆ. ಸೊರ್ನಾಡು- ಅಣ್ಣಳಿಕೆ ನಡುವೆ ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು ಜತೆಗೆ ರಸ್ತೆ ಬದಿ ಬಳ್ಳಿ ಹರಡಿದೆ. ರಸ್ತೆ ಸಮಸ್ಯೆ ಬಗ್ಗೆ ರಾಯಿ ಗ್ರಾಮ ಪಂಚಾಯತ್ ಆಡಳಿತ ಲೋಕೋಪಯೋಗಿ ಇಲಾಖೆಯ ಗಮನ ಸೆಳೆದಾಗ ಮಳೆಗಾಲ ಮುಗಿದ ಬಳಿಕ ರಸ್ತೆ ಸರಿಪಡಿಸಲಾಗುವುದು ಎಂಬ ಉತ್ತರ ನೀಡಿದ್ದಾರೆ ಎಂದು ಪಂಚಾಯತ್ ತಿಳಿಸಿದೆ. ಈ ರಸ್ತೆಯ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಸ್ತೆ ಹೊಂಡಗಳಿಂದ ನಿತ್ಯ ಪ್ರಯಾಣ ಕಷ್ಟವಾಗಿದೆ. ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಿಯಾಗಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು ಹೇಳಿದರು.
ಇಲಾಖೆಯ ದಿವ್ಯ ಮೌನ
ಮೂಡುಬಿದಿರೆಯಿಂದ ಪುಚ್ಚೆಮೊಗರು, ಸಂಗಬೆಟ್ಟು, ಸಿದ್ದಕಟ್ಟೆ, ಮಾಡಮೆವರೆಗೆ ರಸ್ತೆ ಅಭಿವೃದ್ಧಿಗೊಳಿಸಲಾಗಿದ್ದು,ರಸ್ತೆ ಉತ್ತಮವಾಗಿದೆ. ಮಾಡಮೆಯಿಂದ ಸೊರ್ನಾಡುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯದೆ ಭಾರೀ ಸಮಸ್ಯೆ ಉಂಟಾಗಿದೆ. ಕಳೆದ ವರ್ಷ ಈ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ದೊರಕಿದ್ದು, ಅಣ್ಣಳಿಕೆಯಿಂದ ರಾಯಿ ವರೆಗೆ ಕಾಮಗಾರಿಗೆ ಶಿಲಾನ್ಯಾಸವೂ ನೆರವೇರಿತ್ತು. ಕಾರ್ಕಳದ ಗುತ್ತಿಗೆದಾರರಿಗೆ ಗುತ್ತಿಗೆ ವಹಿಸಲಾಗಿತ್ತು. ವಿಧಾನಸಭಾ ಚುನಾವಣೆ ಬಳಿಕ ಕಾಮಗಾರಿ ಆರಂಭವಾಗುತ್ತದೆಂದು ಲೋಕೋಪಯೋಗಿ ಇಲಾಖೆ ತಿಳಿಸಿತ್ತು. ಆದರೆ ಇದೀಗ ಇಲಾಖೆ ಮೌನ ವಹಿಸಿದೆ.