Advertisement
ಬಂಟ್ವಾಳ-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ತಾಲೂಕಿನಲ್ಲಿ ಹಾದು ಹೋಗುತ್ತಿದೆ. ಆದರೆ ಈ ರಸ್ತೆಗೆ ಸಮರ್ಪಕ ರಸ್ತೆ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ರಸ್ತೆ ಪಕ್ಕವೇ ನೀರು ಹರಿದು ಹೋಗುತ್ತಿದೆ. ನೆಪ ಮಾತ್ರಕ್ಕೆ ಚರಂಡಿ ಇದ್ದರೂ ನೀರು ಮಾತ್ರ ರಸ್ತೆ ಸಮೀಪದಿಂದ ಹಾಗೂ ರಸ್ತೆಯ ಮೇಲೆ ಹರಿದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ.
ಶಿರಾಡಿ ಘಾಟ್ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಹೆಚ್ಚಿನ ವಾಹನಗಳು ಚಾರ್ಮಾಡಿ ಮೂಲಕ ತೆರಳುತ್ತಿವೆ. ವಾಹನ ದಟ್ಟಣೆ ಹೆಚ್ಚಾಗಿದ್ದು, ಇದೀಗ ರಸ್ತೆಯ ಮೇಲೆ ನೀರು ಹರಿದು ಹಾಗೂ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆಗೆ ಹಾನಿಯಾಗುವ ಸಂಭವ ಹೆಚ್ಚಾಗಿದೆ. ರಸ್ತೆಗಳ ಮೇಲೆ ಹೊಂಡ ಉಂಟಾದಲ್ಲಿ ವಾಹನ ಸವಾರರು ಇನ್ನಷ್ಟು ಕಷ್ಟಪಡಬೇಕಾದ ಸಂದರ್ಭ ಎದುರಾಗಲಿದೆ.
Related Articles
ರಸ್ತೆ ಅಂಚುಗಳು ಈಗಾಗಲೇ ಸವೆದಿದ್ದು, ಹಲವೆಡೆ ಅಪಾಯದ ಸ್ಥಿತಿಯಲ್ಲಿದೆ. ಮುಖ್ಯವಾಗಿ ಬೃಹತ್ ಎತ್ತರದ ಅಂಚುಗಳಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಏಟು ಮಾಡಿಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗಿವೆ. ಮುಖ್ಯವಾಗಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆ ಅಂಚುಗಳಲ್ಲಿ ವಾಹನ ಹೆಚ್ಚು ಚಾಲನೆ ಮಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹೊಂಡ ಅಥವಾ ಅಂಚು ತಪ್ಪಿಸಲು ವಾಹನಗಳನ್ನು ತಿರುಗಿಸಿದರೂ ಆಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
Advertisement
ರಸ್ತೆ ಬದಿ ನೀರುತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಹುತೇಕ ಕಡೆಗಳಲ್ಲಿ ನೀರು ರಸ್ತೆ ಬದಿ ನಿಂತಿರುತ್ತದೆ. ಮುಖ್ಯವಾಗಿ ಗುರುವಾಯನಕೆರೆ, ಸಂತೆಕಟ್ಟೆ, ಉಜಿರೆ, ಬೆಳ್ತಂಗಡಿ ಮೊದಲಾದ ಪ್ರದೇಶ ಗಳ ಇಕ್ಕೆಲಗಳಲ್ಲೂ ಇಂತಹ ಸಮಸ್ಯೆ ಸಾಮಾನ್ಯವಾಗಿದೆ. ಇವುಗಳಿಗೆ ಸಮರ್ಪಕ ಪರಿಹಾರ ಒದಗಿಸಬೇಕಿದೆ. ನೀರು ಚರಂಡಿ ಸೇರಿದಲ್ಲಿ ಅನುಕೂಲ
ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ಇದ್ದರೂ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿರುವುದು ನೀರು ರಸ್ತೆಯ ಮೇಲೆ ಹರಿಯಲು ಕಾರಣವಾಗಿದೆ. ಕಾಶಿಬೆಟ್ಟು ಮೊದಲಾದೆಡೆ ಚರಂಡಿ ಪಕ್ಕದಲ್ಲೇ ಇದ್ದರೂ ನೀರು ಮಾತ್ರ ರಸ್ತೆ ಬದಿ ಹರಿಯುತ್ತಿದೆ. ಕೆಲವು ಪ್ರದೇಶಗಳಲ್ಲಿ ಖಾಸಗಿಯವರು ರಸ್ತೆಗಾಗಿ ಸಮರ್ಪಕ ಕೊಳವೆ ಆಥವಾ ಮೋರಿ ನಿರ್ಮಿಸದೆ ನೀರು ಹರಿಯುವ ದಿಕ್ಕು ಬದಲಾಗುತ್ತಿದೆ. ಚರಂಡಿಯನ್ನು ಸರಿಪಡಿಸಿ, ಸಮರ್ಪಕವಾಗಿ ನೀರು ಹರಿಯಲು ಸಣ್ಣ ಬದುಗಳ ವ್ಯವಸ್ಥೆ ಮಾಡಿದಲ್ಲಿ ರಸ್ತೆ ಮೇಲೆ ನೀರು ಹರಿಯುವುದನ್ನು ತಪ್ಪಿಸಬಹುದು. ಆದಷ್ಟು ಬೇಗ ಕ್ರಮ
ಒಂದು ಮಳೆ ಬಿದ್ದ ಕೂಡಲೇ ಚರಂಡಿ ಸರಿಪಡಿಸುವ ಕಾಮಗಾರಿ ನಡೆಸಲಾಗುತ್ತದೆ. ಮಳೆ ಆರಂಭವಾಗಿರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಒಂದು ತಂಡ ಚರಂಡಿ ವ್ಯವಸ್ಥೆ ಸರಿಪಡಿಸಲು ನಿಯೋಜನೆಯಾಗಿದ್ದು, ಆದಷ್ಟು ಬೇಗ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗುವುದು.
-ಯಶವಂತ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ
ಸಹಾಯಕ ಕಾರ್ಯಪಾಲಕ
ಅಭಿಯಂತರ