ಕಿನ್ನಿಗೋಳಿ: ಕಿನ್ನಿಗೋಳಿ – ಗುತ್ತಕಾಡು ಕಾಂಕ್ರೀಟ್ ರಸ್ತೆಯಂಚಿನಲ್ಲಿ ಹೊಂಡಗಳಿದ್ದು ಅಪಾಯಕಾರಿಯಾಗಿದೆ. ಈ ರಸ್ತೆ ಉತ್ತಮವಾಗಿದ್ದು, ಮಳೆಗಾಲದಲ್ಲಿ ಮಳೆ ನೀರಿನಿಂದ ಕೆಲವು ಕಡೆಗಳಲ್ಲಿ ರಸ್ತೆಯ ಅಂಚು ಕೊಚ್ಚಿಹೋಗಿದೆ. ಒಂದು ವಾಹನ ಇನ್ನೊಂದು ವಾಹನಕ್ಕೆ ದಾರಿ ಮಾಡಿಕೊಡಲು ಬದಿಗೆ ತೆರಳಿದರೆ ಹೊಂಡಕ್ಕೆ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗುತ್ತಕಾಡು ರಸ್ತೆಯ ಕುದುಮ ಲಚ್ಚಿಲ್ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಯ ಎರಡು ಬದಿಯಲ್ಲೂ ಸಹ ಹೊಂಡಗಳು ಇವೆ. ದಿನನಿತ್ಯ ಸಂಚರಿಸುವ ಪಾದಚಾರಿಗಳಿಗೂ ಸಹ ಇದು ತಲೆನೋವಾಗಿ ಪರಿಣಮಿಸಿದೆ.
ಚರಂಡಿ ನಿರ್ವಹಣೆ ಇಲ್ಲದೆ ಸಮಸ್ಯೆ
ಗ್ರಾಮೀಣ ಭಾಗದಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ರಸ್ತೆಗಳು ಇವೆ ಆದರೇ ಅದರ ರಸ್ತೆ ಬದಿಯ ಚರಂಡಿಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ಮಳೆಗಾಲಕ್ಕೆ ಮೊದಲು ರಸ್ತೆಯ ಬದಿಯಿರುವ ಚರಂಡಿ ದುರಸ್ತಿ ಕಾರ್ಯ, ಕಸ -ಕಡ್ಡಿ ತೆಗೆದು ಮಳೆ ನೀರು ಸರಾಗ ಹರಿದುಹೋಗುವಂತೆ ಮಾಡಿದರೇ ಇಂತಹ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ.
ಚರಂಡಿ ನಿರ್ವಹಣೆ ಮಾಡಿ ಎಂದು ಹೇಳುವವರಿಲ್ಲ ?
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಚುನಾವಣೆ ನಡೆಯದೆ ಇರುವುದರಿಂದ ಚುನಾಯಿತ ಪ್ರತಿನಿಧಿಗಳು ಇಲ್ಲ. ಎಲ್ಲ ಉಸ್ತುವಾರಿ ಅಧಿಕಾರಿಗಳದ್ದೇ ಆಗಿದೆ. ಆದರೇ ಕಳೆದ ಮೂರು ತಿಂಗಳಿನಲ್ಲಿ ಮೂವರು ಅಧಿಕಾರಿಗಳು ಬಂದರು. ಇದಕ್ಕೆ ಪೂರ್ಣಾವಧಿಯ ದಕ್ಷ ಅಧಿಕಾರಿಗಳು ಬೇಕಾಗಿದ್ದಾರೆ ಹಾಗೂ ಕೆಲಸ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕಾಗಿದೆ.
– ಎಂ.ಡಿ. ಬಾಷಾ ಅಸ್ಸಾದಿ ಕಿನ್ನಿಗೋಳಿ, ಸಾಮಾಜಿಕ ಕಾರ್ಯಕರ್ತ