ದಾಂಡೇಲಿ: ದಟ್ಟ ಕಾಡಿನ ನಡುವೆ ಇರುವ ಕುಳಗಿ-ಭಾಗವತಿ ರಸ್ತೆಯದು. ಅಂದ ಹಾಗೆ ಈ ರಸ್ತೆಯ ಬದಿಯಲ್ಲಿ ಸಾಕಷ್ಟು ವನ್ಯಪ್ರಾಣಿಗಳು ಕಾಣಿಸುವುದು ಸರ್ವೇ ಸಾಮಾನ್ಯ. ವನ್ಯಪ್ರಾಣಿಗಳೆಂದರೆ ಜಿಂಕೆ, ಕಾಡೆಮ್ಮೆ, ಕಾಡುಕೋಣ, ನರಿ ಹೀಗೆ ಮೊದಲಾದವುಗಳು. ಅದೇ ರೀತಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಆನೆಗಳ ದರ್ಶನವೂ ಈ ರಸ್ತೆಯಲ್ಲಿ ಕಾಣಸಿಗುತ್ತದೆ.
ಅಂದಹಾಗೆ ಮಂಗಳವಾರವು ಮೂರು ಆನೆಗಳು ರಸ್ತೆ ದಾಟಿದ ಅಪೂರ್ವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೃಹತ್ ಗಾತ್ರದ ಆನೆ ಎಂದು ನಡುರಸ್ತೆಯಲ್ಲಿ ಬಂದು ನಿಂತು, ಉಳಿದೆರಡು ಆನೆಗಳು ಬರುವುದನ್ನು ಕಾದು, ಅವುಗಳು ಬಂದ ನಂತರ ರಸ್ತೆ ದಾಟಿದೆ.
ಆನೆಯನ್ನು ನೋಡಿದೊಡನೆಯೇ ಆ ರಸ್ತೆಯಲ್ಲಿ ತಮ್ಮ ತಮ್ಮ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮುಂದಕ್ಕೆ ಹೋಗಲಾಗದೇ ಆ ಕಡೆ ಇದ್ದವರು ಅಲ್ಲೇ, ಈ ಕಡೆ ಇದ್ದವರು ಇಲ್ಲೇ ಎಂದು ಸ್ವಲ್ಪ ಹೊತ್ತು ಕಾದು, ದೂರದಿಂದಲೆ ಆನೆಗಳ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಒಟ್ಟಿನಲ್ಲಿ ಆನೆಗಳನ್ನು ನೋಡುವುದೇ ಅಂದ ಮತ್ತು ಚಂದ ಏನಂತೀರಾ.