ಪರ್ಯಾಯ ಪೀಠಾರೋಹಣಗೈಯ್ಯಲಿ ರುವ ಶ್ರೀ ಕೃಷ್ಣ ಮಠದ ಸ್ವಾಮೀಜಿಗಳು ಕಾಪು ದಂಡತೀರ್ಥ ಮಠಕ್ಕೆ ಬಂದು, ಆಚಾರ್ಯ ಮಧ್ವರು ದಂಡದಿಂದ ಸೃಷ್ಟಿಸಿದ ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿ ಬಳಿಕ ಜೋಡುಕಟ್ಟೆಗೆ ತೆರಳಿ ಪರ್ಯಾಯ ಮೆರವಣಿಗೆ ನಡೆಸುವುದು ವಾಡಿಕೆಯಾಗಿದ್ದು, ದಂಡತೀರ್ಥ ಮಠವು ಕೃಷ್ಣಾಪುರ ಮಠದ ಆಡಳಿತದಲ್ಲಿರುವುದರಿಂದ ಈ ಬಾರಿಯ ಪರ್ಯಾಯಕ್ಕೆ ವಿಶೇಷ ಮಹತ್ವ ಲಭಿಸಿದೆ.
ಸಂಪ್ರದಾಯದಂತೆ ಜ.17 ರಂದು ಮಧ್ಯರಾತ್ರಿ ಕಳೆದು ಮುಂಜಾನೆಯ ವೇಳೆಗೆ ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿ, ತೀರ್ಥಸ್ನಾನ ಮಾಡಲಿದ್ದಾರೆ. ಶ್ರೀ ಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು
ದಂಡತೀರ್ಥ ಮಠದಲ್ಲಿ ಸಿದ್ಧತೆ ನಡೆಸಲಾಗಿದೆ.
Advertisement
ಧಾರ್ಮಿಕ ಕಾರ್ಯಗಳು: ಶ್ರೀಗಳು ಆಪ್ತ ಶಿಷ್ಯರೊಡಗೂಡಿ ತೀರ್ಥಸ್ನಾನ ಪೂರೈಸಿದ ಬಳಿಕ ತಮ್ಮ ಕೆರೆಯ ತೀರ್ಥ ಕುಂಡದಿಂದ ತೀರ್ಥವನ್ನು ತುಂಬಿಸಿಕೊಂಡು ತಮ್ಮ ಪಟ್ಟದ ದೇವರ ಸಹಿತವಾಗಿ ದಂಡತೀರ್ಥ ಮಠದ ಕುಂಜಿ ಗೋಪಾಲ ಕೃಷ್ಣ ದೇವರು, ಪರಿವಾರ ಸಹಿತ ರಾಮ ಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸುವರು. ಬಳಿಕ ತಮ್ಮ ದ್ವೈವಾರ್ಷಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸುತ್ತಾರೆ.ಇಲ್ಲಿ ತೀರ್ಥಸ್ನಾನ ನಡೆಸಿದ ಬಳಿಕ ಉಡುಪಿಗೆ ತೆರಳಿ, ಜೋಡು ರಸ್ತೆಯಲ್ಲಿ ಪೂಜೆ ನೆರವೇರಿಸಿ ಭವ್ಯ ಶೋಭಾಯಾತ್ರೆಯ ಮೂಲಕ ರಥಬೀದಿಗೆ ತೆರಳಿ, ಕನಕ ಕಿಂಡಿಯ ಮೂಲಕ ಪೊಡವಿಗೊಡೆಯ ಕೃಷ್ಣನನ್ನು ಸಂದರ್ಶಿಸಿ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ, ಬಳಿಕ ಸರ್ವಜ್ಞ ಪೀಠಾರೋಹಣಗೈದು ಶ್ರೀ ಕೃಷ್ಣ ಪೂಜಾ ಕೈಂಕರ್ಯದ ದೀಕ್ಷೆಯನ್ನು ಸ್ವೀಕರಿಸುತ್ತಾರೆ.
ದಂಡತೀರ್ಥ ಮಠವು ಶ್ರೀ ಕೃಷ್ಣಾಪುರ ಮಠದ ಅಧೀನದಲ್ಲಿದ್ದು ಆ ಕಾರಣದಿಂದ ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಬಂದಿದೆ. ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ದಂಡತೀರ್ಥ ಮಠ ಪ್ರತಿಷ್ಠಾನದ ಅಧ್ಯಕ್ಷ ಸೀತಾರಾಮ ಭಟ್ ಅವರ ನೇತೃತ್ವದಲ್ಲಿ ದಂಡತೀರ್ಥ ಮಠದಲ್ಲಿ ಆಚಾರ್ಯ ಏಕ ಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅದರೊಂದಿಗೆ ಆಚಾರ್ಯ ಮಧ್ವರ ಜೀವನ ಪಾಠದ ಅಧ್ಯಯನಕ್ಕಾಗಿ ಮಧ್ವ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಶ್ರೀ ಕೃಷ್ಣ ಮಠಕ್ಕೆ ಬರುವ ಭಕ್ತರು ಆಚಾರ್ಯ ಮಧ್ವರು ಪೂರ್ವಾಶ್ರಮದಲ್ಲಿ ಶಿಕ್ಷಣವನ್ನು ಪಡೆದಿರುವ ದಂಡತೀರ್ಥ ಮಠದತ್ತಲೂ ಸೆಳೆಯುವ ಪ್ರಯತ್ನ ದಂಡತೀರ್ಥ ಮಠ ಪ್ರತಿಷ್ಠಾನದಿಂದ ನಡೆಯುತ್ತಿದೆ.
Related Articles
Advertisement