ತೋಕೂರು: ಇಲ್ಲಿನ ಪಡುಪಣಂಬೂರು ಗ್ರಾ.ಪಂ.ನ ತೋಕೂರು ಬಳಿಯಲ್ಲಿ ಪಾದೂರು ಪೈಪ್‌ಲೈನ್ ಸಂದರ್ಭದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಮಳೆ ನೀರಿಗೆ ಕುಸಿದು ಬಿದ್ದಿದ್ದು, ಈಗ ತಾತ್ಕಾಲಿಕವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಐಎಸ್‌ಪಿಆರ್‌ಎಲ್ ಸಂಸ್ಥೆಯು ಪೈಪ್ ಲೈನ್ ನಡೆಸುವಾಗ ಕೃಷಿ ಭೂಮಿಗೆ ಮಳೆ ನೀರು ಹರಿಯುವುದನ್ನು ತಡೆಹಿಡಿಯಲು ತಾತ್ಕಾಲಿಕವಾಗಿ ತಡೆ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳೆದ 15 ದಿನಗಳ ಹಿಂದೆ ತಡೆಗೋಡೆಯ ಕುಸಿತದಿಂದ ಪ್ರದೇಶದ ಕೃಷಿ ಭೂಮಿಗೆ ಸಾಕಷ್ಟು ಹಾನಿಯಾಗಿತ್ತು. ಇತ್ತೀಚೆಗೆ ಪಡುಪಣಂಬೂರು ಗ್ರಾ.ಪಂ.ನ ಗ್ರಾಮ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಈಗ ತಡೆಗೋಡೆ ಕುಸಿತದ ಸುತ್ತಮುತ್ತ ಜೆಸಿಬಿ ಮೂಲಕ ಮಣ್ಣಿನ ಗುಡ್ಡವನ್ನು ನಿರ್ಮಿಸಿ ಮಳೆ ನೀರು ಕೃಷಿ ಭೂಮಿಗೆ ಹರಿಯಲು ತಡೆ ನೀಡಲಾಗಿದೆ. ಮರಳು ತುಂಬಿದ ಗೋಣಿ ಚೀಲಗಳನ್ನು ಸಹ ಸ್ಥಳದಲ್ಲಿ ಶೇಖರಿಸಿಡಲಾಗಿದೆ.
ಈ ಭಾಗದ ಸುಮಾರು 6 ಎಕ್ರೆ ಖಾಸಗಿ ಪ್ರದೇಶದಲ್ಲಿರುವ ಕೃಷಿ ತೋಟ, ಅಡಿಕೆಮರ, ತೆಂಗಿನ ಮರದ ತೋಟಗಳಿಗೆ ನೀರು ನುಗ್ಗಿರುವುದರಿಂದ ತೋಟದಲ್ಲಿ ಕೃತಕ ನೆರೆ ನಿರ್ಮಾಣವಾಗಿತ್ತು. ಸ್ಥಳಕ್ಕೆ ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಮತ್ತು ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್ ಹಾಗೂ ಎಂಜಿನಿಯರ್ ಪ್ರಶಾಂತ್ ಆಳ್ವ ಭೇಟಿ ನೀಡಿ ಪರಿಶೀಲಿಸಿದರು.
ತಡೆಗೋಡೆಯನ್ನು ಕೆಂಪು ಕಲ್ಲಿನಲ್ಲಿ ಕಟ್ಟಿದ್ದರಿಂದ ಮಳೆ ನೀರಿನ ಒತ್ತಡದಿಂದ ಕುಸಿತ ಕಂಡಿದೆ. ಮಳೆ ನಿಂತ ಅನಂತರ ಶಾಶ್ವತ ಗೋಡೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ಕಂಪೆನಿಯ ಪರವಾಗಿ ಗುತ್ತಿಗೆದಾರರು ನೀಡಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿನ ರಸ್ತೆಯ ಡಾಮರೀಕರಣವು ಪೈಪ್‌ಲೈನ್ ಕಾಮಗಾರಿಗಾಗಿ ಉಳಿದಿದ್ದು, ಅದನ್ನು ಸಹ ಸಂಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.