Advertisement

ಆ. 27ರೊಳಗೆ ಆರ್‌ಟಿಸಿ ವಿತರಣೆ: ಪಿಡಿಒಗಳಿಗೆ ಸೂಚನೆ

01:08 PM Aug 26, 2018 | |

ಬೆಳ್ತಂಗಡಿ: ತಾಲೂಕಿನ ಪ್ರತಿ ಗ್ರಾ.ಪಂ.ಗಳಲ್ಲೂ ಆರ್‌ಟಿಸಿ ನೀಡುವ ಕುರಿತು ಆ. 27ರೊಳಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಮ್ಮಲ್ಲಿ ಆರ್‌ಟಿಸಿ ನೀಡುವ ಕುರಿತು ಪ್ರತಿ ಪಿಡಿಒಗಳು ತಹಶೀಲ್ದಾರ್‌ಗೆ ದೃಢೀಕರಣ ನೀಡಬೇಕು. ಜತೆಗೆ ಈ ಕುರಿತು ತಾ.ಪಂ. ಇಒ ಅವರು ಮುತುವರ್ಜಿ ವಹಿಸಬೇಕು ಎಂದು ಶಾಸಕ ಹರೀಶ್‌ ಪೂಂಜ ಅವರು ಸೂಚನೆ ನೀಡಿದರು.

Advertisement

ಅವರು ಶನಿವಾರ ಲಾೖಲ ಗ್ರಾ.ಪಂ. ಸಭಾಂಗಣದಲ್ಲಿ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಯ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜನರು ತಾಲೂಕು ಕಚೇರಿಗೆ ಬಂದು ಅಲೆದಾಡುವುದು ತಪ್ಪಬೇಕು ಎಂದು ಸರಕಾರ ಸೌಲಭ್ಯ ನೀಡಿದ್ದು, ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುಂದಿನ ಒಂದು ತಿಂಗಳಲ್ಲಿ ತಾಲೂಕು ಕಚೇರಿಯಲ್ಲಿ ಯಾವ ಗ್ರಾ.ಪಂ.ನವರು ಬಂದು ಹೆಚ್ಚಾಗಿ ಆರ್‌ಟಿಸಿ ತೆಗೆಯುತ್ತಾರೆ ಎಂದು ಗಮನಿಸಿ, ಅಂತಹ ಪಿಡಿಒಗಳಿಗೆ ಮೆಮೊ ನೀಡಬೇಕು ಎಂದು ತಹಶೀಲ್ದಾರ್‌ ಮದನ್‌ ಮೋಹನ್‌ ಅವರಿಗೆ ತಿಳಿಸಿದರು.

ಮೆಸ್ಕಾಂಗೆ 86.72 ಲಕ್ಷ. ರೂ. ನಷ್ಟ
ಮೆಸ್ಕಾಂ ಎಂಜಿನಿಯರ್‌ ಶಿವಶಂಕರ್‌ ಮಾಹಿತಿ ನೀಡಿ, ತಾಲೂಕಿನಲ್ಲಿ ಈ ಬಾರಿ ಮಳೆಗೆ ಮೆಸ್ಕಾಂಗೆ ಒಟ್ಟು 86.72 ಲಕ್ಷ ರೂ. ನಷ್ಟ ಸಂಭವಿಸಿದೆ. ಹಾನಿಯಾದ 891 ವಿದ್ಯುತ್‌ ಕಂಬಗಳ ಪೈಕಿ 850 ದುರಸ್ತಿಯಾಗಿದೆ. ಜತೆಗೆ ಹಾನಿಯಾದ 96 ವಿದ್ಯುತ್‌ ಪರಿವರ್ತಕಗಳಲ್ಲಿ 92 ದುರಸ್ತಿಯಾಗಿವೆ ಎಂದು ಮಾಹಿತಿ ನೀಡಿದರು.

ಫಾಗಿಂಗ್‌
ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಂಕ್ರಾಮಿಕ ರೋಗ ತಡೆಯಲು ಫಾಗಿಂಗ್‌ ನಡೆಸುವುದಕ್ಕೆ ಕುಂಟು ನೆಪವೊಡ್ಡಿ ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಪ್ರತಿ ಗ್ರಾಮ ಪಂಚಾಯತ್‌ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಫಾಗಿಂಗ್‌ ನಡೆಸುವುದಕ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರ ಮೂಲಕ ಊರಿನ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುವಂತೆ ಸಲಹೆ ನೀಡಿದರು.

Advertisement

ದೂರು ನೀಡಿ
ಇಂದಬೆಟ್ಟಿನ ಕಲ್ಲಾಜೆಯಲ್ಲಿ ಖಾಸಗಿ ವ್ಯಕ್ತಿಯಿಂದಾಗಿ ರಸ್ತೆಗೆ ಹಾನಿಯಾಗಿರುವ ಕುರಿತು ಪಿಡಿಒ ಅವರು ಪೊಲೀಸರಿಗೆ ದೂರು ನೀಡದೇ ಇರುವುದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರಿ ಸೊತ್ತುಗಳಿಗೆ ಖಾಸಗಿಯವರು ಹಾನಿ ಮಾಡಿದರೆ ಅಂಥವರ ವಿರುದ್ಧ ತತ್‌ ಕ್ಷಣ ಕ್ರಮ ಕೈಗೊಳ್ಳಿ. ಯಾವ ರಾಜಕೀಯ ಒತ್ತಡಗಳಿಗೂ ಮಣಿಯಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯತ್‌ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ.
ಸೆಬಾಸ್ಟಿಯನ್‌, ಸದಸ್ಯ ಸುಧಾಕರ್‌, ಇಒ ಕುಶಾಲಪ್ಪ, ಲಾೖಲ ಗ್ರಾಮ ಪಂಚಾಯತ್‌ ಅಧ್ಯಕ್ಷೆ ವೀಣಾ ರಾವ್‌, ಉಪಾಧ್ಯಕ್ಷ ಗಿರೀಶ್‌ ಡೋಂಗ್ರೆ ಮೊದಲಾದವರಿದ್ದರು.

ಹೆಚ್ಚಿನ ಪರಿಹಾರಕ್ಕೆ ಶ್ರಮಿಸಿ
ತಾ|ನಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಗ್ರಾಮ ಕರಣಿಕರ ವರದಿಯನ್ನು ಆಧರಿಸಿ, ಪಂಚಾಯತ್‌ರಾಜ್‌ ಎಂಜಿನಿಯರ್‌ ಶೀಘ್ರ ವರದಿ ಸಿದ್ಧಪಡಿಸಬೇಕು. ಜತೆಗೆ ಮನೆ ಕುಸಿತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವೊದಗಿಸುವ ನಿಟ್ಟಿನಲ್ಲಿ ಅಧಿಕಾರಿ ಶ್ರಮಿಸಬೇಕು. ವಸತಿ ಯೋಜನೆಯಲ್ಲಿ ಅವಕಾಶವಿದ್ದರೆ ಅದಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ್‌ ಪೂಂಜ ತಿಳಿಸಿದರು.

ಮಳೆಯಿಂದಾಗಿ ದನದ ಹಟ್ಟಿಗೆ ಹಾನಿಯಾದರೆ ಯಾವುದೇ ಪರಿಹಾರವಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ, ಹಟ್ಟಿ ನಿರ್ಮಾಣವನ್ನು ನರೇಗಾದಲ್ಲಿ ಸೇರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಿ. ಹಾನಿಯಾಗಿರುವ ಕುರಿತು ವಿಎಗಳು ಪಿಡಿಒಗಳಿಗೆ ವರದಿ ನೀಡಿ, ತಾತ್ಕಾಲಿಕ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು. ಜತೆಗೆ ಶಾಲೆಗಳಿಗೆ ಹಾನಿ, ಅಂಗನವಾಡಿಗಳ ಹಾನಿಯ ಕುರಿತು ವರದಿ ನೀಡುವಂತೆಯೂ ತಿಳಿಸಿದರು.

ಅಡಿಕೆ ಕೊಳೆ‌ರೋಗ
ವಿಪರೀತ ಮಳೆಯಿಂದಾಗಿ ತಾ|ನಲ್ಲಿ ಅಡಿಕೆ ಕೊಳೆ‌ರೋಗ ವ್ಯಾಪಕವಾಗಿದ್ದು, ಪರಿಹಾರ ನೀಡುವ ನಿಟ್ಟಿನಲ್ಲಿ ಇಲಾಖೆಯ
ಸ. ನಿರ್ದೇಶಕರು ಪ್ರತಿ ಗ್ರಾ.ಪಂ.ಗಳಿಗೂ ತೆರಳಿ ಬೆಳೆಗಾರರಿಂದ ಅರ್ಜಿ ಪಡೆಯಬೇಕು. ಈ ಕಾರ್ಯ ಸೆ. 20ರೊಳಗೆ ಪೂರ್ಣಗೊಳ್ಳಬೇಕಾಗಿದ್ದು, ಯಾವ ಗ್ರಾ.ಪಂ.ಗೆ ಯಾವ ದಿನ ಭೇಟಿ ನೀಡಲಾಗುತ್ತದೆ ಎಂದು ಪತ್ರಿಕೆಗಳಲ್ಲಿ ಮಾಹಿತಿ ನೀಡುವಂತೆ ಶಾಸಕ ಹರೀಶ್‌ ಪೂಂಜ ಸೂಚನೆ ನೀಡಿದರು.  ತಾ|ನಲ್ಲಿ ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ರಸ್ತೆಗಳು ತೀರಾ ಹದಗೆಟ್ಟಿವೆ. ಒಟ್ಟು 5 ಸೇತುವೆಗಳಿಗೆ ಹಾನಿ, 9 ಕಡೆ ಗಂಭೀರ
ಕುಸಿತ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ ಮಾಹಿತಿ ನೀಡಿದಾಗ, ಅದರ ಪೂರ್ಣ ವಿವರ ನೀಡುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next