Advertisement
ಕುಂಪಲ ಮೂರುಕಟ್ಟ ಬಲ್ಯದ ಅಮಿತಾ ಧರ್ಮೇಶ್ ಅವರ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಸಂಪೂರ್ಣ ಹಾನಿಯಾಗಿದೆ. ಬ್ಯಾಂಕ್ ಸಾಲ ಮಾಡಿ ಮನೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಇದೀಗ ಮನೆ ಸಂಪೂರ್ಣ ಕುಸಿದಿದ್ದು ಅಪಾರ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಸದಸ್ಯರಾದ ಹರೀಶ್ ಕುಂಪಲ, ಕಿಶೋರ್ ಡಿ.ಕೆ. ಮುಖಂಡರಾದ ಯಶವಂತ ಅಮೀನ್, ಪ್ರವೀಣ್ ಬಗಂಬಿಲ ಭೇಟಿ ನೀಡಿದರು.
ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಸೇವಂತಿಗುಡ್ಡೆಯಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ವಿಶು ಅವರ ಮನೆಗೆ ಭಾಗಶಃ ಹಾನಿ ಯಾದರೆ, ಹಲಿಮಮ್ಮ ಮನೆಯೂ ಹಾನಿ ಗೀಡಾಗಿದ್ದು, ಜೋಸೆಫ್ ಡೇಸಾ ಅವರ ತಡೆಗೋಡೆ ಹಾನಿಯಿಂದ 7 ಲಕ್ಷ ರೂ. ನಷ್ಟವಾಗಿದ್ದರೆ, ಅವರ ಮನೆ ಕುಸಿತದ ಭೀತಿಯಲ್ಲಿದೆ. ಕಲ್ಲಾಪು ಪಟ್ಲದಲ್ಲಿ ವಿನಯ ಅವರ ಮನೆಯ ತಡೆಗೋಡೆ ಬಿದ್ದು, ಪೆರ್ಮನ್ನೂರು ಬಳಿ ಮಹಮ್ಮದ್ ಅವರ ಮನೆಗೆ ಹಾನಿಯಾಗಿದೆ. ತಲಪಾಡಿ ಹರೀಶ್ ಮನೆಯ ಛಾವಣಿ ಹಾರಿ ಹೋಗಿದ್ದು, ಅಬೂಬಕ್ಕಾರ್ ಸಿದ್ದಿಕ್ ಅವರ ಕಾಂಪೌಂಡ್ ಹಾಲ್ ಬಿದ್ದು ಹಾನಿಯಾಗಿದೆ. ಅಂಬ್ಲಿಮೊಗರು ಗ್ರಾಮದಲ್ಲಿ ಸ್ವಯಂಪ್ರಭಾ ಅವರ ಮನೆ ಬಳಿ ಇದ್ದ ಕೊಟ್ಟಿಗೆಗೆ ಹಾನಿಯಾಗಿದೆ. ಕೊಣಾಜೆ ಗ್ರಾಮದ ಪಟ್ಟೋರಿ ಎಂಬಲ್ಲಿ ಸೆಫಿಯಾ ಅವರ ಮನೆಗೆ ಕಾಂಪೌಂಡ್ ಕುಸಿದು ಭಾಗಶಃ ಹಾನಿಯಾಗಿದೆ.
ಉಳ್ಳಾಲ ಸಹಿತ ಸುತ್ತಮುತ್ತ ಮಂಗಳವಾರ ಬೆಳಗ್ಗಿನಿಂದ ಸಂಜೆಯ ವರೆಗೆ ನಿರಂತರವಾಗಿ ಮಳೆ ಸುರಿದಿದೆ. ಕೆಲವೆಡೆ ಪಾಕೃತಿಕ ವಿಕೋಪಗಳು ಸಂಭವಿಸಿದ್ದು, ವಿವಿಧೆಡೆ ಮನೆ, ರಸ್ತೆಗೆ ಹಾನಿಯಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದೆ ಕೆಲವೆಡೆ ಮಳೆ ನೀರು ರಸ್ತೆ ಮದ್ಯದಲ್ಲಿ ಹರಿದು ಪಾದಚಾರಿ ಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದೆ.
Related Articles
ತೊಕ್ಕೊಟ್ಟು ಜಂಕ್ಷನ್‌ನಿಂದ ಮಂಗಳೂರು ವಿ.ವಿ. ಸಂಪರ್ಕಿಸುವ ಚತುಷ್ಪಥ ರಸ್ತೆಯು ಕೆಲವು ಕಡೆ ಚರಂಡಿ ಸಮಸ್ಯೆಯಿಂದ ನೀರು ಮುಖ್ಯ ರಸ್ತೆಯಲ್ಲೇ ಹರಿಯಿತು.
Advertisement
ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಎರಡನೇ ಬಾರಿಗೆ ಮರು ಡಾಮರು ಹಾಕಿದ್ದರೂ ರಸ್ತೆಯಲ್ಲಿ ನೀರು ನಿಲ್ಲುವ ಕಾರಣ ವೇಗವಾಗಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾದರೆ, ಸ್ಥಳೀಯವಾಗಿ ಸಂಚರಿಸುವ ದ್ವಿಚಕ್ರ ವಾಹನ ಚಾಲಕರು ಕಷ್ಟಪಟ್ಟು ಸಂಚರಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟಿನಿಂದ ತಲಪಾಡಿವರೆಗೂ ವಿವಿಧೆಡೆ ರಸ್ತೆಯಲ್ಲಿ ನೀರಿನ ಸಮಸ್ಯೆ ಇದೆ.
ಅಂಬ್ಲಿಮೊಗರು ಗ್ರಾಮ ಸಹಿತ ಒಳರಸ್ತೆಗಳಲ್ಲೂ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದ್ದು, ಉಳ್ಳಾಲ ದೇವಸ್ಥಾನ ರಸ್ತೆಯಲ್ಲಿ ಹಲವು ವರುಷಗಳಿಂದ ಸಮಸ್ಯೆಯಿದ್ದರೂ ಸ್ಥಳಿಯಾಡಳಿತ ಸಂಸ್ಥೆಯಾಗಲಿ ಜನಪ್ರತಿನಿಧಿಗಳಾಗಲು ಸಮಸ್ಯೆಯನ್ನು ಬಗೆಹರಿಸಿಲ್ಲ. ತೊಕ್ಕೊಟ್ಟು ಜಂಕ್ಷನ್‌ನಲ್ಲಿಯೂ ಬಸ್ಸಿಗಾಗಿ ಕಾಯುವವರು ಕೆಸರು ನೀರಿನಲ್ಲಿ ನಿಲ್ಲುವಂತಾಗಿದೆ.
ಮೂಡುಬಿದಿರೆಯಲ್ಲಿ ಮಳೆ ಇಳಿಮುಖಮೂಡುಬಿದಿರೆ: ಸೋಮವಾರ, ಮಂಗಳವಾರ ಮಳೆ ಕೊಂಚ ಬಿರುಸಾಗಿ ಸುರಿದಿದ್ದರೆ ಬುಧವಾರ ಮಳೆಯ ರಭಸ ಇಳಿಮುಖವಾದಂತಿದೆ. ಆದರೆ ಬಿಟ್ಟು ಬಿಟ್ಟು ನಿರಂತರವಾಗಿ ಸುರಿದ ಮಳೆಯಿಂದಾಗಿ ರಾಜಕಾಲುವೆ, ತೋಡುಗಳಲ್ಲಿ ನಿಧಾನವಾಗಿ ನೀರಿನ ಹರಿವು ಕಂಡು ಬರುತ್ತಿದೆ. ಬಾವಿಗಳಲ್ಲಿ ನೀರಿನ ಮಟ್ಟ ಬಹಳ ಮೇಲಕ್ಕೇರಿದ್ದು ಹೊಲಗದ್ದೆಗಳಿಗೆ ನೀರು ಒದಗಿಸಲು ಸಹಕಾರಿಯಾಗಿದೆ. ಹಾನಿಯ ಚಿತ್ರಣ ಸಿಗುತ್ತಿಲ್ಲ. ಆದರೆ ಪೇಟೆಯಲ್ಲಿರುವ ಚರಂಡಿಗಳ ಹೂಳನ್ನು ತೆಗೆದು ಮಳೆ ನೀರಿನ ಸರಾಗ ಹರಿಯುವಿಕೆಗೆ ಅವಕಾಶ ಮಾಡಿಕೊಡುವ ಆಡಳಿತಾತ್ಮಕ ಜವಾಬ್ದಾರಿಯನ್ನು ಮಳೆ ಎಚ್ಚರಿಸಿದಂತಾಗಿದೆ. ಕೆಲವೆಡೆ ಮುಚ್ಚಿ ಹೋಗಿರುವ ಚರಂಡಿಗಳ ಅಸ್ತಿತ್ವವನ್ನು ಆಯಾಯ ವಾರ್ಡ್ ಸದಸ್ಯರು ಆಡಳಿತ ವ್ಯವಸ್ಥೆಗೆ ಮನವರಿಕೆ ಮಾಡಿಕೊಡದೇ ಇದ್ದರೆ ಮುಂದಿನ ಕಾರ್ಯಾಚರಣೆ ನನೆಗುದಿಗೆ ಬೀಳುವುದು ಸಹಜವಾಗಿದೆ. ಮುಂದುವರಿದ ಸಮುದ್ರದ ಅಬ್ಬರ
ಉಳ್ಳಾಲದ ಸೀಗ್ರೌಂಡ್ ಸಹಿತ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ ಯಲ್ಲಿ ಸಮುದ್ರದ ಅಬ್ಬರ ಮುಂದು ವರಿದಿದೆ. ಬೃಹತ್ ಗಾತ್ರದ ತೆರೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕೆಲವೆಡೆ ಹಾನಿ ಸಂಭವಿಸಿದೆ.