ಹೊಸದಿಲ್ಲಿ : ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಫ್ಯಾಕ್ಟರಿಯೊಂದರಲ್ಲಿ ಕಳ್ಳತನ ನಡೆಸಿದ ಶಂಕೆಯಲ್ಲಿ ದಲಿತ ವ್ಯಕ್ತಿಯೋರ್ವನನ್ನು ನಿರ್ದಯವಾಗಿ ಹೊಡೆದು ಸಾಯಿಸಲಾಗಿರುವ ಘಟನೆ ನಿನ್ನೆ ಭಾನುವಾರ ನಡೆದಿದ್ದು ಈ ಅಮಾನುಷ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಚಿತ್ರಿಕೆಯನ್ನು ಹಂಚಿಕೊಂಡಿರುವ ಗುಜರಾತ್ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮಿತ್ ಚಾವ್‌ಡಾ ಅವರು, ಅಮಾನುಷವಾಗಿ ಹೊಡೆದು ಸಾಯಿಸಲ್ಪಟ್ಟಿರುವ ದಲಿತ ವ್ಯಕ್ತಿಯ ಹೆಸರು ಮುಕೇಶ್ ವಾಣಿಯ ಎಂದು ಹೇಳಿದ್ದಾರೆ.
“ಮುಕೇಶ್ ವಾಣಿಯಾ ಫ್ಯಾಕ್ಟರಿ ಹೊರಗಿನ ಕಸವನ್ನು ಸಂಗ್ರಹಿಸುತ್ತಿದ್ದ. ಕಳವು ಗೈದ ಶಂಕೆಯಲ್ಲಿ ಆತನನ್ನು ಅಮಾನುಷವಾಗಿ ಹೊಡೆದು ಸಾಯಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಫ್ಯಾಕ್ಟರಿ ಆವರಣದಲ್ಲಿದ್ದ ಆತನ ಪತ್ನಿಯನ್ನು ಕೂಡ ಹೊಡೆದಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ದಲಿತ ವ್ಯಕ್ತಿಯನ್ನು ಅದೇ ಫ್ಯಾಕ್ಟರಿಯ ಮೂವರು ಕೆಲಸಗಾರರು ಹೊಡೆದು ಸಾಯಿಸಿದ್ದಾರೆ ಎಂದು ಅಲಹಾಬಾದ್ ಮಿರರ್ ವರದಿ ಮಾಡಿದೆ. ಇದನ್ನು ಅನುಸರಿಸಿ ಪೊಲೀಸರು ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡು ಇಬ್ಬರು ಫ್ಯಾಕ್ಟರಿ ಕೆಲಸಗಾರರನ್ನು ಬಂಧಿಸಿ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಮೃತ ವಾಣಿಯಾ ನ ಪತ್ನಿ ತನ್ನ ಕೆಲವು ಸಂಬಂಧಿಕರೊಂದಿಗೆ ಸ್ಥಳಕ್ಕೆ ಧಾವಿಸಿ ಬಂದಾಗಲೇ ಹಲ್ಲೆಕೋರರು ಹೊಡೆಯುವುದನ್ನು ನಿಲ್ಲಿಸಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ವಾಣಿಯಾ ನನ್ನು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿ ಆತ ಕೊನೆಯುಸಿರೆಳೆದನೆಂದು ವರದಿಯಾಗಿದೆ.