ದೋಟಿಹಾಳ: ಸಮೀಪದ ಮುದೇನೂರು ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ನಿವಾರಣ ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು ಹಾಜರಿಯಿಂದ ರದ್ದಾಯಿತು.
ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಾದ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಯಾದರೂ ಯಾವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರದಿದ್ದ ಕಾರಣಕ್ಕೆ ರದ್ದು ಮಾಡಬೇಕಾಯಿತು.
ಮಳೆಯಲ್ಲೇ ಕಾದು ಸುಸ್ತಾದ. ಸಾರ್ವಜನಿಕರು, ದಲಿತ ಮುಖಂಡರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
ನೀವು ತಾಲೂಕು ಅಧಿಕಾರಿಗಳು ಮಾಹಿತಿ ನೀಡಿದರೂ ಯಾಕೆ ಆಗಮಿಸಿಲ್ಲ. ಇದು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಕಾರ್ಯಕ್ರಮ ಮಾಡುತ್ತಿರುವುದು ತಪ್ಪು, ಹಿಂದೆ ಇದೇ ರೀತಿ ಜುಮಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಯಾವ ಅಧಿಕಾರಿಗಳು ಭಾಗವಹಿಸಿಲ್ಲ ಈಗ ಅದೇ ರೀತಿ ಅಧಿಕಾರಗಳು ಮಾಡುತ್ತಿದ್ದಾರೆ ಇದು ಅಸ್ಪೃಶ್ಯತೆಯ ನಿವಾರಣೆ ಕಾರ್ಯಕ್ರಮವು ಅಥವಾ ನಮಗೆ ಮಾಡುತ್ತಿರುವ ಅವಮಾನವೇ? ಎಂದು ದಲಿತ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಕಾರ್ಯಕ್ರಮಕ್ಕೆ ಆಗಮಿಸದ ತಾಲೂಕು ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು. ಇನ್ನು ಮುಂದೆ ಇದೇ ರೀತಿಯ ಕಾರ್ಯಕ್ರಮ ಮಾಡುವ ಅವಶ್ಯಕತೆ ನಮಗೆ ಇಲ್ಲ ಎಂದು ಮುಖಂಡರು ತಿಳಿಸಿದರು.